ಕಲ್ಪ ಮೀಡಿಯಾ ಹೌಸ್ | ಸೊರಬ |
ಕೖಷಿಯೇ ಪ್ರಧಾನವಾಗಿರುವ ನಮ್ಮ ನಾಡಿನಲ್ಲಿ ಬಹುತೇಕ ಆಚರಣೆಗಳು ಭೂಮಿ ತಾಯಿಗೇ ಸಂಬಂಧಿಸಿರುತ್ತದೆ. ಅದೇರೀತಿ ವರ್ಷದ ಆಶ್ವೀಜ ಮಾಸದ ಹುಣ್ಣಿಮೆಯಂದು ನಡೆಯುವ ಭೂಮಿ ಹುಣ್ಣಿಮೆ Bhoomi Hunnime ಅಥವಾ ಸೀಗೆ ಹುಣ್ಣಿಮೆ ಚೊಚ್ಚಲ ಗರ್ಭಿಣಿಗೆ ಬಯಕೆ ತೀರಿಸುವ ಸಾಂಕೇತಿಕ ಆಚರಣೆಯಾಗಿದೆ.
ಕೖಷಿ ಕುಟುಂಬಗಳು ಇಂದಿಗೂ ಇಂತಹ ಸಾಂಪ್ರದಾಯಿಕ ಆಚರಣೆಗಳಿಂದ ಹಿಂದೆ ಸರಿದಿಲ್ಲ. ಈ ಹಿನ್ನೆಲೆಯಲ್ಲಿ ಭಾನುವಾರ ನಡೆಯಲಿರುವ ಭೂಮಿಹುಣ್ಣಿಮೆಗೆ ಕೃಷಿ ಕುಟುಂಬಗಳು ತಯಾರಿ ನಡೆಸುತ್ತಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಭೂಮಿ ತಾಯಿಗೆ ಚರಗು ಬೀರುವ ಕಲಾತ್ಮಕ ಜನಪದ ಹಿನ್ನೆಲೆಯನ್ನುಳ್ಳ ಭೂಮಣ್ಣಿ ಬುಟ್ಟಿ ತಯಾರಿ ಭರದಿಂದ ನಡೆಯುತ್ತಿದೆ.
ಕೖಷಿ ಪ್ರಧಾನವಾದ ಭಾರತೀಯ ಸಮಾಜದಲ್ಲಿ ಪ್ರಾಚೀನ ಕಾಲದಿಂದಲೂ ಸ್ತ್ರೀಯರೆ ಶಿಲ್ಪಿಗಳು ಎಂಬುದನ್ನು ನೆನಪಿಸಬೇಕಿದೆ. ಇನ್ನೇನು ಭೂಮಿ ಹುಣ್ಣಿಮೆ ಹತ್ತಿರ ಬಂತು ಎಂದಾಗ ರೈತ ಮಹಿಳೆಯರು ಮಾಟವಾದ ಬುಟ್ಟಿಗಳನ್ನು ತಂದು ಅದಕ್ಕೆ ಜೇಡಿ, ಕೆಮ್ಮಣ್ಣು ಬಳಿದು ಒಣಗಿಸಿಟ್ಟುಕೊಳ್ಳುತ್ತಾರೆ. ಬಳಿಕ ಬುಟ್ಟಿಯ ಮೇಲೆ ಸುಣ್ಣದಿಂದ ಅಥವಾ ಅಕ್ಕಿ ನೆನೆಸಿಟ್ಟು ರುಬ್ಬಿದ ಕಣಕ ಬಳಸಿ ಚಿತ್ತಾರ ಮೂಡಿಸುತ್ತಾರೆ. ಇಲ್ಲಿ ಕುಂಚದ ಬದಲಿಗೆ ಹತ್ತಿಯ ಬತ್ತಿ ಅಥವಾ ಎಳೆ ಬಳಸುವುದು ರೂಢಿ.
Also read: ಭಗವಂತನ ಅಪರೋಕ್ಷ ಜ್ಞಾನ ಪಡೆಯಲು ಏನು ಮಾಡಬೇಕು! ಫಲ ನೀಡುವ ಕೆಲಸಗಳು ಯಾವುವು?
ಯಾವುದೇ ಕೖತಕ ರಾಸಾಯನಿಕ ಬಣ್ಣವಾಗಲಿ, ಬ್ರಷ್ ಬಳಸದೇ ಹತ್ತಿಯಿಂದ ಚಿತ್ತಾರ ಬಿಡಿಸುವುದು ವಿಶೇಷವಾಗಿದೆ. ಈ ಕಲೆಯಲ್ಲಿ ಚುಕ್ಕೆ, ಗೀಟು, ರಂಗೋಲಿ ಪ್ರಧಾನ, ಸಾಮಾನ್ಯವಾಗಿ ಮನೆ, ಗಿಡ, ಮರ, ಹಕ್ಕಿ, ಮನುಷ್ಯ, ಮೀನು, ಪ್ರಾಣಿ, ಏಣಿ, ತೇರು ಮುಂತಾದ ನವಿರು ಎಳೆಗಳು ಇರುತ್ತವೆ. ಇಂತದೆ ಚಿತ್ರ ಧಾನ್ಯ ಸಂಗ್ರಹಿಸಿಡುವ ಪಣತ, ಒಕ್ಕಲಾಟದ ಬಣವೆ, ಧಾನ್ಯದ ರಾಶಿಯ ಬಳಿ, ದೀಪಾವಳಿಯ ಸಮಯದಲ್ಲಿ ಗೋ ಪೂಜೆ, ಬಲೀಂದ್ರನ ಪೂಜೆ, ಮದುವೆ ಹಸೆ ಗೋಡೆಗಳಲ್ಲಿ ಭಿತ್ತರಗೊಳ್ಳುವುದನ್ನು ಕಾಣಬಹುದು. ಆದಾಗ್ಯೂ ಭೂಮಣ್ಣಿ ಬುಟ್ಟಿ ತುಸು ಭಿನ್ನವಾಗಿದ್ದು, ಕೖಷಿ ಮೂಲ ಪರಿಕಲ್ಪನೆ, ಅದಕ್ಕೆ ಪೂರಕವೆನಿಸುವ ಸಾಮಾಗ್ರಿ, ಸಲಕರಣೆಗಳು ಹೆಚ್ಚು ದಟ್ಟವಾಗಿರುತ್ತವೆ.
ಇದು ಬರೀ ಕಲೆಯ ಅಭಿವ್ಯಕ್ತವಲ್ಲ, ಇಲ್ಲಿ ಸಂಪ್ರದಾಯಗಳ ಸಾಂಕೇತಿಕ ಪ್ರಕಟಣೆ ಇದೆ. ಗಿಡ, ಮರ ಕೖಷಿಕನ ಕಲ್ಪನೆಗಳಾದರೆ, ರಂಗೋಲಿ ದುಷ್ಟ ಶಕ್ತಿಯ ನಿಗ್ರಹದ ಸೂಚ್ಯ, ಏಣಿ ಶ್ರೇಣಿಯ, ಅಭಿವೖದ್ಧಿ, ವಿಕಾಸದ, ತೇರು ಆಧ್ಯಾತ್ಮದ, ಪ್ರಾಣಿ, ಪಕ್ಷಿಗಳು ಮಾನವ ಜೀವಿಯೋಡನೆ ಅನ್ಯ ಜೀವಿಗಳು ಹೊಂದಿರುವ ಸಂಯೋಗಾತ್ಮಕ, ಅವಿನಾಭಾವ ಸಂಬಂಧವನ್ನು ಸೂಚಿಸುತ್ತದೆ. ಹೀಗೆ ಈ ಭೂಮಿ ಹುಣ್ಣಿಮೆ ಆರಾಧನೆಯ ತಿರುಳು ಕೂಡ ಈ ಬುಟ್ಟಿಯಲ್ಲಿ ಅಡಕವಾಗಿರುತ್ತದೆ. ಈ ಹಸೆ ಬುಟ್ಟಿ ಕಲೆ ಸಾಮಾನ್ಯವಾಗಿ ರೈತ ಮಹಿಳೆಯರು ಅದರಲ್ಲೂ ಮಲೆನಾಡ ಭಾಗದ ಕೆಲವು ಸಮುದಾಯದಲ್ಲಿ ಆಳವಾಗಿ ಬೇರೂರಿದೆ.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post