ಸರ್ಪ ದ್ವೇಷ ಹನ್ನೆರಡು ವರ್ಷ (ಹಾವಿನ ದ್ವೇಷ ಹನ್ನೆರಡು ವರ್ಷ) ಇದೊಂದು ವಾಡಿಕೆ ಮಾತು. ಈ ಮಾತಿಗಾಗಿ ನೂರಾರು ಕಥೆಗಳೂ ಹುಟ್ಟಿಕೊಂಡವು. ಆದರೆ ವಾಸ್ತವ ಏನು??
ಸರ್ಪ ದೋಷ ಎಂದಾಗಬೇಕು. ಕನ್ನಡದಲ್ಲಿ ನಾಗರ ಹಾವಿನ ದೋಷ ಹನ್ನೆರಡು ವರ್ಷ ಎಂದಾಗಬೇಕು.
ಹಾವಿನ ದ್ವೇಷ ಎಷ್ಟು ಕಾಲ
ನಾಗರ ಹಾವಿಗೆ ಹಿಂಸೆ ನೀಡಿದರೆ ಹನ್ನೆರಡು ವರ್ಷಗಳವರೆಗೆ ದ್ವೇಷ ಸಾಧಿಸುತ್ತದೆ ಎಂಬುದು ಒಂದು ಮಾತಿದೆ. ಅದು ಹಾಗಲ್ಲ. ಹಾವಿಗೆ ಹೊಡೆದರೆ ಓಡಿ ಹೋಗುತ್ತದೆ ಅಥವಾ ಸತ್ತು ಹೋಗಬಹುದು. ಅದು ದ್ವೇಷ ಸಾಧನೆ ಮಾಡುವುದೇ ಇಲ್ಲ. ಒಂದು ವೇಳೆ ಅದರ ಬೇಟೆ ತಪ್ಪಿಸಿಕೊಂಡಿದ್ದರೆ ಕೆಲವು ದಿನಗಳವರೆಗೆ ಅದನ್ನು ಹಿಡಿಯಲು ಕಾಯುತ್ತದೆ. ಮನೆಯ ಒಳಗೆ ಬರುವುದೂ ಅದರ ಬೇಟೆಯನ್ನು ಹುಡುಕಿಕೊಂಡೆ. ಅವಿತುಕೊಳ್ಳುವುದು ಭಯದಿಂದಲೋ ಅಥವಾ ಅದರ ಬೇಟೆಯನ್ನು ನಿರೀಕ್ಷೆ ಮಾಡುವುದರಿಂದಲೋ ಆಗಿರುತ್ತದೆ. ಆದರೆ ಅದಕ್ಕೆ ದ್ವೇಷ ಇರುವುದು ಕೇವಲ ಕೆಲವು ಕ್ಷಣ ಮಾತ್ರ. ಆದರೆ ಹಾವಿಗೆ ಹಾನಿ ಮಾಡಿದರೆ, ವಧಿಸಿದರೆ ಅದು ದೋಷವಾಗುತ್ತದೆ. ಎಲ್ಲಿಯವರೆಗೆ ಅಂದರೆ ಹನ್ನೆರಡು ವರ್ಷಗಳವರೆಗೆ.
ಅದು ಯಾಕೆ ಹನ್ನೆರಡು ವರ್ಷ?
ಜಾತಕದಲ್ಲಿ ಗುರುವಿನ ಒಂದು ವರ್ಷವು ನಮಗೆ ಹನ್ನೆರಡು ವರ್ಷ. ಒಂದು ಸುತ್ತು ಪರಿಭ್ರಮಣ ಮಾಡಲು ಗುರುವು ಹನ್ನೆರಡು ವರ್ಷ ತೆಗೆದುಕೊಳ್ಳುತ್ತಾನೆ. ತನು ಭಾವದಿಂದ ವ್ಯಯ ಭಾವದವರೆಗೆ (1-12) ಹನ್ನೆರಡು ವರ್ಷ ಬೇಕು. ಹಾವನ್ನು ಕೊಂದರೆ, ಹಿಂಸಿಸಿದರೆ ಅದು ಅದರ ಅಭಿಮಾನಿ ದೇವರಾದ ನಾಗದೇವರ ಕೋಪವಾಗುತ್ತದೆ.
ಮನುಷ್ಯನಿಗೆ ಹನ್ನೆರಡು ರೀತಿಯ ಮೋಹಗಳಿರುತ್ತದೆ. ತನು ಭಾವವು ಶರೀರ ಸೌಖ್ಯ, ದ್ವಿತೀಯವು ಕುಟುಂಬ, ವಾಕ್; ತೃತೀಯವು ದುರಿತ, ವಿಕ್ರಮ; ಚತುರ್ಥವು ಕ್ಷೇತ್ರ, ಸಮಷ್ಟಿ ಕುಟುಂಬ; ಪಂಚಮವು ಬುದ್ಧಿ, ಪುತ್ರ ಸ್ಥಾನ; ಷಷ್ಠವು ರೋಗ, ಋಣ, ಶತ್ರು; ಸಪ್ತಮವು ವ್ಯವಹಾರ, ವಿವಾಹ, ದೇವ ಚಿಂತನೆ; ಅಷ್ಠಮವು ಮರಣ, ವಿರುದ್ಧ ಕ್ರಿಯೆಗಳು; ನವಮ ಭಾಗ್ಯ, ಆಡಳಿತ; ದಶಮವು ಕರ್ಮ; ಏಕಾದಶವು ಲಾಭ, ಗೌರವಾದರಗಳು,; ದ್ವಾದಶವು ವ್ಯಯ, ಮೋಕ್ಷ ಚಿಂತನೆಗಳ ಸ್ಥಾನ. ಈ ಭಾವಗಳ ಭಾವೋತ್ಪತಿಯು ಆ ಭಾವಗಳಲ್ಲಿ ಗುರುಸಂಚಾರ ಕಾಲ, ಗುರು ದೃಷ್ಟಿಯ ಕಾಲಗಳಲ್ಲಿ ಸಂಭವಿಸುತ್ತದೆ.
ಹಾವಿನ ವಿಚಾರ ನೋಡೋಣ
ಒಬ್ಬ ವ್ಯಕ್ತಿಯು ಒಂದು ಹಾವಿಗೆ ಯಾವ ಸ್ವರೂಪದಲ್ಲಿ ಹೊಡೆದು ಹಾಕಿ ಹಿಂಸೆ ನೀಡುತ್ತಾನೋ, ಕೊಲ್ಲುತ್ತಾನೋ ಆ ಸ್ವರೂಪದ ವೇದನೆ ಅನುಭವಿಸಲೇಬೇಕು. ಅದು ಹೇಗೆಂದರೆ ಅದರ ನಿರ್ಣಯವನ್ನು ಗುರು ತೆಗೆದುಕೊಳ್ಳುತ್ತಾನೆ. ತುಂಬಾ ಕೆಟ್ಟ ನಿರ್ಣಯವು ಗುರುವಿನ ಮೂರನೆಯ ಕಾಲು ದೃಷ್ಟಿಯಲ್ಲಿದೆ. ಯಾವ ಭಾವಕ್ಕಾದರೂ ಗುರುವಿನ ಕಾಲು ದೃಷ್ಟಿ ಬಿದ್ದರೆ(ತಾನಿರುವ ಮನೆಯಿಂದ ಮೂರನೆಯ ಮನೆಯನ್ನು ನೋಡುವುದು ಕಾಲು ದೃಷ್ಟಿಯಾಗುತ್ತದೆ) ಅಲ್ಲಿ ಹಾನಿಯನ್ನು ನೀಡುತ್ತಾನೆ. ಹನ್ನೆರಡು ವರ್ಷಗಳ ಪರಿಭ್ರಮಣೆಯಲ್ಲಿ ಹನ್ನೆರಡು ಸಲ 1, 5, 7, 9, ಪೂರ್ಣ ದೃಷ್ಟಿಯನ್ನೂ, 3, 10 ಕಾಲು ದೃಷ್ಟಿಯನ್ನೂ, 4, 8 ಅರ್ಧ ದೃಷ್ಟಿಯನ್ನೂ ತಾನಿರುವ ಭಾವಕ್ಕನುಗುಣವಾಗಿ ನೀಡುತ್ತಾ ಸಂಚರಿಸುತ್ತಾನೆ. ಜಾತಕನ ನಡಾವಳಿ ಉತ್ತಮ ಇದ್ದರೆ ದೋಷಗಳ ಪ್ರಮಾಣ, ಶಿಕ್ಷೆಯ ಪ್ರಮಾಣ ಹರಣವಾಗುತ್ತದೆ. ಅನಿಷ್ಟವಾಗಿದ್ದಾಗ ವಿಪರೀತಕ್ಕೆ ಹೋಗುತ್ತದೆ.
ಅಭಿಮಾನಿ ದೇವತೆಗೆ ಅವಮಾನಿಸಿದಂತೆ
ಜಗತ್ತಿನ ಯಾವುದೇ ಮನುಷ್ಯರಿಗೆ, ಪ್ರಾಣಿ ಪಕ್ಷಿಗಳಿಗೆ, ಚರಾಚರಗಳಿಗೆ ಸಂಬಂಧಿಸಿದ ಅಭಿಮಾನಿ ದೇವರುಗಳಿರುತ್ತಾರೆ. ಅಂದರೆ ಇಲಾಖೆ ಎಂದು ಈಗಿನ ಭಾಷೆಯಲ್ಲಿ ಹೇಳಬಹುದು. ಉದಾ: ಒಬ್ಬ ಪೋಲೀಸ್ ಪೇದೆಗೆ ಅನಾವಶ್ಯವಾಗಿ ಹೊಡೆದರೆ ಅದು ಗೃಹ ಇಲಾಖೆಗೆ ಅವಮಾನಿಸಿದಂತೆ. ಒಬ್ಬ ಮೇಷ್ಟ್ರಿಗೆ ಅವಮಾನ ಮಾಡಿದರೆ ಅದು ವಿದ್ಯಾ ಇಲಾಖೆಗೆ ಅವಮಾನಿಸಿದಂತೆ, ಒಬ್ಬ ಬ್ರಾಹ್ಮಣನ ತೇಜೋವಧೆ ಮಾಡಿದರೆ ವಿಷ್ಣುವಿಗೆ ಅವಮಾನಿಸಿದಂತೆ(ಬ್ರಾಹ್ಮಣಾ ಮಮ ದೇವತಾ ಎಂದು ಗೀತೆಯಲ್ಲಿ ಶ್ರೀ ಕೃಷ್ಣ ನುಡಿಯನ್ನು ಸ್ಮರಿಸಬಹುದು) ಆಗುತ್ತದೆ. ಇದರ ಫಲ ಗೋಚರದ ಗುರು ಸಂಚಾರದಲ್ಲಿ ಅನುಭವಕ್ಕೆ ಬರುತ್ತದೆ. ಇದನ್ನೇ ಹನ್ನೆರಡು ವರ್ಷಗಳ ದೋಷ ಎಂದರು. ಹಾಗಾಗಿ ಜಗತ್ತಿನ ಸಕಲ ಚರಾಚರಗಳನ್ನೂ ಪಾಲನೆ ಮಾಡುವ ಒಂದು ದೇವ ಇಲಾಖೆ ಇದೆ.
ನಮಗೆ ತೊಂದರೆಯಾದಾಗ, ಅಜ್ಞಾತವಾಗಿ ಗೊತ್ತಾಗದೆ ಸಂಭವಿಸುವ ಹಿಂಸೆಗಳಿಗೆ ಕ್ಷಮೆ ಇದೆ. ಆದರೂ ಪ್ರಾಯಶ್ಚಿತ್ತ ಪರಿಹಾರ ಮಾಡಲೇ ಬೇಕಾಗುತ್ತದೆ. ಕೆಲವೊಮ್ಮೆ ವಿಪರೀತ ಹಿಂಸೆಯಾದಾಗಲೂ ಅನಿವಾರ್ಯವಾಗಿ ಪ್ರತಿಭಟನೆ, ಪ್ರತಿಕ್ರಿಯೆ ಮಾಡಬೇಕಾಗುತ್ತದೆ. ಅದಕ್ಕೆ ಪ್ರಾಯಶ್ಚಿತ್ತವೂ, ಕ್ಷಮೆಯೂ ಇದೆ. ಆದರೆ ದುರುದ್ಧೇಶಕ್ಕೆ ಮಾಡಿದ ದೋಷಕ್ಕೆ ದೇಹ ದಂಡನೆಯೇ ಪ್ರಾಯಶ್ಚಿತ್ತ.
-ಪ್ರಕಾಶ್ ಅಮ್ಮಣ್ಣಾಯ,
ಜ್ಯೋರ್ತಿವಿಜ್ಞಾನಂ
Discussion about this post