ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನ ಮಡಸೂರು ವ್ಯಾಪ್ತಿಯಲ್ಲಿ ಕಳೆದ ಐದು ದಿನಳಿಂದ ಪತ್ತೆಯಾಗದೇ ಅತಂಕ ಸೃಷ್ಠಿಸಿದ್ದ ಎರಡು ಆನೆಗಳನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪತ್ತೆ ಮಾಡಲಾಗಿದೆ.
ಈ ಭಾಗದಲ್ಲಿ ಆನೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪತ್ತೆ ಕಾರ್ಯವನ್ನು ಆರಂಭಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆನೆಗಳ ಪತ್ತೆಗಾಗಿ ಡ್ರೋಣ್ ಕ್ಯಾಮೆರಾ #Drone camera ಮೂಲಕ ಕಾರ್ಯಾಚರಣೆ ಆರಂಭಿಸಲಾಗಿತ್ತು.
ನಿರಂತರವಾಗಿ ಡ್ರೋಣ್ ಮೂಲಕ ಪತ್ತೆ ಕಾರ್ಯ ನಡೆಸಲಾಗಿದ್ದು, ಒಂದು ಗಂಡು ಹಾಗೂ ಮತ್ತೊಂದು ಹೆಣ್ಣು ಆನೆಗಳು ಥರ್ಮಲ್ ಸ್ಕ್ಯಾನ್ ಡ್ರೋನ್ ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದಿವೆ.
ಆನೆಗಳು ಪತ್ತೆಯಾದ ನಂತರ ಇಲ್ಲಿನ ರಸ್ತೆ ಸಂಚಾರ ಬಂದ್ ಮಾಡಿ ಶೆಟ್ಟಿಹಳ್ಳಿ ಕಡೆಗೆ ಓಡಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ಮಡಸೂರಿನ ಕಾಡಿನಲ್ಲಿ ಬೀಡು ಬಿಟ್ಟಿದ್ದಂತಹ ಆನೆಗಳನ್ನು ಪತ್ತೆ ಹಚ್ಚಿ, ಅಮಚಿ ಮೂಲಕ ಹೊಳೆಕೊಪ್ಪಕ್ಕೆ ಓಡಿಸಿಕೊಂಡು ಬರಲಾಗಿದೆ. ಅಲ್ಲಿಂದ ದೂಗೂರು, ಉಳವಿ, ಕೈಸೋಡಿ, ಮೈಸಾವಿ ಮೂಲಕ ಶೆಟ್ಟಿಹಳ್ಳಿ ಕಾಡಿಗೆ ಮುಟ್ಟಿಸೋದಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.
ಈ ಕುರಿತಂತೆ ಮಾತನಾಡಿದ ಸಾಗರ-ಸೊರಬ ಡಿಎಫ್’ಓ ಮೋಹನ್ ಕುಮಾರ್, ಸಾಗರ ತಾಲೂಕಿನ ಮಡಸೂರು ಬಳಿಯ ಕಾಡಿನಲ್ಲಿ ಗಂಡು ಹಾಗೂ ಹೆಣ್ಣು ಆನೆಗಳು ಪತ್ತೆಯಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.
ಕೃಷಿಕರು ಕೃಷಿ ಕೆಲಸದಲ್ಲಿ ತೊಡಗಿದ್ದರೆ ಆನೆ ಕಾಣಿಸಿಕೊಂಡಿರುವ ವ್ಯಾಪ್ತಿಯಿಂದ ದೂರ ತೆರಳಬೇಕು. ರಾತ್ರಿ ಮನೆಯಿಂದ ಹೊರ ಬರದಂತೆ ಎಚ್ಚರಿಕೆ ವಹಿಸಬೇಕಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದರು.
ಇಂದಿನ ಥರ್ಮಲ್ ಡ್ರೋನ್ ಸ್ಕ್ಯಾನ್ ಕಾರ್ಯಾಚರಣೆಯಲ್ಲಿ ವೈಡ್ ಲೈಫ್ ಡಿಎಫ್’ಓ ಪ್ರಸನ್ನ ಪಟ್ಟೆಗಾರ್, ಎಸಿಎಫ್ ವಿಜಯ್ ಕಾಳಪ್ಪನವರ್, ಸೊರಬ ಎಸಿಎಫ್ ಸುರೇಶ್ ಕುಳ್ಳಳ್ಳಿ, ಸಾಗರ ಆರ್’ಎಫ್’ಓ ಅಣ್ಣಪ್ಪ.ಬಿ, ಸೊರಬ ಆರ್’ಎಫ್’ಓ ಶ್ರೀಪಾದ್ ನಾಯ್ಕ್, ಅರಣ್ಯ ವೀಕ್ಷಕ ಹಾಗೂ ಡ್ರೋಣ್ ಆಪರೇಟಋ ಗೋಪಿ, ಡಿಆರ್’ಎಫ್’ಓ, ಗಸ್ತು ಅರಣ್ಯ ಪಾಲಕರು ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















