ಚೆನ್ನೈ: ಸರ್ ದಯವಿಟ್ಟು ಹೋಗ ಬೇಡಿ ಸರ್…. ಪ್ಲೀಸ್… ಎಂದು ಆ ಮಕ್ಕಳು ಶಿಕ್ಷಕನನ್ನು ಅಕ್ಷರಶಃ ಹಿಡಿದುಕೊಂಡು ಕಾಲಿಗೆ ಬಿದ್ದು ಬೇಡುತ್ತಿದ್ದರು.. ಗ್ರೇ ಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದ ಸಾಮಾನ್ಯ ಶಿಕ್ಷಕ ಆತ.. ನಿಜಕ್ಕೂ ಅದು ಮನಕಲಕುವ ಸನ್ನಿವೇಶ…
ವಿಚಾರ ಏನಂದರೆ…ತಮಿಳುನಾಡಿ ವೇಲಿಯಗ್ರಾಮ್ ಪ್ರದೇಶದ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಟೀಚರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕ 28 ವರ್ಷದ ಜಿ. ಭಗವಾನ್.. ಬಹಳ ಕಾಲ ಇಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ ಭಗವಾನ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು.
ವರ್ಗಾವಣೆಯಾದ ಹಿನ್ನೆಲೆಯಲ್ಲಿ ಶಾಲೆಯಿಂದ ತೆರಳುತ್ತಿದ್ದ ಭಗವಾನ್ ಅವರನ್ನು ಪ್ರೀತಿಯಿಂದ ಹಿಡಿದುಕೊಂಡ ಮಕ್ಕಳು ಅವರೊಂದಿಗೆ ಪ್ರೀತಿಯಿಂದಲೇ ಜಗಳಕ್ಕೆ ಬಿದ್ದರು. ಕೆಲವು ಮಕ್ಕಳು ಅವರನ್ನು ಹಿಡಿದುಕೊಂಡರೆ, ಮತ್ತೆ ಕೆಲವರು ಕೈಹಿಡಿದು ಶಾಲೆಗೆ ಎಳೆಯುತ್ತಿದ್ದರು, ಇನ್ನು ಸಾಕಷ್ಟು ಮಕ್ಕಳು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಆ ಸನ್ನಿವೇಶವೇ ಮನ ಕಲಕುವಂತಿತ್ತು.
ಯಾವುದೇ ಕಾರಣಕ್ಕೂ ನಿಮ್ಮನ್ನು ಈ ಶಾಲೆಯಿಂದ ಹೋಗಲು ಬಿಡುವುದಿಲ್ಲ ಎಂದು ಮಕ್ಕಳು ಕಣ್ಣೀರಿಡುತ್ತಿದ್ದುದನ್ನು ಕಂಡ ಭಗವಾನ್ ಸಹ ಸಣ್ಣ ಮಕ್ಕಳಂತೆ ಅತ್ತರು.
ಮೊದಲು, ಭಗವಾನ್ ಅವರನ್ನು ತಿರುಟ್ಟಣಿ ಬಳಿಯ ಅರುನಾಗುಲಂನ ಸರ್ಕಾರಿ ಶಾಲೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಇದರಿಂದ ಇಡೀ ಶಾಲೆಯ ಮಕ್ಕಳು ಇಂತಹ ಸನ್ನಿವೇಶ ಸೃಷ್ಠಿ ಮಾಡಿದ ಹಿನ್ನೆಲೆಯಲ್ಲಿ 10 ದಿನಗಳ ಕಾಲ ಇವರ ವರ್ಗಾವಣೆಯನ್ನು ತಡೆ ಹಿಡಿಯಲಾಗಿದೆ ಎನ್ನಲಾಗಿದೆ.
ಇನ್ನು ಈ ಕುರಿತಂತೆ ಮಾತನಾಡಿರುವ ಭಗವಾನ್, ನನಗೆ ನನ್ನ ಜೀವನದಲ್ಲಿ ಈ ಶಾಲೆಯಲ್ಲಿಯೇ ಮೊದಲ ಕರ್ತವ್ಯ. ನಾನು 2014ರಲ್ಲಿ ವೇಲಿಯಗ್ರಾಮ್ ಸರ್ಕಾರಿ ಪ್ರೌಢಶಾಲೆಗೆ ಗ್ರಾಜುಯೇಟ್ ಟೀಚರ್ ಆಗಿ ನೇಮಕವಾದೆ. ಈ ಶಾಲೆಯಲ್ಲಿ ಶಿಕ್ಷಕ ಹಾಗೂ ಮಕ್ಕಳ ಪ್ರಮಾಣ ನೋಡಿದರೆ ನಾನು ಇಲ್ಲಿ ಹೆಚ್ಚುವರಿ ಶಿಕ್ಷಕನಾಗಿದ್ದೇನೆ. ಈ ಹಿನ್ನೆಲೆಯಲ್ಲಿ ಸರ್ಕಾರ ನನ್ನನ್ನು ಬೇರೆಡೆಗೆ ವರ್ಗಾವಣೆ ಮಾಡಲು ನಿರ್ಧರಿಸಿತು ಎಂದಿದ್ದಾರೆ.
ನಾನು ಮಕ್ಕಳೊಂದಿಗೆ ಸಾಧ್ಯವಾದಷ್ಟು ಉತ್ತಮವಾಗಿ ಮಾತನಾಡುತ್ತೇನೆ. ಪಾಠಗಳೊಂದಿಗೆ ಅವರಿಗೆ ಅಗತ್ಯವಾದ ಕತೆಗಳನ್ನು ಹೇಳುತ್ತೇನೆ. ವಿದ್ಯಾರ್ಥಿಗಳ ಕುಟುಂಬದ ಹಿನ್ನೆಲೆ ತಿಳಿದುಕೊಂಡು, ಅವರ ಭವಿಷ್ಯಕ್ಕೆ ಏನು ಮಾಡಿದರೆ ಸರಿ ಎಂಬ ಉದ್ದೇಶದ ಆಧಾರದಲ್ಲಿ ಅವರಿಗೆ ಮಾರ್ಗದರ್ಶನ ಮಾಡುತ್ತೇನೆ. ಪ್ರೊಜೆಕ್ಟರ್ ಮೂಲಕ ಮಕ್ಕಳಿಗೆ ಕಲಿಸುತ್ತೇನೆ. ಇದರಿಂದ ಅವರಿಗೆ ಬೋರ್ ಆಗುವುದಿಲ್ಲ. ಇದು ನನ್ನ ಹಾಗೂ ಮಕ್ಕಳ ಬಾಂಧವ್ಯವನ್ನು ಗಟ್ಟಿ ಮಾಡಿರಬಹುದು ಎಂದಿದ್ದಾರೆ.
ಭಗವಾನ್ 6ನೆಯ ತರಗತಿಯಿಂದ 10ನೆಯ ತರಗತಿಯವರೆಗಿನ ಮಕ್ಕಳಿಗೆ ಇಂಗ್ಲಿಷ್ ತರಗತಿ ತೆಗೆದುಕೊಳ್ಳುತ್ತಾರೆ.
Discussion about this post