ಲಕ್ನೋ: ಗರ್ಭಿಣಿ ಯುವತಿಯೊಬ್ಬಳು ಯೂಟ್ಯೂಬ್ ನೋಡಿ ತಾನೇ ಹೆರಿಗೆ ಮಾಡಿಕೊಳ್ಳಲು ಯತ್ನಿಸಿದ್ದು, ಇದು ವಿಫಲವಾಗಿ ತಾಯಿ ಹಾಗೂ ಮಗು ಇಬ್ಬರೂ ಸಾವಿಗೀಡಾದ ಧಾರುಣ ಘಟನೆ ನಡೆದಿದೆ.
ಉತ್ತರ ಪ್ರದೇಶದ ಗೋರಖ್’ಪುರದಲ್ಲಿ ಈ ಘಟನೆ ನಡೆದಿದ್ದು, ಸಾವಿಗೀಡಾದ ಯುವತಿ ಮದುವೆಗೆ ಮುನ್ನವೇ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ.
ಈ ಕುರಿತಂತೆ ಸ್ಥಳೀಯ ಪೊಲೀಸರು ರಾಷ್ಟ್ರೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 26 ವರ್ಷದ ಅವಿವಾಹಿತ ಮಹಿಳೆ ಯೂಟ್ಯೂಬ್’ನಲ್ಲಿ ಪ್ರಸವದ ವೀಡಿಯೋ ನೋಡುತ್ತಲೇ ಆಕೆ ಸ್ವಯಂ ಹೆರಿಗೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಈ ಪ್ರಯತ್ನದಲ್ಲಿ ಆಕೆ ವಿಫಲವಾಗಿದ್ದು ತಾಯಿ ಹಾಗೂ ಮಗು ಇಬ್ಬರೂ ಮೃತರಾಗಿದ್ದಾರೆ ಎಂದಿದ್ದಾರೆ.
ವೈದ್ಯರ ಸಹಾಯವಿಲ್ಲದೇ ಸ್ವತಃ ಮಗುವಿಗೆ ಜನ್ಮ ನೀಡುವುದು ಹೇಗೆ ಎಂಬ ವಿಡಿಯೋ ನೋಡಿರುವ ಆಕೆ, ಅದೇ ರೀತಿಯ ಇತರ ಸುರಕ್ಷಿತ ಹೆರಿಗೆಯ ವಿಡಿಯೋವನ್ನು ಯೂ ಟ್ಯೂಬ್‌ನಲ್ಲಿ ವೀಕ್ಷಿಸಿರುವ ವಿಚಾರ ಆಕೆ ಬಳಸುತ್ತಿರುವ ಸ್ಮಾರ್ಟ್ ಫೋನ್ ಮೂಲಕ ಗೊತ್ತಾಗಿದೆ.
ಆತಂಕಕಾರಿ ವಿಚಾರವೆಂದರೆ ಮಹಿಳೆಯ ಮೃತದೇಹದ ಬಳಿ ಕತ್ತರಿ, ಬ್ಲೇಡ್ ಹಾಗೂ ಕೆಲವು ದಾರಗಳು ಪತ್ತೆಯಾಗಿವೆ. ಮಹಿಳೆ ಯೂ ಟ್ಯೂಬ್‌ನ್ನು ವೀಕ್ಷಿಸಿ ಮಗುವಿಗೆ ಜನ್ಮ ನೀಡಲು ಯತ್ನಿಸಿರುವುದು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಯುವತಿ ಬಾಡಿಗೆ ಪಡೆದಿದ್ದ ಕೊಠಡಿಯ ಹೊರಗೆ ರಕ್ತ ಹರಿದಿದ್ದನ್ನು ಗಮನಿಸಿದ ನೆರೆ ಮನೆಯವರು ಮನೆ ಮಾಲಿಕರಿಗೆ ಮಾಹಿತಿ ನೀಡಿದ್ದರು.
ಮನೆ ಮಾಲಿಕರು ಮನೆಯ ಬಾಗಿಲು ಒಡೆದು ನೋಡಿದಾಗ ಮಹಿಳೆ ಹಾಗೂ ನವಜಾತ ಶಿಶು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
Discussion about this post