ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬಹಳ ಜನ ತಮ್ಮ ಜೀವಮಾನದಲ್ಲಿ ಖ್ಯಾತಿಗಳಿಸುತ್ತಾರೆ. ಅದು ಕ್ರೀಡೆ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳೇ ಇರಬಹುದು. ಕೆಲವರ ಹಿನ್ನೆಲೆ ತಿಳಿದರೆ ಅವರು ಅರ್ಜಿ ಗುಜರಾಯಿಸಿ, ವಶೀಲಿ ಮಾಡಿ ಅಂತೂ ಹೆಣಗಾಡಿ ಅಂತೂ ಒಂದು ಪ್ರಶಸ್ತಿ ಬಂತು ಅಂತ ನಿಟ್ಟುಸಿರು ಬಿಡುತ್ತಾರೆ. ಕೆಲವರಿಗೆ ಪ್ರಶಸ್ತಿಯೇ ಹುಡುಕಿ ಕೊಂಡು ಬರುತ್ತದೆ. ಇದು ಇಂದಿನ ನಿಷ್ಠುರ ವರ್ತಮಾನ. ವ್ಯವಸ್ಥೆಯೇ ಹಾಗಿದೆ.
ಇಂತಹ ಕೆಲವೇ ಕೆಲವು ಮಹನೀಯರಲ್ಲಿ ಎರಡನೆಯ ಪಂಕ್ತಿಗೆ ಸೇರಿದವರು ಚನ್ನಗಿರಿ ಹಿರಿಯ ವೈದ್ಯ ಮತ್ತು ಸಮಾಜ ಸೇವಕರಾಗಿದ್ದ ಡಾ.ಬಸವಣ್ಣಯ್ಯನವರು. ಅವರು ಇದೇ ನವೆಂಬರ್ ಹದಿನಾಲ್ಕರಂದು ಇಹಲೋಕ ತ್ಯಜಿಸಿದರು. ತೊಂಭತ್ಮೂರು ವರ್ಷಗಳ ಚೇತನ. ಇಡೀ ತಾಲೂಕಿನ ಜನತೆಯ ಪ್ರೀತಿಯ ಆರಾಧ್ಯಮೂರ್ತಿಗಳಾಗಿದ್ದರು. ಚಿಕ್ಕಹುಲಿಕೆರೆ ಗ್ರಾಮ ಚನ್ನಗಿರಿಗೆ ಹೊಂದಿಕೊಂಡಂತೆಯೇ ಇದೆ. ಚನ್ನಗಿರಿಯ ಮೂಲ ಹೆಸರು ದೊಡ್ಡಹುಲಿಕೆರೆ. ಚಿಕ್ಕಹುಲಿಕೆರೆಯ ಚಿಕ್ಕ ಮನುಷ್ಯ ತನ್ನ ಬಹುದೊಡ್ಡ ಮಾನವ ಪ್ರೀತಿಯಿಂದ ದೊಡ್ಡ ಹುಲಿಕೆರೆಯಲ್ಲೇ ದೊಡ್ಡವ್ಯಕ್ತಿ ವಿಶೇಷವಾಗಿ ಬೆಳಗಿದರು.
ಅವರು ನಮ್ಮ ಕುಟುಂಬಕ್ಕೆ ಬಹಳ ಆತ್ಮೀಯರಾಗಿದ್ದರು. ನಮ್ಮ ತಂದೆ ಒಳ್ಳೆಯ ಮಿತ್ರರು. ಡಾ.ಬಸವಣ್ಣಯ್ಯನವರು ನಮ್ಮ ಕುಟುಂಬ ವೈದ್ಯರು ಅಂತ ಹೇಳಿ ಪರಿಚಯಿಸಿದರೆ ಸಂಕುಚಿತ ಅರ್ಥ ಬರುತ್ತದೆ. ಬದಲಿಗೆ ಅವರು ಇಡೀ ಚನ್ನಗಿರಿ ತಾಲೂಕು ಮತ್ತು ಸುತ್ತ ಬಹುಸೀಮೆಯ ಕುಟುಂಬ ವೈದ್ಯರು ಅಂತ ಕರೆದರೆ ಯಾವ ಅತಿಶಯೋಕ್ತಿಯಾಗುವುದಿಲ್ಲ.
ನನಗೆ ತಿಳಿದಂತೆ ಅವರು ಮತ್ತು ಅಜ್ಜಿಹಳ್ಳಿ ಮರುಳಪ್ಪನವರು ಜೊತೆಗಾರರು. ಈರ್ವರೂ ಚನ್ನಗಿರಿ ತಾಲೂಕಿನ ಎರಡು ಕಣ್ಣುಗಳಾಗಿದ್ದರು ಎಂದರೆ ತಪ್ಪಲ್ಲ. ಇವತ್ತಿನ ಜನರಲ್ ಹಾಸ್ಟೆಲ್. ಜೂನಿಯರ್ ಕಾಲೇಜು. ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇಡೀ ಭಾರತ ಖ್ಯಾತಿಯ ತುಮ್ಕೋಸ್. ಒಂದೇ ಎರೆಡೇ? ಇವರಿಬ್ಬರ ಶ್ರಮದಿಂದ ಎದ್ದು ನಿಂತ ಕಟ್ಟಡಗಳು ಬೃಹತ್ ಸಂಸ್ಥೆ ಇತ್ಯಾದಿ ಚನ್ನಗಿರಿಯಲ್ಲಿ ವೈದ್ಯ ವೃತ್ತಿ ಆರಂಭಿಸಿದ ಎರಡು ಮೂರು ಜನರಲ್ಲಿ ಇವರೂ ಸಮಕಾಲೀನರು.
ನಾನು ಚಿಕ್ಕಂದಿನಲ್ಲಿ ಡಾ.ಶಂಕರಪ್ಪ ಎಂಬ ಹೆಸರನ್ನೂ ಕೇಳಿದ್ದುಂಟು. ಇಡೀ ಊರಿನ ಜನಸೇವೆ ಒಂದೇ ಅಲ್ಲ ಅಭಿವೃದ್ಧಿಯ ಬಗ್ಗೆ ವಿಜಯ ಕ್ಲಿನಿಕ್ (ಡಾ.ಬಸವಣ್ಣಯ್ಯನವರ ಖಾಸಗಿ ಕ್ಲಿನಿಕ್’ನ ಹೆಸರು) ನಲ್ಲಿ ಚಿಂತನೆ ನಡೆಯುತ್ತಿತ್ತು. ಸದಾ ಅವರು ಒಬ್ಬರಲ್ಲ ಒಬ್ಬ ಅಧಿಕಾರಿಗಳ ಸಂಗಡ ಚರ್ಚೆ ಅಲ್ಲಿ ನಡೆಸುವುದು ನಾವು ನೋಡುತ್ತಿದ್ದ ಸಾಮಾನ್ಯ ದೃಶ್ಯ.
ಆಗಿನ ಕಾಲಕ್ಕೆ ಸರ್ಕಾರಿ ಸೇವೆ ಸುಲಭ ಸಿಗುತ್ತಿತ್ತು. ಅವರು ವೈದ್ಯಕೀಯ ಶಿಕ್ಷಣ ಪೂರೈಸಿದ ನಂತರ ನೌಕರಿ ಸೇರಿದ್ದರೆ ವೈದ್ಯಕೀಯ ಶಿಕ್ಷಣ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು ನಿವೃತ್ತರಾಗಬಹುದಿತ್ತು. ಆದರೆ ಅವರು ಅದಾವುದರ ಆಕರ್ಷಣೆಗೆ ಸಿಲುಕದೇ ಸ್ವಂತ ವೃತ್ತಿಗೆ ಬಂದರು. ತಮ್ಮ ಸರಳ ಮಾತು, ಸಜ್ಜನಿಕೆ, ಹೃದಯ ಶ್ರೀಮಂತಿಕೆಯಿಂದ ಕ್ರಮೇಣ ಜನಾನುರಾಗಿಗಳಾದರು. ಅವರಿಗಿದ್ದ ಸಂಘಟನಾ ಶಕ್ತಿ ಅತ್ಯಂತ ಸಾಮರ್ಥ್ಯವುಳ್ಳದ್ದಾಗಿತ್ತು. ಸಾರ್ವಜನಿಕ ಆಸ್ಪತ್ರೆಗೆ ಒಂದು ವಿಸ್ತಾರವಾದ ನಿವೇಶನ ಬೇಕು. ಅದು ಒಬ್ಬರಿಗೆ ಸೇರಿದ ಜಮೀನು. ಹೇಗೆ ಬಿಡಿಸಿಕೊಳ್ಳುವುದು? ಅಧಿಕಾರಿಗಳಿಗೆ ಸಮಸ್ಯೆಯಾದಾಗ ಬಸವಣ್ಣಯ್ಯನವರು ಜಮೀನು ಮಾಲಿಕರನ್ನು ಮನವೊಲಿಸಿದರು. ಹೀಗೆ ಅಲ್ಲಿಗೆ ನಿಯುಕ್ತರಾಗಿ ಬರುವ ಸರ್ಕಾರಿ ಅಧಿಕಾರಿಗಳು ಡಾಕ್ಟರನ್ನು ಪರಿಚಯಿಸಿಕೊಂಡರೆ ಸಾಕು ಅವರಿಗೆ ಎಲ್ಲ ಕೆಲಸ ಸಲೀಸು ಎನ್ನುವಷ್ಟರ ಮಟ್ಟಿಗೆ ಜನಪ್ರಿಯರಾದರು. ಮತ್ತೆ ಅಂತಹ ಅಧಿಕಾರಿಗಳನ್ನು ಬಸವಣ್ಣಯ್ಯನವರು ಯಾವತ್ತಿಗೂ ತಮ್ಮ ಸ್ವಂತ ಕೆಲಸಗಳಿಗೆ ದುರ್ಬಳಕೆ ಮಾಡಿಕೊಳ್ಳಲೇ ಇಲ್ಲ. ಇದು ಎಲ್ಲರೂ ಗಮನಿಸಬೇಕಾದ ಸಂಗತಿ.
ದೇವರು ಅವರಿಗೆ ಎಲ್ಲವನ್ನೂ ಕೊಟ್ಟಿದ್ದ. ಹಾಗಾಗಿ ಜೀವಿತದಲ್ಲಿ ಯಾವುದಕ್ಕೂ ಆಸೆ ಪಡಲಿಲ್ಲ. ಪುರಜನರ ಸೇವೆಯೇ ಹರನಸೇವೆಯೆಂಬಂತೆ ದುಡಿದರು. ಅವರು ತಮ್ಮ ಜೀವಮಾನದಲ್ಲಿ ಅಂದರೆ ನಡುವಯಸ್ಸಿನಲ್ಲೇ ಪಡೆದ ಜನಪ್ರಿಯತೆಯಿಂದ ಅವರು ಎಂಎಲ್’ಎ ಅಥವಾ ಎಂಪಿ ಆಗಿ ಆಯ್ಕೆಯಾಗಲು ಸಮರ್ಥರಿದ್ದರು. ಯಾವ ಪಕ್ಷವೂ ಬೇಡ, ಸ್ವತಂತ್ರರಾಗಿಯೇ ವಿಜಯಿಯಾಗುವ ನಾಯಕತ್ವ ಪಡೆದಿದ್ದರು. ಮನಸ್ಸು ಮಾಡಿದ್ದರೆ ಅವರು ಬದುಕಿರುವ ತನಕವೂ ಜನ ಪುನರಾಯ್ಕೆ ಮಾಡುತ್ತಿದ್ದರು. ಆದರೆ ಸಾಧಾರಣ ಮನುಷ್ಯರಾಗಿಯೇ ಉಳಿದ ಕಾಯಕಜೀವಿ ಬಸವಣ್ಣಯ್ಯನವರು.
ಚನ್ನಗಿರಿಯಲ್ಲಿ ರೋಟರಿ ಚಳುವಳಿಗೆ ನಾಂದಿ ಹಾಡಿದರು. ಸಂಸ್ಥೆಯಿಂದ ಚನ್ನೇನಹಳ್ಳಿ ದತ್ತು ಪಡೆದು ಗ್ರಾಮಾಭಿವೃದ್ಧಿಗೆ ಶ್ರಮಿಸಿದರು. ರೋಟರಿ ಅವರಿಂದಾಗಿ ಸ್ಥಳೀಯವಾಗಿ ಸೇವಾ ಕ್ಷೇತ್ರದಲ್ಲಿ ಹೆಸರು ಪಡೆಯಿತು. ಸರ್ಕಾರಿ ಕಿರಿಯ ಕಾಲೇಜಿಗೆ ಕೊಠಡಿ ಕೊರತೆಯಿತ್ತು. ದಾನಿಗಳಿಗೆ ಅವರೇ ಪತ್ರ ಬರೆದು ದೇಶ ವಿದೇಶಗಳಲ್ಲಿರುವ ತಾಲೂಕಿನ ವ್ಯಕ್ತಿಗಳಿಂದ ಧನಸಹಾಯ ಕೋರಿದರು. ಸಮಿತಿಯಲ್ಲಿ ಬಸವಣ್ಣಯ್ಯನವರಿದ್ದಾರೆ ಎಂಬ ಒಂದೇ ಕಾರಣದಿಂದ ಹಣ ಹರಿದು ಬಂತು. ಸರ್ಕಾರದ ನಿಗದಿತ ಅವಧಿಗಿಂತ ಮುನ್ನವೇ ಕಿರಿಯ ಕಾಲೇಜಿಗೆ ದಾನಿಗಳ ಕಟ್ಟಡ ನಿಂತಿತು. ಸರ್ಕಾರದವರೇ ಬಹಳ ತಡವಾಗಿ ಮಿಕ್ಕ ಕೊಠಡಿ ನಿರ್ಮಿಸಿದರು. ಹೀಗೆಯೇ ಪ್ರಥಮ ದರ್ಜೆ ಕಾಲೇಜು, ವಿಜ್ಞಾನ ಪ್ರಯೋಗಾಲಯ.. ಇತ್ಯಾದಿ.
ಪತ್ರಕರ್ತ ಸತ್ಯನಾರಾಯಣ ನಾಡಿಗ್ ಅವರು ತಮ್ಮ ಪತ್ರಿಕೆ ಗ್ರಾಮೀಣ ವಾಣಿಗೆ ಸಂದರ್ಶಿಸಲು ನನಗೆ ಹೇಳಿದರು. ಅವರಿಗೆ ಪ್ರಶ್ನಾವಳಿ ಕೊಟ್ಟೆ. ನೀವು ರೇಡಿಯೋ ಸ್ಟೇಷನ್’ನವರು. ದೊಡ್ಡ ದೊಡ್ಡ ಪ್ರಶ್ನೆ ಕೇಳ್ತೀರಿ ಅಂತ ನಂಗೆ ಆತಂಕವಿತ್ತು ಅಂತ ಹೇಳಿ ನಕ್ಕರು. ಅವರ ನಗು ಎಂಥವರನ್ನೂ ಸೆಳೆಯುವ ಮುಗ್ಧ ನಗು.
ಕುಟುಂಬ ಕಲ್ಯಾಣ ವಿಷಯದ ಬಗ್ಗೆ ಅವರಿಗೆ ಭಾಷಣ ಬರೆಯಲು ಹೇಳಿದ್ದೆ. ಆಕಾಶವಾಣಿಗೆ ಧ್ವನಿಮುದ್ರಣಕ್ಕೂ ಬಂದಿದ್ದರು. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಭದ್ರಾವತಿ ಆಕಾಶವಾಣಿ ಕೇಂದ್ರಕ್ಕೆ ಆಹ್ವಾನಿಸಿದ್ದೆ. ಬಹಳ ಮನಬಿಚ್ಚಿ ಮಾತನಾಡಿದ್ದರು.
ಚನ್ನಗಿರಿ ಮಾವಿನಹೊಳೆ ಜಲಾಶಯದ ಬಗ್ಗೆ ಅವರಿಗೆ ಬಹಳ ಒಲವು. ಅದರ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಿದರೆ ಬಹಳ ಕೃಷಿಕರಿಗೆ ನೆರವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಬಹುಷಃ ಈ ಯೋಜನೆ ಕಾರ್ಯಗತವಾದರೆ ಬಸವಣ್ಣಯ್ಯ ನೀರಾವರಿ ಯೋಜನೆ ಅಂತ ಹೆಸರಿಟ್ಟರೂ ಅದು ನಾವು ಡಾಕ್ಟರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ.
ಮನುಷ್ಯ ಪ್ರೀತಿಯ, ಆರೋಗ್ಯ ಕಾಳಜಿಯ ಸದಾ ಹಸನ್ಮುಖಿಯಾಗಿ ಮಾತನಾಡುವ ಅವರ ವ್ಯಕ್ತಿತ್ವ ಮರೆಯಾದರೂ ಅವರು ತಮ್ಮ ಸಾಮಾಜಿಕ ಕಾರ್ಯಗಳಿಂದ ನಮ್ಮೊಂದಿಗೆ ಸದಾ ಇದ್ದಾರೆ. ಪರಶಿವ ಆವರಿಗೆ ಕೈಲಾಸ ಕರುಣಿಸಲಿ.
ಲೇಖನ: ಡಾ.ಚನ್ನಗಿರಿ ಸುಧೀಂದ್ರ
Get in Touch With Us info@kalpa.news Whatsapp: 9481252093
Discussion about this post