ಕಲ್ಪ ಮೀಡಿಯಾ ಹೌಸ್ | ಸಿಂಧನೂರು |
ನಮ್ಮ ಗ್ಯಾರಂಟಿ ಯೋಜನೆಗಳಿಂದಾಗಿ ಬರಗಾಲದಲ್ಲೂ ರಾಜ್ಯದ ಬಡವರು ಸಂಕಷ್ಟದಿಂದ ಪಾರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ CMSiddaramaiah ಅವರು ಭರವಸೆ ನೀಡಿದರು.
ಸಿಂಧನೂರಿನಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ತಿಮ್ಮಾಪೂರ ಏತ ನೀರಾವರಿ ಯೋಜನೆ ಲೋಕಾರ್ಪಣೆ ಮಾಡಿ, ಜಲ ಜೀವನ್ ಮಿಷನ್ (DBOT) ಯೋಜನೆಯ ಶಂಕುಸ್ಥಾಪನೆ ನೆರವೇರಿಸುವ ಜತೆಗೆ ಸಿಂಧನೂರು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು.

Also read: ಅಹಿಂದ ಎಲ್ಲಾ ನನ್ನ ಹಿಂದೆ ಎನ್ನುವ ಸಿದ್ದರಾಮಯ್ಯ ಅವರ ಮನಃಸ್ಥಿತಿಯನ್ನು ದಲಿತರು ಅರ್ಥ ಮಾಡಿಕೊಳ್ಳಲಿ: ಹೆಚ್‌ಡಿಕೆ
120 ಕೋಟಿ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ. 1.16 ಕೋಟಿ ಮಹಿಳೆಯರ ಖಾತೆಗೆ ತಿಂಗಳಿಗೆ 2 ಸಾವಿರ ಕೊಡಲಾಗುತ್ತಿದೆ. ಹೀಗೆ ಪ್ರತಿ ಕುಟುಂಬಕ್ಕೆ ತಿಂಗಳಿಗೆ 5-6 ಸಾವಿರ ರೂಪಾಯಿ ಉಳಿತಾಯ ಆಗುತ್ತಿದೆ.
ನಾವು ಕನ್ನಡಿಗರು ಪ್ರತೀ ವರ್ಷ ಕೇಂದ್ರಕ್ಕೆ 4 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ಹಣ ಕೊಡ್ತೀವಿ. ಆದರೆ ಕೇಂದ್ರ ನಮಗೆ ವಾಪಾಸ್ ಕೊಡುವುದು 52 ಸಾವಿರ ಕೋಟಿ ಮಾತ್ರ. ಬರಗಾಲ ಬಂದಿದ್ದರೂ ಕೇಂದ್ರದಿಂದ ನಯಾಪೈಸೆ ಬಂದಿಲ್ಲ. ಇದನ್ನು ರಾಜ್ಯದ ಜನತೆ ಬಿಜೆಪಿ ಸಂಸದರಿಗೆ ಪ್ರಶ್ನಿಸಬೇಕು ಎಂದು ಕರೆ ನೀಡಿದರು.

ಸಿಂಧನೂರಿಗೆ ಇದುವರೆಗೂ ಶೇ80 ರಷ್ಟು ನೀರಾವರಿ ಸವಲತ್ತು ಸಿಕ್ಕಿದೆ. ಶಾಸಕರು ನೂರಕ್ಕೆ ನೂರರಷ್ಟು ನೀರಾವರಿ ಮಾಡಲು ಬದ್ದರಾಗಿದ್ದಾರೆ. ನಮ್ಮ ಸರ್ಕಾರ ಇದಕ್ಕೆ ಸಂಪೂರ್ಣ ಸಹಕಾರ ನೀಡಿ ರೈತರ ಬದುಕನ್ನು ಉನ್ನತೀಕರಿಸಲು ನಾವು ಬದ್ದರಾಗಿದ್ದೇವೆ. ನವಿಲೆ ಬ್ಯಾಲೆಂಸಿಂಗ್ ಅಣೆಕಟ್ಟು ನಿರ್ಮಿಸಲು ನಮ್ಮ ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.

ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಜಿಲ್ಲೆಯ ಶಾಸಕರುಗಳಾದ ಹಂಪಯ್ಯ ನಾಯಕ್, ಮಾನಪ್ಪ ಡಿ.ವಜ್ಜಲ್, ಬಸವನಗೌಡ ದದ್ದಲ್, ಡಾ.ಎಸ್.ಶಿವರಾಜ್ ಪಾಟೀಲ್, ಆರ್. ಬಸವನಗೌಡ ತುರ್ವಿಹಾಳ, ಶರಣಗೌಡ ಪಾಟೀಲ್ ಬಯ್ಯಾಪುರ ಸೇರಿ ಹಲವು ಮುಖಂಡರು, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು









Discussion about this post