ಜಮ್ಮು: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿರುವ ಗಡಿ ನಿಯಂತ್ರಣಾ ರೇಖೆಯ ಬಳಿಯಲ್ಲಿ ಸುಮಾರು 450 ಕ್ರೂರ ಉಗ್ರರು ಸಕ್ರಿಯರಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಈ ಕುರಿತಂತೆ ಭಾರತೀಯ ಸೇನೆ ಮಾಹಿತಿ ಬಹಿರಂಗ ಪಡಿಸಿದ್ದು, ಎಲ್’ಒಸಿ ಬಳಿಯಲ್ಲಿ ಉಗ್ರರ ಸುಮಾರು 16 ಕ್ಯಾಂಪ್’ಗಳು ಕಾರ್ಯನಿರ್ವಹಿಸುತ್ತಿದ್ದು, 450ಕ್ಕೂ ಅಧಿಕ ಉಗ್ರರಿಗೆ ಅಗತ್ಯವಾಗಿರುವ ಮೂಲಭೂತ ಸೌಕರ್ಯಗಳನ್ನೂ ಸಹ ನಿರ್ವಹಣೆ ಮಾಡಲಾಗುತ್ತಿದೆ ಎಂದಿದೆ.
ಅದಕ್ಕೂ ಮಿಗಿಲಾದ ವಿಚಾರವೆಂದರೆ ಈ ಎಲ್ಲಾ ಕಾರ್ಯಗಳಿಗೂ ಪಾಕಿಸ್ಥಾನ ಸಹಕಾರ ನೀಡುತ್ತಿದೆ ಎಂಬ ಮಾಹಿತಿಯೂ ಸಹ ಹೊರಬಿದ್ದಿದೆ.
ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಪೀರ್ ಪಂಜಾಲ್’ನ ಉತ್ತರದ ಭಾಗದಲ್ಲಿ ಭಯೋತ್ಪಾದಕರ ಸಂಖ್ಯೆ ಹೆಚ್ಚಾಗಿದ್ದು, ಒಟ್ಟಾರೆ ಸುಮಾರು 350 ರಿಂದ 400 ಭಯೋತ್ಪಾದಕರು ಕಾಶ್ಮೀರ ಕಣಿವೆಯಲ್ಲಿ ಸಕ್ರಿಯರಾಗಿದ್ದಾರೆ. ಪಿರ್ ಪಂಜಾಲ್ ದಕ್ಷಿಣಕ್ಕೆ (ಜಮ್ಮು ಪ್ರದೇಶ) 50 ಭಯೋತ್ಪಾದಕರನ್ನು ಹೊಂದಿದ್ದೇವೆ. ಪಿರ್ ಪಂಜಾಲ್’ನ ದಕ್ಷಿಣ ಭಾಗದಲ್ಲಿರುವ ಹೆಚ್ಚಿನ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ ಎಂದಿದ್ದಾರೆ.
ಇನ್ನು, ಭದ್ರತೆ ಕುರಿತಂತೆ ಈ ಭಾಗದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಂತಹುದ್ದೇ ಪರಿಸ್ಥಿತಿಯನ್ನೂ ಸಹ ಎದುರಿಸಲು ಸೇನೆ ಸನ್ನದ್ಧವಾಗಿದೆ ಎಂದವರು ತಿಳಿಸಿದ್ದಾರೆ.
Discussion about this post