ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಆತಿಥೇಯ ಭಾರತ (India) ಹಾಗೂ ಜಿಂಬಾಬ್ವೆ ಮಹಿಳಾ ತಂಡಗಳ ನಡುವಿನ ಎರಡನೇ ಟಿ20(T20) ಪಂದ್ಯದಲ್ಲಿ ಭಾರತ ಮಹಿಳಾ ತಂಡ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಜಿಂಬಾಬ್ವೆ ನೀಡಿದ್ದ 103 ರನ್ಗಳ ಗುರಿಯನ್ನು ಭಾರತ ಕೇವಲ 8.5 ಓವರ್ಗಳಲ್ಲಿ ಬೆನ್ನಟ್ಟಿ ಸರಣಿ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದ್ದು, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಪೂರ್ಣ ಪ್ರಮಾಣದ ನಾಯಕಿಯಾಗಿ ಸ್ಮೃತಿ ಮಂಧಾನ (Smriti Mandhana) ಅವರಿಗೆ ಇದು ಸರಣಿ ಗೆಲುವಿನ ಶುಭಾರಂಭವಾಗಿದೆ.
ಜಿಂಬಾಬ್ವೆ 102 ರನ್ಗೆ ಸೀಮಿತ
ಟಾಸ್ ಬಳಿಕ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿತು. ಚಿಪೊ ಮುಗೆರಿ-ತಿರಿಪಾನೊ 32 ಎಸೆತಗಳಲ್ಲಿ 34 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ನಾಯಕಿ ಜೋಸೆಫಿನ್ ನ್ಕೊಮೊ 35 ಎಸೆತಗಳಲ್ಲಿ 27 ರನ್ ಗಳಿಸಿ ಅಜೇಯರಾಗಿ ಉಳಿದರು. ಆದರೆ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಕೊಡುಗೆ ಬರದ ಕಾರಣ ಜಿಂಬಾಬ್ವೆ 102 ರನ್ಗಳಿಗೆ ಸೀಮಿತವಾಯಿತು.
ಕನ್ನಡತಿ ನಿಕಿ ಪ್ರಸಾದ್ ಮಿಂಚು
ಭಾರತದ ಬೌಲಿಂಗ್ ವಿಭಾಗದಲ್ಲಿ ಕನ್ನಡತಿ ನಿಕಿ ಪ್ರಸಾದ್ ಗಮನ ಸೆಳೆದರು. ಕೇವಲ 2 ಓವರ್ಗಳಲ್ಲಿ 7 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ಜಿಂಬಾಬ್ವೆ ಬ್ಯಾಟಿಂಗ್ಗೆ ಕಡಿವಾಣ ಹಾಕಿದರು.
ನಂದಿನಿ ಶರ್ಮಾ, ಕ್ರಾಂತಿ ಗೌಡ್, ದೀಪ್ತಿ ಶರ್ಮಾ ಹಾಗೂ ಶ್ರೀ ಚರಣಿ ತಲಾ ಒಂದು ವಿಕೆಟ್ ಪಡೆದರು.
ಶಫಾಲಿ ವರ್ಮಾ ಸ್ಫೋಟಕ ಬ್ಯಾಟಿಂಗ್
103 ರನ್ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಸ್ಫೋಟಕ ಆರಂಭ ಒದಗಿಸಿದರು. ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಶಫಾಲಿ ಕೇವಲ 25 ಎಸೆತಗಳಲ್ಲಿ 55 ರನ್ ಸಿಡಿಸಿದರು.
ಅವರ ಇನ್ನಿಂಗ್ಸ್ನಲ್ಲಿ ಬೌಂಡರಿ ಹಾಗೂ ಸಿಕ್ಸರ್ಗಳ ಸುರಿಮಳೆಯೇ ಹರಿಯಿತು. ಶಫಾಲಿ ನೀಡಿದ ವೇಗದ ಆರಂಭದಿಂದ ಭಾರತ ಗೆಲುವಿನತ್ತ ಸುಲಭವಾಗಿ ಸಾಗಿತು.

Smriti Mandhana: ಸ್ಮೃತಿ ಮಂಧಾನಗೆ ಶುಭಾರಂಭ
ನಾಯಕಿ ಸ್ಮೃತಿ ಮಂಧಾನ ಕೂಡ ನಾಯಕತ್ವಕ್ಕೆ ತಕ್ಕ ಆಟ ಪ್ರದರ್ಶಿಸಿದರು. 25 ಎಸೆತಗಳನ್ನು ಎದುರಿಸಿದ ಅವರು 6 ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಿತ ಅಜೇಯ 47 ರನ್ ಗಳಿಸಿದರು.
Also Read>> ಒಂದೇ ರನ್ನಿಂದ ದ್ವಿಶತಕ ವಂಚಿತ ಪ್ರಿಯಾಂಶ್ ಆರ್ಯ; ಗುಜರಾತ್ ವಿರುದ್ಧ ದೆಹಲಿ ಮೇಲುಗೈ
ಶಫಾಲಿ ವರ್ಮಾ ಔಟಾದ ಬಳಿಕವೂ ಸ್ಮೃತಿ ರನ್ ಗಳಿಕೆಯ ವೇಗವನ್ನು ಕಡಿಮೆ ಮಾಡದೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಅನುಷ್ಕಾ ಶರ್ಮಾ 4 ಎಸೆತಗಳಲ್ಲಿ 1 ರನ್ ಗಳಿಸಿ ಅಜೇಯರಾಗಿ ಉಳಿದರು.
ಅಂತಿಮವಾಗಿ ಭಾರತ 8.5 ಓವರ್ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಮೂಲಕ ಭಾರತ ಮಹಿಳಾ ತಂಡ 2-0 ಅಂತರದಲ್ಲಿ ಟಿ20 ಸರಣಿ ಗೆದ್ದು, ಮೂರು ಪಂದ್ಯಗಳ ಸರಣಿಯಲ್ಲಿ ಅಜೇಯ ಮುನ್ನಡೆ ಸಾಧಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













