ಭದ್ರಾವತಿ: ಸಂಸದನಾಗಿ ಕಳೆದ 6 ತಿಂಗಳ ಅವದಿಯಲ್ಲಿ ವಿಐಎಸ್‌ಎಲ್ ಕಾರ್ಮಿಕರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸಮಾಡಿದ್ದೇನೆ. ಇನ್ನೂ ಮಾಡಬೇಕಾಗಿರುವ ಕೆಲಸಗಳನ್ನು ನಿರ್ವಹಿಸಲು ಈ ಬಾರಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವುದು ಅತ್ಯಗತ್ಯವಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.
ಜನ್ನಾಪುರ ಜಯಶ್ರೀ ಕಲ್ಯಾಣ ಮಂಟಪದಲ್ಲಿ ವಿಐಎಸ್’ಎಲ್ ನಿವೃತ್ತ ಕಾರ್ಮಿಕರ ವೇದಿಕೆ ಏರ್ಪಡಿಸಿದ್ದ ಸ್ನೇಹಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರದ ಎರಡು ಕಣ್ಣುಗಳೆಂದೆ ಬಿಂಬಿತವಾಗಿರುವ ಅವಳಿ ಕಾರ್ಖಾನೆಗಳಾದ ಎಂಪಿಎಂ ಮತ್ತು ವಿಐಎಸ್‌ಎಲ್ ಕಾರ್ಖಾನೆಗಳ ಉಳಿವಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಎಂಪಿಎಂ ಕಾರ್ಖಾನೆ ಉಳಿವಿಗೆ ಅವರ ಅಧಿಕಾರಾವಧಿಯಲ್ಲಿ ಆರ್ಥಿಕ ಚೈತನ್ಯ ತುಂಬುವ ಕೆಲಸ ಮಾಡಿದ್ದರು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎಂಪಿಎಂಗೆ ಶಾಶ್ವತವಾಗಿ ಮುಚ್ಚಿಸಿ ಕಾರ್ಮಿಕರು ಕೆಲಸವಿಲ್ಲದೆ ಗುಳೇ ಹೋಗುವಂತೆ ಮಾಡಿದರು ಎಂದು ಕಿಡಿ ಕಾರಿದರು.
ತಾವು ಸಂಸದನಾಗಿ ವಿಐಎಸ್‌ಎಲ್ ಕಾರ್ಖಾನೆಯ ವಸತಿ ಗೃಹಗಳಲ್ಲಿ ವಾಸವಿರುವ ನಿವೃತ್ತ ಕಾರ್ಮಿಕರನ್ನು ಮನೆ ಖಾಲಿ ಮಾಡಿಸಲು ಕಂಪನಿ ನೋಟೀಸ್ ನೀಡಿದಾಗ ಅಲ್ಲಿನ ಅಧಿಕಾರಿಗಳೊಂದಿಗೆ ಮಾತನಾಡಿ ಆ ವಸತಿಗೃಹಗಳ ಲೀಸ್ ಅವಧಿಯನ್ನು ನವೀಕರಣ ಮಾಡಿ ಅಲ್ಲಿ ನಿವೃತ್ತ ಕಾರ್ಮಿಕರು ವಾಸ ಮುಂದುವರೆಸಲು ಅವಕಾಶ ಮಾಡಿಕೊಡುವ ಕೆಲಸವಾಗಿದೆ ಎಂದರು.
ವಿಐಎಸ್‌ಎಲ್ ಕಾರ್ಖಾನೆಯ ಉಳಿವಿಗೆ ಕೇಂದ್ರದ ಉಕ್ಕುಖಾತೆ ಸಚಿವರು ಭೇಟಿ ನೀಡಿ ಇಲ್ಲಿನ ಸ್ಥಿತಿಗತಿ ಅರಿತು ಕಾರ್ಖಾನೆಯ ಉಳಿವಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಂಡಿದ್ದಾರೆ. ಗುತ್ತಿಗೆ ಕಾರ್ಮಿಕರಿಗೆ ನಿರಂತರ ಕೆಲಸಕ್ಕಾಗಿ ಅವರ ಗುತ್ತಿಗೆ ಅವಧಿಯ ಟೆಂಡರ್ ನವೀಕರಿಸುವ ಕಾರ್ಯ ಮುಂತಾದ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸಿ ಈಗ ಕಾರ್ಖಾನೆಯಲ್ಲಿ ಉತ್ಪಾದನೆಗೆ ಅಗತ್ಯವಾದ ಕಚ್ಛಾ ಸಾಮಗ್ರಿಗಳನ್ನು ಪೂರೈಸುವ ಕಾರ್ಯ ಆಗಿದೆ. ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಕೆಲಸ ಮಾಡಲು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರಬೇಕಿದ್ದು ಅದಕ್ಕಾಗಿ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಯಾದ ನನಗೆ ಮತನೀಡಿ ಜಯಗೋಳಿಸಿಕೊಡಿ ಎಂದರು.
ಇದೇ ಸಂದರ್ಭದಲ್ಲಿ ಕಾರ್ಖಾನೆಯ ನಿವೃತ್ತ ಕಾರ್ಮಿಕರ ವೇದಿಕೆಯ ವತಿಯಿಂದ ಕಂಪನಿ ಮನೆಗಳನ್ನು 11 ತಿಂಗಳ ಕಂಪನಿ ಮನೆಗಳನ್ನು 33 ವರ್ಷಗಳಿಗೆ ಕೊಡಿಸುವುದು, ನಿವೃತ್ತ ಕಾರ್ಮಿಕರಿಗೆ ಮೆಡಿಕ್ಲೈಮ್ ಪಾಲಿಸಿ ವಿಸ್ತರಿಸುವುದು, ಸೈಲ್ ಪೆನ್ಷನ್ ತಾರತಮ್ಯ ನೀತಿ ಸರಿಪಡಿಸುವುದು, ಇಎಸ್‌ಐ ಆಸ್ಪತ್ರೆ ಶಿವಮೊಗ್ಗ-ಭದ್ರಾವತಿ ಮಧ್ಯೆಭಾಗದಲ್ಲಿ ಸ್ಥಾಪಿಸುವುದು, ಕಾರ್ಖಾನೆಗೆ ಅಗತ್ಯ ಬಂಡವಾಳ ತೊಡಗಿಸುವುದು, ಗುತ್ತಿಗೆ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.
ವೇದಿಕೆಯಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್ ವೇದಿಕೆ ಸಂಚಾಲಕ ಜೆ.ಎಸ್.ನಾಗಭೂಷಣ್ ಮುಖಂಡರಾದ ಬಿ.ಜಿ.ರಾಮಲಿಂಗಯ್ಯ, ಕೆ.ಎನ್.ಬೈರಪ್ಪಗೌಡ, ಎಸ್.ಎನ್.ಬಾಲಕೃಷ್ಣ, ಎಸ್.ನರಸಿಂಹಚಾರ್, ಹಾ.ರಾಮಪ್ಪ ಮುಂತಾದವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post