ಶಿಕಾರಿಪುರ: ಆರಂಭದಲ್ಲೇ ಹೇಳುತ್ತೇವೆ ನಿಜಕ್ಕೂ ಈ ವ್ಯವಸ್ಥೆಯಲ್ಲಿನ ಅವ್ಯವಸ್ಥೆಗೆ ಅಲ್ಲಿನ ಎಲ್ಲರೂ ತಲೆತಗ್ಗಿಸಬೇಕಿದೆ. ಮೂಲಭೂತ ಅವಶ್ಯಕತೆಯಾಗಿರುವ ನೀರನ್ನು ಎಂತಹ ಸ್ಥಿತಿಯಲ್ಲಿ ಪೂರೈಸಲಾಗುತ್ತಿದೆ ನೋಡಿ:
ಭೂಮಿಯ ಮೇಲೆ ಪ್ರತಿಯೊಂದು ಜೀವ ರಾಶಿಗಳಿಗೂ ಆಹಾರ, ಆರೋಗ್ಯ, ಗಾಳಿ, ಬೆಳಕು ಎಷ್ಟು ಅವಶ್ಯಕತೆಯೋ ಅಷ್ಟೇ ಅವಶ್ಯಕತೆಯಾಗಿ ಜೀವ ಜಲವಾದ ನೀರು ಅತ್ಯಮೂಲ್ಯವಾಗಿದೆ.
ಏನೂ ಅರಿಯದ ಪ್ರಾಣಿಗಳು ನೀರು ಹೇಗೇ ಇದ್ದರೂ ತಮ್ಮ ದಾಹ ತೀರಿಸುವ ಸಲುವಾಗಿ ಕುಡಿದು ದಾಹ ಕಡಿಮೆ ಮಾಡಿಕೊಳ್ಳುತ್ತವೆ. ಆದರೆ ಬುದ್ದಿ ಜೀವಿಗಳಾಗಿರುವ ಮಾನವರಾದ ನಾವು ನಮ್ಮ ಆರೋಗ್ಯ ದೃಷ್ಟಿಯಿಂದ ಉತ್ತಮ ಶುದ್ಧೀಕರಣ ಮಾಡಿದ ಮಿನರಲ್ ವಾಟರ್ ಸೇವನೆ ಮಾಡಲು ಬಯಸುತ್ತೇವೆ.
ಕಳೆದ ಒಂದು ತಿಂಗಳಿನಿಂದ ಉತ್ತಮ ಮಳೆಯಾಗುತಿದ್ದು, ಅನೇಕ ಕೆರೆ ಕಟ್ಟೆಗಳು ಕಲುಷಿತ ನೀರಿನಿಂದ ಕೂಡಿವೆ. ಅದೇರೀತಿ ತಾಲೂಕಿನ ಅಂಜನಾಪುರ ಕೆರೆಯೂ ಸಹ ಕಲುಷಿತ ನೀರಿನಿಂದ ಕೂಡಿದೆ. ಇಂತಹ ಪರಿಶುದ್ಧವಲ್ಲದ ವಿವಿಧ ರೀತಿಯ ಬ್ಯಾಕ್ಟೀರಿಯ, ಸೂಕ್ಷ್ಮಾಣುವಿರುವ ನೀರನ್ನು ಕುಡಿದರೆ ಎರಡೇ ದಿನದಲ್ಲೇ ಅನಾರೋಗ್ಯಕ್ಕೆ ತುತ್ತಾಗಿ ಅನೇಕ ರೀತಿಯ ಸಾಂಕ್ರಾಮಿಕ ಕಾಯಿಲೆಗಳಿಗೆ ಆಹ್ವಾನ ನೀಡಿದಂತಾಗುವುದರಲ್ಲಿ ಸಂದೇಹವಿಲ್ಲ.
ಆದರೆ ಪುರಸಭೆ ಹಾಗೂ ಆರೋಗ್ಯ ಇಲಾಖೆಯಿಂದ ಇಂತಹ ಅನಾಗರೀಕ ಅವೈಜ್ಞಾನಿಕ ಅಶುದ್ಧ ಕುಡಿಯುವ ನೀರು ಪಟ್ಟಣದ ಜನತೆಗೆ ಪುರಸಭೆಯಿಂದ ನಡೆಯುತ್ತಿದೆ.
ಪಟ್ಟಣದ ಜನತೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ನೀರು ಶುದ್ಧೀಕರಣ ಘಟಕವನ್ನು ಹಿಂದೆ ಆರಂಭಿಸಲಾಗಿತ್ತು. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಇಂತಹ ಒಂದು ಕ್ರಮ ಕೈಗೊಂಡು ನೀರು ಶುದ್ಧೀಕರಣ ಘಟಕವನ್ನು ಆಧುನಿಕರಿಸಿ ತಾಲ್ಲೂಕಿನ ಅಂಜನಾಪುರ ಕೆರೆಯಿಂದ ಶಿಕಾರಿಪುರಕ್ಕೆ ನೀರು ಪೂರೈಸುವ ಮೂಲಕ ಪಟ್ಟಣದ ಜನತೆಗೆ ಬೆಳಿಗ್ಗೆ ಮತ್ತು ಸಾಯಂಕಾಲ ಎರಡು ಹೊತ್ತು ಶುದ್ಧ ಕುಡಿಯುವ ನೀರನ್ನು ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ವಿಪರ್ಯಾಸದ ಸಂಗತಿ ಎಂದರೆ, ಪುರಸಭೆಯು ಕುಡಿಯುವ ನೀರನ್ನು ಶುದ್ಧೀಕರಣ ಘಟಕಕ್ಕೆ ರವಾನಿಸಿ ಶುದ್ಧಿಕರಿಸದೇ, ನೇರವಾಗಿ ಪ್ರತಿ ದಿನ ಬೆಳಿಗ್ಗೆ ಮತ್ತು ಸಾಯಂಕಾಲ ಎರಡು ಹೊತ್ತು ನೀರು ಪೂರೈಕೆ ಮಾಡುತ್ತಿದೆ.
ಆರೋಗ್ಯ ಇಲಾಖೆಯು ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ, ಪಟ್ಟಣದ ಸಾರ್ವಜನಿಕರಿಗೆ ಪರಿಸರದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಹೇಗಿದೆ ಎಂದು ಗಮನಿಸದೇ ಅದನ್ನು ನಿರ್ಲಕ್ಷಿಸಿದಂತೆ ಕಂಡು ಬರುತ್ತಿದೆ. ಅಂಜನಾಪುರ ಕೆರೆಯಿಂದ ಶುದ್ಧೀಕರಣ ಘಟಕಕ್ಕೆ ರವಾನಿಸದೆ ನೇರವಾಗಿ ಪಟ್ಟಣದ ಜನತೆಗೆ ನೀರುಣಿಸುವ ಕೆಲಸ ಮಾಡಲಾಗುತ್ತಿದೆ.
ಕಳೆದ 15-20 ದಿನಗಳಿಂದ ಅಶುದ್ಧ ಹಾಗೂ ಕುಡಿಯುವಾಗ ಕೆಟ್ಟ ವಾಸನೆ ಬರುತ್ತಿರುವ ನೀರನ್ನು ಪಟ್ಟಣದ ಜನತೆಗೆ ನೀರುಣಿಸುವ ಕೆಲಸ ಪುರಸಭೆಯಿಂದ ಮಾಡಲಾಗುತ್ತಿದೆ ಇದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಗಮನಿಸುತ್ತಿಲ್ಲ ಎಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಬಾಲಾಜಿರಾವ್ ಅವರು ಪುರಸಭೆಯ ಮುಖ್ಯಾಧಿಕಾರಿಯಾಗಿ ಇರುವಾಗಲೂ ಇದೇರೀತಿ ಅಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು. ಹಿಂದೆ ಈ ಬಗ್ಗೆ ಸುದ್ಧಿಯಾದಾಗ ಎಚ್ಚೆತ್ತ ಆರೋಗ್ಯ ಇಲಾಖೆ, ಪುರಸಭೆಯ ಅಧಿಕಾರಿಗಳು ಪ್ರತಿ ದಿನ ಆಲಂ ಮತ್ತು ವಾರಕ್ಕೊಮ್ಮೆ ಬ್ಲೀಚಿಂಗ್ ಪೌಡರ್ ಮಿಶ್ರಿತ ನೀರು ಸರಬರಾಜು ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈಗ ಮತ್ತೆ ಅದೇ ಪರಿಸ್ಥಿತಿ ಎದುರಾಗಿದೆ.
ಇನ್ನು ಈ ಬಗ್ಗೆ ಮುಖ್ಯಾಧಿಕಾರಿ ನಾಗರಾಜ್ ಮಾತನಾಡಿದ್ದು, ನಾವು ಶುದ್ಧೀಕರಣ ಘಟಕದಲ್ಲಿ ಪ್ರತೀ ದಿನ ಹತ್ತು ಕ್ಯಾಂಡಲ್ ಆಲಂ ಬಳಸಿ ನೀರನ್ನು ಶುದ್ಧೀಕರಿಸುತ್ತಿದ್ದೇವೆ. ಆದರೂ ನೀರು ಶುದ್ಧೀಕರಣವಾಗುತ್ತಿಲ್ಲ ಎಂದು ಕೈ ಚೆಲ್ಲಿದ್ದಾರೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಕಣ್ಣಿದ್ಧೂ ಕುರುಡರಾದಂತೆ ಜಾಣತನಕ್ಕೆ ಜಾರಿರುವುದು ಸಾರ್ವಜನಿಕರಿಗೆ ಅಸಮಾಧಾನಕ್ಕೆ ಕಾರಣವಾಗಿದೆ. ಪುರಸಭೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಆದಷ್ಟು ಶೀಘ್ರ ಸರಿಪಡಿಸಿಕೊಳ್ಳದಿದ್ದರೆ, ಸಾರ್ವಜನಿಕರು ವಿವಿಧ ರೀತಿಯ ಸಂಘ ಸಂಸ್ಥೆಗಳು ಇಲಾಖೆಗಳ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡು ಬೀದಿಗಿಳಿದು ಹೋರಾಟ ನಡೆಸುವುದರಲ್ಲಿ ಸಂದೇಹವಿಲ್ಲ.
ವಿಶೇಷ ವರದಿ: ರಾಜಾರಾವ್ ಜಾಧವ್, ಶಿಕಾರಿಪುರ
Discussion about this post