ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರತೀಯ ರೈಲ್ವೆ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಸಾಧನೆಯೊಂದನ್ನು ಭಾರತೀಯ ರೈಲ್ವೆ ಖಾತೆಗಳ ಸೇವೆಯ ಅಧಿಕಾರಿಯೊಬ್ಬರು ಮಾಡಿದ್ದು, ಇಡೀ ಇಲಾಖೆಯೇ ಗೌರವವನ್ನು ಹೆಚ್ಚಿಸಿದೆ. ಇಂತಹ ಸಾಧನೆ ಮಾಡಿದ ಅಧಿಕಾರಿಯೇ ಭಾರತೀಯ ರೈಲ್ವೆ ಖಾತೆಗಳ ಸೇವೆಯ ಬೆಂಗಳೂರು ಹಿರಿಯ ವಿಭಾಗೀಯ ಹಣಕಾಸು ವ್ಯವಸ್ಥಾಪಕರಾದ ಶ್ರೇಯಸ್ ಹೊಸೂರು.
ಹೌದು…ದೃಢ ನಿಶ್ಚಯ ಹಾಗೂ ಸಹನಶೀಲತೆಯ ಅದ್ಭುತ ಸಾಧನೆಯಲ್ಲಿ ಈ ಅಧಿಕಾರಿ ಹೊಸ ಇತಿಹಾಸ ನಿರ್ಮಿಸಿದ್ದು, ರೈಲ್ವೆ ಇಲಾಖೆಗೆ ಮಾತ್ರವಲ್ಲ ರಾಜ್ಯ ಹಾಗೂ ದೇಶ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ.
ಏನಿದು ಸಾಧನೆ?
ಶ್ರೇಯಸ್ ಹೊಸೂರು ಅವರು ಐಕಾನಿಕ್ ಮ್ಯಾನ್ ಹ್ಯಾಟನ್ 20 ಬ್ರಿಡ್ಜಸ್ ಸ್ವಿಮ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಈ ಸಾಧನೆ ಮಾಡಿದ ಒಟ್ಟು ಹನ್ನೆರಡನೇ ಭಾರತೀಯರು ಹಾಗೂ ಮೊದಲ ಸರ್ಕಾರಿ ಅಧಿಕಾರಿ ಎನಿಸಿದ್ದಾರೆ.

ನ್ಯೂಯಾರ್ಕ್ ಓಪನ್ ವಾಟರ್ (NYOW) ಆಯೋಜಿಸುವ ಮ್ಯಾನ್ ಹ್ಯಾಟನ್ 20 ಬ್ರಿಡ್ಜಸ್ ಸ್ವಿಮ್ ವಿಶ್ವದ ಅತ್ಯಂತ ಪ್ರತಿಷ್ಠಿತ ಮ್ಯಾರಥಾನ್ ಈಜು ಸ್ಪರ್ಧೆಗಳಲ್ಲಿ ಒಂದಾಗಿದೆ. ಇಲ್ಲಿ ಭಾಗವಹಿಸುವವರನ್ನು ಮ್ಯಾನ್ ಹ್ಯಾಟನ್ ದ್ವೀಪದ ಸಂಪೂರ್ಣ ಸುತ್ತು ಈಜಲು ಆಹ್ವಾನಿಸುತ್ತದೆ. ಈ ಮಾರ್ಗವು ಬ್ರೂಕ್ಲಿನ್ ಬ್ರಿಡ್ಜ್ ಹಾಗೂ ಮ್ಯಾನ್ ಹ್ಯಾಟನ್ ಬ್ರಿಡ್ಜ್ ಸೇರಿದಂತೆ ಇಪ್ಪತ್ತು ಸೇತುವೆಗಳ ಅಡಿಯಲ್ಲಿ ಸಾಗುತ್ತದೆ. ಅಲೆಗಳು ಅಸ್ಥಿರವಾಗಿರುವುದು, ಜಲಪ್ರವಾಹಗಳು ತೀವ್ರವಾಗಿರುವುದು ಹಾಗೂ ಹರಿವುಗಳು ಬದಲಾದಂತೆ ಸಾಗುವುದು ಈ ಈಜನ್ನು ಮಾನಸಿಕ ಹಾಗೂ ದೈಹಿಕವಾಗಿ ದೊಡ್ಡ ಪರೀಕ್ಷೆಯಾಗಿಸುತ್ತದೆ.
ಶ್ರೇಯಸ್ ಅವರ ಈ ಸಾಧನೆಯ ರೈಲ್ವೆ ಇಲಾಖೆಗೆ ಇದೊಂದು ಅತ್ಯಂತ ಹೆಮ್ಮೆ ಪಡುವ ಕ್ಷಣವಾಗಿದೆ. ಇದಕ್ಕೂ ಮುನ್ನ, 2022ರಲ್ಲಿ ಶ್ರೇಯಸ್ ಅವರು ರೈಲ್ವೆ ಇಲಾಖೆಯಿಂದ ಮೊದಲ ಬಾರಿಗೆ ಮತ್ತು ಯೂನಿಫಾರ್ಮ್ ಧರಿಸದ ಸರ್ಕಾರಿ ಸೇವೆಯಿಂದ ಮೊದಲ ವ್ಯಕ್ತಿಯಾಗಿ ಐರನ್ಮ್ಯಾನ್ ಟ್ರಯಥ್ಲಾನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಸ್ಪರ್ಧೆಯಲ್ಲಿ 3.8 ಕಿಮೀ ಈಜು, 180 ಕಿಮೀ ಸೈಕ್ಲಿಂಗ್ ಹಾಗೂ 42.2 ಕಿಮೀ ಓಟವನ್ನು ಒಟ್ಟು 13 ಗಂಟೆ 23 ನಿಮಿಷಗಳಲ್ಲಿ ಮುಗಿಸಿದ್ದಾರೆ.
ರೈಲ್ವೆ ಇಲಾಖೆ ಮಾತ್ರವಲ್ಲ ರಾಜ್ಯವೇ ಹೆಮ್ಮೆಪಡುವಂತಹ ಸಾಧನೆ ಮಾಡಿರುವ ಶ್ರೇಯಸ್ ಹೊಸೂರು ಅವರನ್ನು ಕಲ್ಪ ನ್ಯೂಸ್ ಅಭಿನಂದಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post