ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯ ಗಲಭೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್-ಬಜರಂಗದಳ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿಹಿಂಪ ತಾಲ್ಲೂಕು ಕಾರ್ಯದರ್ಶಿ ಎಚ್.ಎಲ್. ಚಂದನ್ ಮಾತನಾಡಿ, ಬೆಂಗಳೂರಿನ ಪುಲಕೇಶಿ ನಗರ (ಕೆಜಿ ಹಳ್ಳಿ) ಮತ್ತು ದೇವರು ಜೀವನ ಮಾಡುವ ಹಳ್ಳಿ (ಡಿಜೆ ಹಳ್ಳಿ)ಯ ಗಲಭೆ ಪೂರ್ವ ನಿಯೋಜಿತ ಕೃತ್ಯವಾಗಿದೆ. ಗಲಭೆಕೋರರು ಪೊಲೀಸ್ ಠಾಣೆ, ಪತ್ರಕರ್ತರು, ದೇವಸ್ಥಾನ ಮತ್ತು ಅಮಾಯಕ ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಹಿಂದುಗಳ ಮನೆ ದ್ವಂಸ ಮಾಡುವ ಜೊತೆಗೆ ಪೊಲೀಸರ ಮತ್ತು ಹಿಂದೂಗಳ ವಾಹನಗಳನ್ನು ಬೆಂಕಿಯಿಟ್ಟು ಧ್ವಂಸ ಮಾಡಿದ ಭಯೋತ್ಪಾದಕ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ವಿಧ್ವಂಸಕ ಕೃತ್ಯದಲ್ಲಿ ತೊಡಗಿದ ಮತಾಂಧ ಗಲಭೆಕೋರರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಬಜರಂಗದಳ ತಾಲೂಕು ಸಂಚಾಲಕ ಬಿ. ಶಶಿಕುಮಾರ್ ಮಾತನಾಡಿ, ಡಿ.ಜೆ. ಹಳ್ಳಿ ಬಳಿ ಸಾಕಷ್ಟು ವಾಹನಗಳಿಗೆ ಬೆಂಕಿ ಹಂಚಿದ್ದಾರೆ. ಅದರ ದಂಡವನ್ನು ಗಲಭೆಕೋರರಿಂದಲೇ ವಸೂಲಿ ಮಾಡಬೇಕು. ಪೊಲೀಸ್ ಠಾಣೆಗೆ ನುಗ್ಗಿ ಮಾಡಿರುವ ದಾಂದಲೆಯ ದಂಡ ವಸೂಲಿ ಮಾಡಬೇಕು. ದೂರು ಸಲ್ಲಿಸಲು ಆಗಮಿಸಿದವರ ಹಿಂದೆ ಸಾವಿರಾರು ಸಂಖ್ಯೆಯ ಜನ ಸೇರಿರುವುದು ಪೂರ್ವ ನಿಯೋಜಿತ ಕೃತ್ಯ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಗಲಭೆಗೆ ಪ್ರಮುಖ ಪಾತ್ರ ವಹಿಸಿರುವ ಹಾಗೂ ಸದಾ ದೇಶ ದ್ರೋಹಿ ಕೃತ್ಯದಲ್ಲಿಯೇ ತೊಡಗಿರುವ ಎಸ್‌ಡಿಪಿಐ/ಪಿಎಫ್‌ಐ ಸಂಘಟನೆಯ ಮೇಲೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ನಿರ್ಬಂಧ ಹೇರಬೇಕು. ಹಿಂದೂಗಳಿಗೆ ಅನ್ಯಾಯವಾದರೆ ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ತಹಶೀಲ್ದಾರ್ ನಫೀಸಾ ಬೇಗಂ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಬಜರಂಗದಳ ತಾಲೂಕು ಸಹ ಸಂಚಾಲಕ ಎಸ್.ಎಂ. ಶರತ್, ಕಾರ್ಯಕರ್ತರಾದ ಭರತ್, ಅರುಣ್ ಭಂಡಾರಿ, ಶಶಿ ಭಂಡಾರಿ, ಅನಿಲ್, ಎಸ್. ಸಂಜಯ್, ದೀಕ್ಷಿತ್, ಶಶಾಂಕ, ಮಂಜುನಾಥ, ಮನೋಜ, ಮಾತೃಶಕ್ತಿ ಶ್ಯಾಮಲಾ ನಾವುಡಾ, ಮಮತಾ ಕಾಳಿಂಗರಾಜ್, ದುರ್ಗಾವಾಹಿನಿಯ ಸಹ ಸಂಚಾಲಕಿ ಭಾರತಿ ಪ್ರವೀಣ್ ಭಂಡಾರಿ ಇತರರಿದ್ದರು.
Get In Touch With Us info@kalpa.news Whatsapp: 9481252093
Discussion about this post