ಕಲ್ಪ ಮೀಡಿಯಾ ಹೌಸ್ | ಸೊರಬ |
ಪ್ರಜೆಗಳೆ ಪ್ರಭುಗಳು ಎಂದು ಬಡ ಮತದಾರರ ಓಲೈಸಿ ಅವರ ಮೇಲೆ ಸಮಾಧಿ ಕಟ್ಟಿ ತಮ್ಮ ಸೌಧ ನಿರ್ಮಿಸಿಕೊಳ್ಳುವ ಜನಪ್ರತಿನಿಧಿಗಳಿಗೆ ನಮ್ಮ ಧಿಕ್ಕಾರವಿದೆ. ನಮ್ಮ ತಾಳ್ಮೆಗೂ ಮಿತಿಯಿದೆ. ಅಭಿವೃದ್ಧಿ ಹೆಸರಲ್ಲಿ ಗ್ರಾಮದಲ್ಲಿ ನಡೆಯುವ ಗಣಿಗಾರಿಕೆ ನಮ್ಮನ್ನು ಜೀವಂತ ಶವವನ್ನಾಗಿಸುತ್ತಿದೆ ಎಂದು ಬಸ್ತಿಕೊಪ್ಪ ಗ್ರಾಮಸ್ಥರು ತಮ್ಮ ಅಳಲು ವ್ಯಕ್ತಪಡಿಸಿದ್ದಾರೆ.
ಶನಿವಾರ ಅಲ್ಲಿನ ಗಣಿ ನಂ ೨ ಇಂದ ಸಿಡಿದ ಸ್ಫೋಟಕದ ಹೊಗೆಗೆ ಕೆಲವು ಮಕ್ಕಳು ವಾಂತಿ ಮಾಡಿಕೊಂಡಿವೆ, ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಕಂಪನ, ಸದ್ದಿಗೆ ಹಗ್ಗ ಹರಿದುಕೊಂಡಿವೆ. ಈಗಲೋ ಆಗಲೋ ಬೀಳುವಂತಿರುವ ಗುಡಿಸಲಲ್ಲಿ ವಾಸಿಸುತ್ತಿರುವ ಕೂಲಿ ಕಾರ್ಮಿಕರು ಮನೆಯಿಂದ ಹೊರಗೆ ಬಂದಿದ್ದಾರೆ. ಗಣಿದಣಿಗಳಿಗೆ ಹಿಡಿ ಶಾಪ ಹಾಕಿದ್ದಾರೆ. ಜಿಲ್ಲಾಧಿಕಾರಿಗಳು ಬಂದು ಗಣಿ ಅಧ್ವಾನಗಳನ್ನು ವೀಕ್ಷಿಸಿ ಜನರಿಗೆ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದಾಗ್ಯೂ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ತಮ್ಮ ಸ್ವಾರ್ಥ ಲಾಲಸೆಯಿಂದ ದನಿಯಿಲ್ಲದ ನಮ್ಮಂತ ಬಡ ಕೂಲಿಕಾರ್ಮಿಕರನ್ನು ಹಂತಹಂತವಾಗಿ ಮುಗಿಸುವ ಕೃತ್ಯ ನಡೆಯುತ್ತಿದೆ ಮುಂತಾದ ಆಕ್ರಂಧನ ಈ ಗ್ರಾಮದಲ್ಲಿ ವ್ಯಕ್ತವಾಗಿದೆ.

Also read: ಟ್ವಿಟರ್ ಸಿಇಒ ಹುದ್ದೆಗೆ ಶೀಘ್ರದಲ್ಲೇ ರಾಜೀನಾಮೆ: ಎಲೆನ್ ಮಸ್ಕ್ ಘೋಷಣೆ
ಇಲ್ಲಿ ನಡೆಯುತ್ತಿರುವ ಗಣಿ, ಗಣಿಯ ದುಷ್ಪರಿಣಾಮಗಳ ಕುರಿತು ವೃಕ್ಷ ಲಕ್ಷ ಆಂದೋಲನ ತಂಡ, ಪರಿಸರಾಸಕ್ತ ತಂಡಗಳು, ತಾಲ್ಲೂಕು ಜೀವವೈವಿಧ್ಯ ಸಮಿತಿ ಮೇಲಿಂದ ಮೇಲೆ ವರದಿ ಸಲ್ಲಿಸಿದರೂ ಕ್ಯಾರೆ ಎನ್ನದ ಜನಪ್ರತಿನಿಧಿಗಳು, ಅಧಿಕಾರಿಗಳು ಇದುವರೆವಿಗೂ ಕೊನೇಪಕ್ಷ ಈ ಊರಲ್ಲಿನ ಜನರ ಸ್ಥಿತಿಗತಿ ಅರಿಯಲು ಇತ್ತ ಎಡತಾಕಿಲ್ಲ. ಚುನಾವಣೆಗಾಗಿ ಮಾತ್ರ ಹಲ್ಲಗಿಂಜುವ, ಕಮಿಷನ್ ಆಸೆಗೆ ನಮ್ಮ ಮೇಲೆ ಸವಾರಿ ಮಾಡುತ್ತಿರುವ ಇಂತವರಿಗೆ ಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತೇವೆ. ಸಧ್ಯದಲ್ಲಿಯೇ ತಾಲ್ಲೂಕು ಕಛೇರಿ, ಜಿಲ್ಲಾಧಿಕಾರಿಗಳ ಕಛೇರಿ, ಶಾಸಕರ ಕಛೇರಿ ಎದುರು ನಿರಶನ ಕೈಗೊಳ್ಳುತ್ತೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post