ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವಿಪ್ರ ಸಮಾಜದ ಇತಿಹಾಸದ ಪರ್ವಕಾಲವನ್ನೆಬಹುದಾದ ಈ ಶತಮಾನದಲ್ಲಿ ಹಿಂದೂ ಸಮಾಜದ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾದವು. ಐತಿಹಾಸಿಕ ಕಾರಣಗಳಿಂದ ಹಿಂದೂ ಸಮಾಜದ ಮೇಲ್ಪದರದಲ್ಲಿದ್ದ ಬ್ರಾಹ್ಮಣ ಸಮಾಜ ಅನೇಕ ಒತ್ತಡಗಳಿಗೆ ಸಿಕ್ಕಿ ತನ್ನ ಸ್ವರೂಪವನ್ನೇ ಬದಲಾಯಿಸಿತೊಡಗಿತು. ಸಂಪ್ರದಾಯ ಮತ್ತು ಸುಧಾರಣೆಗಳ ನಡುವೆ ನಡೆಯುತ್ತಿದ್ದ ಸಂಘರ್ಷ, ಬ್ರಾಹ್ಮಣ ಸಮಾಜದ ಮಠಗಳಂತಹ ಧಾರ್ಮಿಕ ಸಂಸ್ಥೆಗಳ ಮೇಲೆಯೂ ತನ್ನ ಪ್ರಭಾವವನ್ನು ಬೀರತೊಡಗಿತು.
ಇಂತಹ ಪರ್ವಕಾಲದಲ್ಲಿ ಕೇವಲ ಪರಂಪರೆಯ ದಾರಿಯನ್ನೇ ತುಳಿಯದೆ, ಆದರೆ ಪರಂಪರೆಯಲ್ಲಿ ಅತ್ಯಗತ್ಯವಾದ ಮತ್ತು ಸತ್ವಯುತವಾದ ಅಂಶಗಳನ್ನು ಉಳಿಸಿಕೊಂಡು, ಕಾಲಧರ್ಮಕ್ಕೆ ಅನುಗುಣವಾಗಿ ಬ್ರಾಹ್ಮಣ ಸಮಾಜಕ್ಕೆ ಅವಶ್ಯಕವಾದ ಸುಧಾರಣೆಗಳನ್ನು ತರಬಲ್ಲ ಧಾರ್ಮಿಕ ನಾಯಕರ, ಮಠಾಧಿಪತಿಗಳ ಅಗತ್ಯವಿದ್ದ ಕಾಲವದು. ಈ ಸನ್ನಿವೇಶದಲ್ಲಿ ಮಾಧ್ವ ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ನೀಡಬಲ್ಲ ಶಕ್ತಿಯನ್ನು, ವ್ಯಕ್ತಿಯನ್ನು, ಶ್ರೀಮಧ್ವಾಚಾರ್ಯರ ಮೂಲ ಸಂಸ್ಥಾನಗಳಲ್ಲಿ ಪ್ರಮುಖವಾದ ಶ್ರೀ ವ್ಯಾಸರಾಜಮಠ, ಮಾಧ್ವಸಮಾಜಕ್ಕೆ ನೀಡಿತು. ಅವರೇ ಶ್ರೀ ಮಠದ ಮೂವತ್ತೇಳನೆಯ ಸಂಸ್ಥಾನಾಧಿಪತಿಗಳಾದ ಪರಮಪೂಜ್ಯ ಶ್ರೀಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು.
ಶ್ರೀ ವ್ಯಾಸರಾಜ ವಿದ್ಯಾ ಕರ್ಣಾಟಕ ಸಿಂಹಾಸನದಲ್ಲಿ ಈಗಿನ ಅಧಿಪತಿಗಳಿಗೆ ಪರಮೇಷ್ಟಿ ಗುರುಗಳಾಗಿ ಮೆರೆದ ಕೀರ್ತಿಶೇಷ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದಂಗಳವರ ವ್ಯಕ್ತಿತ್ವವು ಬಹುಮುಖ ಪ್ರತಿಭೆಗಳಿಂದ ಕೂಡಿದುದು.
ಶ್ರೀ ವಿದ್ಯಾಪ್ರಸನ್ನ ತೀರ್ಥರ ಪೂರ್ವಾಶ್ರಮದ ಹೆಸರು ನರಸಿಂಹಾಚಾರ್ಯರು. ಪೂರ್ವಾಶ್ರಮದ ರತ್ನಾಕರತೀರ್ಥರ ಏಕೈಕ ಪುತ್ರರು. ಬಾಲ್ಯದಲ್ಲಿಯೇ ರತ್ನಾಕರತೀರ್ಥರಲ್ಲಿ ಸಂಸ್ಕೃತ ವಿದ್ಯಾಭ್ಯಾಸವನ್ನು ಮಾಡಿದ್ದರು. ನಂತರ ತಮ್ಮ ಮಾತಾಶ್ರೀಗಳಾದ ಸಾಧ್ವೀಮಣಿ ಸತ್ಯಭಾಮಮ್ಮನವರ ಜೊತೆಯಲ್ಲಿ ಮೈಸೂರಿಗೆ ಬಂದರು. ಅಲ್ಲಿಯೇ ಪ್ರೌಢ ವಿದ್ಯಾಭ್ಯಾಸ ಬಿಎ, ಎಲ್’ಎಲ್’ಬಿ ಪದವಿಯನ್ನು ಪಡೆದರು. ವಕೀಲ ವೃತ್ತಿಯಲ್ಲಿ ಅಲ್ಪ ಕಾಲದಲ್ಲಿ ಮುಂದುವರೆದರು. ಅತಿ ಚಿಕ್ಕ ವಯಸ್ಸಿನಲ್ಲೇ ತಮ್ಮ ಅಕ್ಕನ ಮಗಳಾದ ಶ್ರೀಮತಿ ಲಕ್ಷ್ಮಮ್ಮ ಎಂಬುವವರನ್ನು ಮದುವೆಯಾಗಿ ಒಂದು ಹೆಣ್ಣು ಮತ್ತು ಒಂದು ಗಂಡು ಮಗುವನ್ನು ಪಡೆದರು.
ಶ್ರೀರತ್ನಾಕರ ತೀರ್ಥರ ಕರಕಮಲ ಸಂಜಾತರಾದ ಶ್ರೀವಿದ್ಯಾವಾರಿಧಿತೀರ್ಥರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು. ಶ್ರೀಗಳವರು ಇವರನ್ನು ‘ಗುರುಪುತ್ರರು ಎಂದೇ ಕರೆಯುತ್ತಿದ್ದರು. ಶ್ರೀಗಳವರು ಇವರನ್ನು ತಮ್ಮ ಸನ್ಯಾಸ ಶಿಷ್ಯರನ್ನಾಗಿ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದರು. ಇದಕ್ಕೆ ಅವರ ತಾಯಿಯವರು ಒತ್ತಾಸೆ ನೀಡಿ ಅನುಮತಿಯನ್ನು ಕೊಟ್ಟರು. ಒಂದು ದಿನ ಶ್ರೀಗಳವರು ಶ್ರೀನರಸಿಂಹಾಚಾರ್ಯರಿಗೆ ‘ಗುರುಪುತ್ರರಾದ ನೀವೇ ಮುಂದಿನ ಪೀಠಾಧಿಪತಿಗಳಾಗಬೇಕೆಂದೂ, ನಿಮ್ಮೊಡನೆ ನಾನು ಜೊತೆಯಲ್ಲಿದ್ದು ನಿಮ್ಮ ಮಠಾಧಿಪತ್ಯವನ್ನು ನೋಡಬೇಕು ಎಂದರು.
ವಕೀಲ ವೃತ್ತಿಯಲ್ಲಿ ಹೆಸರು ಗಳಿಸಿದ್ದ ಇವರು ಸಂಸಾರ ಜೀವನವನ್ನು ತೊರೆದು ಸನ್ಯಾಸಾಶ್ರಮ ಪಡೆಯಲು ಮುಜುಗರಪಟ್ಟರು. ಆದರೆ ಗುರುವಾಕ್ಯ ಮೀರಲಾರದೆ ಶ್ರೀಗಳವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದ ಇವರು ಒಪ್ಪಲೇ ಬೇಕಾಯಿತು. ಒಂದು ಒಳ್ಳೆಯ ದಿವಸ ಇವರಿಗೆ ಸನ್ಯಾಸಾಶ್ರಮ ಕೊಟ್ಟು ‘ಶ್ರೀವಿದ್ಯಾಪ್ರಸನ್ನತೀರ್ಥರು ಎಂದು ನಾಮಕರಣ ಮಾಡಿದರು. ಶ್ರೀಗಳವರು ತಮ್ಮ ನೂತನ ಶಿಷ್ಯರೊಂದಿಗೆ ಬಹಳ ಕಾಲವಿದ್ದು ಸನ್ಯಾಸಾಶ್ರಮ ಧರ್ಮವನ್ನು ಬೋಧಿಸಿ ಪೂಜಾಕೈಂಕರ್ಯವನ್ನು ಹೇಳಿಕೊಟ್ಟರು. ಅಲ್ಲದೆ ವಯೂರು ಶ್ರೀನಿವಾಸಾಚಾರ್ಯರಲ್ಲೂ ಹೆಚ್ಚಿನ ವ್ಯಾಸಂಗವನ್ನು ಮಾಡಿಸಿದರು.
ಇವರ ಬುದ್ಧಿಕುಶಲತೆ ಮಾತಿನ ವೈಖರಿ ಹಾಗೂ ಕಲ್ಪನಾಶಕ್ತಿಯನ್ನು ಕಂಡು ಶ್ರೀಗಳವರು ಆನಂದ ಪಡುತ್ತಿದ್ದರು. ಶ್ರೀಗಳವರು ಬೃಂದಾವನಸ್ಥರಾದ ಮೇಲೆ ಸಂಸ್ಥಾನದ ಆಡಳಿತ ಬುದ್ಧಿವಂತರೂ ಆದ ಇವರಿಗೆ ಆಡಳಿತ ಅಷ್ಟು ಕಷ್ಟವಾಗಲಿಲ್ಲ.
ದೇಶ ಪರ್ಯಟನೆಗಾಗಿ ತಮ್ಮ ಶಿಷ್ಯರುಗಳೊಂದಿಗೆ ದಕ್ಷಿಣ ದೇಶದ ಕೆಲವು ಸ್ಥಳಗಳನ್ನು ಸಂದರ್ಶಿಸಿದರು. ಇವರ ಅಲ್ಪಕಾಲದ ಸಂಚಾರದಲ್ಲಿ ವೇದ ಪ್ರವಚನ ಹಾಗೂ ಮಧ್ವಮತದ ತತ್ವಗಳನ್ನು ಉಪದೇಶಿಸಿದರು. ಹಾಗೂ ಉಪನ್ಯಾಸಗಳನ್ನು ಮಾಡಿದರು. ಇದರಿಂದ ಹೆಚ್ಚಿನ ಶಿಷ್ಯರನ್ನು ತಮ್ಮವರನ್ನಾಗಿ ಮಾಡಿಕೊಂಡರು. ತಮ್ಮ ಸಂಚಾರಕಾಲದಲ್ಲಿ ಸ್ಥಿರ-ಚರ ಆಸ್ತಿಗಳನ್ನು ಗುರ್ತಿಸಿ ಕೈಬಿಟ್ಟು ಹೋಗುತ್ತಿದ್ದ ಆಸ್ತಿಗಳಿಗೆ ಪುನಶ್ಚೇತನ ನೀಡಿದುದಲ್ಲದೆ. ಕೈಬಿಟ್ಟು ಹೋಗಿದ್ದ ಗ್ರಾಮ ಭೂಮಿಗಳನ್ನು ತಮ್ಮದನ್ನಾಗಿ ಮಾಡಿಕೊಂಡು ನೋಂದಣಿ ಮಾಡಿಸಿ ಭದ್ರಮಾಡಿಕೊಂಡರು.
ಇವರಿಗೆ ಮಧ್ವ ಮತ ಪ್ರಚಾರಕ್ಕಾಗಿ ದೇಶ ಸಂಚಾರ ಮಾಡಬೇಕೆಂಬ ಅಸೆಯೇನೋ ಇತ್ತು. ಆದರೆ ಅದೇ ಸಮಯದಲ್ಲಿ ಇಂಡಿಯಾ ಪಾಕಿಸ್ಥಾನ ಯುದ್ಧವು ಪ್ರಾರಂಭವಾದುದರಿಂದ ತಮ್ಮ ಸಂಚಾರವನ್ನು ಸ್ಥಗಿತಗೊಳಿಸಿ ಆ ಸಮಯದಲ್ಲಿ ದೇವರನಾಮಗಳನ್ನು ರಚಿಸಿ ಅದನ್ನು ತಮ್ಮ ಶಿಷ್ಯರಿಂದ ಹಾಡಿಸಿ ಸಂತೋಷ ಪಡುತ್ತಿದ್ದರು. ಇವರು ಸುಮಾರು ಮುನ್ನೂರು ದೇವರನಾಮಗಳನ್ನು ರಚಿಸಿದ್ದಾರೆ. ಇದರೊಂದಿಗೆ ವೇದ ಪ್ರವಚನ ಹಾಗೂ ಶಿಷ್ಯರಿಗೆ ವೇದ ಪಾಠಗಳನ್ನು ಹೇಳಿಕೊಡುತ್ತಿದ್ದರು. ಶ್ರೀಕೃಷ್ಣನ ಪೂಜೆಗಾಗಿ ಅಪಾರವಾದ ಹೂದೋಟವನ್ನು ನಿರ್ಮಿಸಿದರು.
‘ವ್ಯಾಸತೀರ್ಥ ಎಂಬ ಹೆಸರಿನ ಕೊಳವನ್ನು ನಿರ್ಮಿಸಿ ಆ ಕೊಳದ ನೀರನ್ನು ಹೂ ತೋಟಕ್ಕೆ ಉಪಯೋಗಿಸುತ್ತಿದ್ದರು. ಜ್ಞಾನಾರ್ಜನೆಯನ್ನು ಉತ್ತಮ ಪಡಿಸಲು ಒಂದು ಪುಸ್ತಕ ಭಂಡಾರವನ್ನು ಸ್ಥಾಪಿಸಿದರು. ಎಳೆಯ ಮಕ್ಕಳಿಗೂ ಅರ್ಥವಾಗುವ ಹಾಗೆ ಪಾಠ ಹೇಳಿಕೊಡುತ್ತಿದ್ದರು. ವೇದಾಂತ, ಸಾಹಿತ್ಯ, ವ್ಯಾಕರಣದ ಅಧ್ಯಯನಕ್ಕಾಗಿ ಪಂಡಿತರುಗಳನ್ನು ನೇಮಿಸಿದ್ದರು.
ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ದ್ವೈತ ವೇದಾಂತವನ್ನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕೊಡುತ್ತಿದ್ದುದಲ್ಲದೇ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆಯಾದವರಿಗೆ ಕಲಿತು ಸ್ಪಷ್ಟವಾದ ಉಚ್ಚಾರಣೆಯೊಂದಿಗೆ ಚೆನ್ನಾಗಿ ಹೇಳಿದವರಿಗೆ ಬಹುಮಾನವನ್ನು ಕೊಡುತ್ತಿದ್ದರು. ಬೆಂಗಳೂರಿನ ವಿಜಯ ಕಾಲೇಜು ಹಾಗೂ ಮೈಸೂರಿನ ಶಾರದಾ ವಿಲಾಸ ಕಾಲೇಜುಗಳಿಗೆ ಹೇರಳವಾಗಿ ಧನಸಹಾಯವನ್ನು ಮಾಡಿದ್ದಾರೆ. ತಮ್ಮ ಶಿಷ್ಯರುಗಳಿಗೆ ಧನಸಹಾಯದಿಂದ ಮಂಡ್ಯದಲ್ಲಿ ಒಂದು ಮಠವನ್ನು ಕಟ್ಟಿಸಿ ಶ್ರೀಗೋಪಾಲಕೃಷ್ಣ ದೇವರು ಹಾಗೂ ಪ್ರಾಣದೇವರನ್ನು ಪ್ರತಿಷ್ಠಾಪನೆ ಮಾಡಿದರು. ಬೆಂಗಳೂರು, ತಿರುಚನಾಪಳ್ಳಿ, ಕರೂರು, ಶ್ರೀರಂಗ ಮುಂತಾದ ಸ್ಥಳಗಳಲ್ಲಿ ಮಧ್ವ ಸಂಘವನ್ನು ಸ್ಥಾಪಿಸಿದರು ಅಖಿಲ ಭಾರತ ಮಾಧ್ವ ಮಹಾಮಂಡಲದ ಅಸ್ತಿತ್ವಕ್ಕೆ ಮೂಲಕಾರಣರಾಗಿದ್ದರು. ಅಷ್ಟೇ ಅಲ್ಲದೆ ಅದರ ಅಧ್ಯಕ್ಷ ಪದವಿಯನ್ನು ಪಡೆದರು.
ಜನರ ಕಷ್ಟ ಸುಖಗಳನ್ನು ಆಲಿಸಿ ಅದಕ್ಕೆ ಪರಿಹಾರವನ್ನು ನೀಡುತ್ತಿದ್ದರು. ಅಷ್ಟೇ ಅಲ್ಲದೆ ಶ್ರೀಮಠದ ಶಿಷ್ಯರ ಗಂಡು ಮಕ್ಕಳಿಗೆ ಉಪನಯನವನ್ನು ಮಾಡಿ ‘ಚಂದ್ರಿಕಾ ಗುರುಕುಲವನ್ನು ಸ್ಥಾಪಿಸಿ ಗುರುಕುಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಸ್ತೋತ್ರ, ವೇದ, ಶಾಸ್ತ್ರಗಳ ಪಾಠವನ್ನು ಬೋಧಿಸುತ್ತಿದ್ದರು. ಅದರೊಂದಿಗೆ ಲೌಕಿಕ ವಿದ್ಯೆಗೆ ಬೇಕಾದ ಪಾಠವನ್ನು ಪದವಿ ತರಗತಿಯವರೆಗೆ ಬೋಧಿಸುತ್ತಿದ್ದರು. ನಂತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರಿ ನೌಕರಿಯನ್ನು ಕೊಡಿಸಿದರು. ಮಠದೊಳಗಿನ ಆಚಾರ ವಿಚಾರಗಳೇನೇ ಇದ್ದರೂ ಹೊರ ಪ್ರಪಂಚದಲ್ಲಿ ಹೇಗಿರಬೇಕೋ ಹಾಗೆ ವ್ಯಾವಹಾರಿಕವಾಗಿ ಇದು ಒಂದು ಪಂಗಡಕ್ಕೆ ಮಾತ್ರ ಸೇರಿದ ಗುರುಗಳಾಗಿರದೆ ಎಲ್ಲ ಪಂಗಡದವರಿಗೂ ಬೇಕಾಗಿದ್ದು ಅವರಿಂದ ವಿಶ್ವಾಸ, ಪ್ರೀತಿ ಭಕ್ತಿಯನ್ನು ಪಡೆದಿದ್ದರು.
ಶ್ರೀಪಾದಂಗಳವರು ವಿಚಾರಶೀಲರು. ಜೀವನ ವಿಕಾಸಕ್ಕೆ ವಿಚಾರಶೀಲತೆಯೂ ಅಗತ್ಯ. ವಿಜ್ಞಾನವು ಆಧ್ಯಾತ್ಮದ ನಾಶಕ್ಕೆ ಕಾರಣವಾಗುವುದೆಂಬುದು ತಪ್ಪು ಕಲ್ಪನೆ ಎಂಬುದು ಅವರ ಅನಿಸಿಕೆ. ಆಧ್ಯಾತ್ಮವು ವಿಜ್ಞಾನದ ಮಟ್ಟಕ್ಕೆ ಪ್ರಚಾರವಾಗಬೇಕು. ವಿಜ್ಞಾನ, ಆಧ್ಯಾತ್ಮಗಳು ಪರಸ್ಪರ ಪೂರಕವಾಗಿ ಸಮವಾಗಿ ಕೈಗೂಡಿಸಿ ಬೆಳೆದರೆ, ಅದು ಮನುಕುಲದ ಬಾಳು ಬಂಗಾರವಾಗಲು ಕಾರಣವಾಗುವುದು. ಆಧ್ಯಾತ್ಮದ ಸಮಸ್ಯೆಗಳನ್ನೂ ವೈಚಾರಿಕತೆಯ ಒರೆಗಲ್ಲಿಗೆ ಹಚ್ಚಬೇಕು ಎಂಬುದು ಅವರ ವಿಚಾರಸರಣಿ.
ಇವರು ಶಾಸ್ತ್ರನಿಷ್ಣಾತರೂ, ಉತ್ತಮ ಕವಿಗಳೂ, ಕೃತಿಕಾರರೂ, ಬದುಕಿನ ದಾರ್ಶನಿಕರೂ, ವಿಚಾರಶೀಲರೂ, ವಾಗ್ಮಿಗಳೂ, ಆಗಿದ್ದವರು. ಇವರ ಕಾವ್ಯ ಪ್ರತಿಭೆಗೆ ಕೈಗನ್ನಡಿಯಾಗಿ, ‘‘ವೈಕುಂಠ ವರ್ಣನೆ ‘‘ಬದರಿಕಾಶ್ರಮ ವರ್ಣನೆ ‘‘ಸುಮಧ್ವವಿಜಯ ಸಾರಸಂಗ್ರಹ ಕಿರುಕಾವ್ಯಗಳು ಮೂಡಿ ಬಂದಿವೆ. ಶ್ರೀಪಾದಂಗಳವರು, ವೇದಾಂತಶಾಸ್ತ್ರ ನಿಷ್ಣಾತರಾಗಿ, ಹಲವಾರೆಡೆಗಳಲ್ಲಿ, ಹಲವಾರು ಬಾರಿ, ಭಾಷ್ಯ, ಚಂದ್ರಿಕಾ, ಸುಧಾ, ಗೀತಾ, ಮಹಾಪುರಾಣಗಳ ಪ್ರವಚನಗಳನ್ನು ಜರುಗಿಸಿದ್ದಾರೆ. ವಾಗ್ಝರಿಯಿಂದ ಇವರು ಕೇಳುಗರನ್ನು ಮೂಕವಿಸ್ಮಿತರನ್ನಾಗಿ ಮಾಡಿದ್ದಾರೆ. ಇವರ ಕೃತಿಗಳು, ವಸ್ತುವೈವಿಧ್ಯತೆಯಿಂದ ಭರಿತವಾಗಿದೆ.
ದೇಹಸ್ಥಿತಿ ಕುಂಠಿತವಾಗುತ್ತಿರುವಾಗಲೇ 1969ರಲ್ಲಿ ತಮ್ಮ ನೆಚ್ಚಿನ ಶಿಷ್ಯರಾದ ವೇ॥ ಶ್ರೀಪೂರ್ಣಬೋಧಾಚಾರ್ಯರಿಗೆ ಆಶ್ರಮ ನೀಡಿ ವೇದಾಂತ ಪೀಠವನ್ನು ಸಂಪೂರ್ಣವಾಗಿ ವಹಿಸಿಕೊಟ್ಟ ಮಾರ್ಗಶಿರ ಶುದ್ಧ ಪೂರ್ಣಿಮೆಯ ದಿನ ಬೃಂದಾವನಸ್ಥರಾದರು. ಇವರ ಇಚ್ಛೆಯಂತೆ ಇವರ ಬೃಂದಾವನವನ್ನು ಪೂರ್ವಾಶ್ರಮದ ತಂದೆಯವರಾಗಿದ್ದ ವಿದ್ಯಾರತ್ನಕರ ತೀರ್ಥರ ಸನ್ನಿಧಿಯಲ್ಲಿಯೇ ಮಾಡಲಾಯಿತು.
ಶ್ರೀಮತ್ಕೃಷ್ಣಪದಂಭೋಜಮಾನಸಂ ಕವಿಪುಂಗವಮ್
ಶ್ರೀಮದ್ವಿದ್ಯಾಪ್ರಸನ್ನಾಬ್ಧಿಂ ಗುರುಂ ವಂದೇ ನಿರಂತರಮ್ ॥
ಡಿಸೆಂಬರ್ 12ರಂದು ದೇವರಾಯನದುರ್ಗದಲ್ಲಿ ವಿದ್ಯಾಪ್ರಸನ್ನತೀರ್ಥರ ಆರಾಧನಾ ಮಹೋತ್ಸವ
ಐತಿಹಾಸಿಕ- ಪೌರಾಣಿಕ ಹಿನ್ನೆಲೆಯ ಪ್ರಾಕೃತಿಕ ಸೊಬಗಿನ ಬೆಂಗಳೂರಿಗೆ ಸಮೀಪವಿರುವ ನಗರ ಜಂಜಡಗಳಿಂದ ಮುಕ್ತವಾಗಿ ದೇವರಾಯನದುರ್ಗದ ಶ್ರೀಭೋಗ ಲಕ್ಷ್ಮೀ ನರಸಿಂಹಸ್ವಾಮಿ ಮತ್ತು ಯೋಗ ನರಸಿಂಹ ದಿವ್ಯ ಸನ್ನಿಧಾನ ಆಸ್ತಿಕ ಭಕ್ತಕೋಟಿಯನ್ನು ತನ್ನೆಡೆಗೆ ಸೆಳೆಯುತ್ತಿರುವ ಪರಮ ಪಾವನ ತಾಣ.
ಶ್ರೀಸನ್ನಿಧಿಯ ಪಕ್ಕದಲ್ಲೇ ಇರುವ ಕೊಡಿಗೇಹಳ್ಳಿ ಪ್ರಸನ್ನ ಶ್ರೀರಾಮ ಮಂದಿರ ಟ್ರಸ್ಟ್ (ರಿ)ನಲ್ಲಿ ಸಂಸ್ಥೆಯ ಸಾಮ್ರಾಟ್ ಪೋಷಕರಾಗಿದ್ದ ಸೋಸಲೆ ಶ್ರೀವ್ಯಾಸರಾಜ ಯತಿ ಪರಂಪರೆ, ಹರಿದಾಸ ಯತಿವರ‌್ಯ, ಸಂತಶ್ರೇಷ್ಠ, ಶಕಪುರುಷ, ಯುಗಯೋಗಿ ಶ್ರೀಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವವನ್ನು ಶ್ರೀ ಪಯೋನಿಧಿ ಸಭಾಂಗಣದಲ್ಲಿ ಮಾರ್ಗಶಿರ ಶುದ್ಧ ಹುಣ್ಣಿಮೆ ಡಿಸೆಂಬರ್ 12ರ ನಾಳೆ ಗುರುವಾರ ಆಯೋಜಿಸಲಾಗಿದೆ.
ಶ್ರೀಶ್ರೀವಿದ್ಯಾಪ್ರಸನ್ನತೀರ್ಥ ಶ್ರೀಪಾದರ ಜೀವನ – ಸಾಧನೆ ಮಹಿಮಾ ಕುರಿತು ಮ ಶಾ ಸಂ ಬ್ರಹ್ಮಣ್ಯತೀರ್ಥಾಚಾರ್ ಮತ್ತು ಪರಗಿ ಭಾರತಿರಮಣಾಚಾರ್ ರವರಿಂದ ಪ್ರವಚನ ನಂತರ ಶ್ರೀಶೀ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರಿಂದ ವಿರಚಿತ ದೇವರನಾಮಗಳ ಗಾಯನ- ವ್ಯಾಖ್ಯಾನ ಹರಿದಾಸ ನಮನ : ರಮಾಶ್ರೀಹರ್ಷ ಹಾಗೂ ತಂಡದಿಂದ ಏರ್ಪಡಿಸಲಾಗಿದೆ ಎಂದು ಮಾನ್ಯೇಜಿಂಗ್ ಟ್ರಸ್ಟಿ ಕೆ.ಎಂ. ಫಣಿರಾಜ್ ತಿಳಿಸಿದ್ದಾರೆ.
ಸಂಸ್ಥೆಯು ಇದೀಗ 80 ವಸಂತಗಳನ್ನು ಪೂರೈಸಿ ಹಲವಾರು ಧಾರ್ಮಿಕ- ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಅವಿರತವಾಗಿ ನಡೆಸಿಕೊಂಡು ಬರುತ್ತಿದೆ. ಸಂಸ್ಥೆಯ ವತಿಯಿಂದ ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತವರ್ಗಕ್ಕೆ ಸಭಾಂಗಣ, ಪಾಕಶಾಲೆ, ಸ್ನಾನಗೃಹ ಸಕಲ ಸೌಕರ್ಯವಿರುವ ಕಟ್ಟಡವನ್ನು ಉಪನಯನ, ಮದುವೆ ಇನ್ನಿತರ ಕಾರ್ಯಕ್ರಮ ನಡೆಸಲು ನೀಡಲಾಗುವುದು. ಆಸಕ್ತರು ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ದೂ: 098807 10168.
ಲೇಖನ: ಪರಗಿ ಭಾರತಿರಮಣಾಚಾರ್
Get in Touch With Us info@kalpa.news Whatsapp: 9481252093
Discussion about this post