ಕಲ್ಪ ಮೀಡಿಯಾ ಹೌಸ್
ಸೊರಬ: ತಾಲ್ಲೂಕಿನ ಚಂದ್ರಗುತ್ತಿ ಕಮೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ಪರಿಶ್ರಮ ಮತ್ತು ಕ್ರಿಯಾಶೀಲತೆಯಿಂದ ಗೋಡೆಗಳ ಮೇಲೆ ಬರೆದ ಚಿತ್ತಾರಗಳು ಎಲ್ಲರ ಚಿತ್ತ ಸೆಳೆಯುತ್ತಿವೆ.
ಏಪ್ರೀಲ್ ತಿಂಗಳಲ್ಲಿ ಮಕ್ಕಳಿಗೆ ರಜೆ ನೀಡಿ ಶಿಕ್ಷಕರಿಗೆ ಮಾತ್ರ ಶಾಲೆಗೆ ಹಾಜರಾಗಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಶಿಕ್ಷಕರು ಸಮಯವನ್ನು ಕ್ರಿಯಾಶೀಲವಾಗಿ ಬಳಸಿಕೊಂಡು ಮಾಸಿ ಹೋಗಿದ್ದ ಶೌಚಾಲಯದ ಗೋಡೆಗಳ ಮೇಲೆ ಚಿತ್ತಾರಗಳನ್ನು ಚಿತ್ರಿಸಿದ್ದು ಗ್ರಾಮಸ್ಥರು ಹಾಗೂ ಇಲಾಖಾ ಅಧಿಕಾರಿಗಳ ಮೆಚ್ಚುಗೆಗೆ ಕಾರಣವಾಗಿದೆ.
ಇದೇ ಮೊದಲ ಬಾರಿಗೆ ಈ ಶಿಕ್ಷಕರು ಗೋಡೆ ಮೇಲೆ ಚಿತ್ತಾರ ಬಿಡಿಸಿದರೂ ಕೂಡ ಎಂಥಾ ಕಲಾವಿದರು ಸಹ ಮೆಚ್ಚುವಂತೆ ಚಿತ್ರಗಳ ರಚಿಸಿದ್ದು, ಗೋಡೆ ಚಿತ್ತಾರಗಳು ಕಣ್ಮನ ಸೆಳೆಯುತ್ತವೆ.
ಉತ್ಸಾಹಿ ಮುಖ್ಯ ಶಿಕ್ಷಕರಾದ ವಾಸುದೇವ್ ಎಸ್. ಅವರ ನೇತೃತ್ವದಲ್ಲಿ ಹವ್ಯಾಸಿ ಚಿತ್ರ ಕಲಾವಿದರಾದ ಶಾಲೆಯ ಶಿಕ್ಷಕರಾದ ಗಣೇಶ್ ಪ್ರಸಾದ್. ಅವರ ನಿರ್ದೇಶನದಲ್ಲಿ. ಎ ಜಿ ಟಿ ಯುವ ಶಿಕ್ಷಕರಾದ ಷಣ್ಮುಖ ಭಾವಿಕಟ್ಟಿ ಅವರ ಸಹಕಾರದೊಂದಿಗೆ ಆಕರ್ಷಕ ಗೋಡೆ ಚಿತ್ತಾರಗಳು ಮೂಡಿ ಬಂದಿವೆ.
ಇಂತಹ ಸೃಜನಶೀಲ ಶಿಕ್ಷಕರು ಶಿಕ್ಷಕ ವೃಂದಕ್ಕೆ ಮಾದರಿಯಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಇಂತಹ ಅನೇಕ ಶಿಕ್ಷಕರು ಎಲೆಮರೆಯ ಕಾಯಿಯಂತೆ ತೊಡಗಿಸಿಕೊಂಡಿದ್ದಾರೆ. ಇಂತಹ ಶಿಕ್ಷಕರ ಪರಿಶ್ರಮದಿಂದ ಸರ್ಕಾರಿ ಶಾಲೆಗಳು ಬೇಡಿಕೆಯ ಶಾಲೆಗಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ವರದಿ: ಪುರುಷೋತ್ತಮ ಚಂದ್ರಗುತ್ತಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post