ಕಲ್ಪ ಮೀಡಿಯಾ ಹೌಸ್ | ಸೊರಬ |
ಕೃಷಿ ಕುಟುಂಬಗಳನ್ನು ಹೊಸಕಿಯಾದರೂ ಅಭಿವೃದ್ಧಿಯಾಗಬೇಕು ಎಂಬ ಧೋರಣೆ ಇರಿಸಿಕೊಂಡ ನಮ್ಮ ಆಡಳಿತದ ಕಾರ್ಯ ವೈಖರಿಯಿಂದ ತಾಲ್ಲೂಕಿನ ಬೆಲವಂತನಕೊಪ್ಪ, ಕಮನವಳ್ಳಿ, ಕುಣೆತೆಪ್ಪ, ತೆವರತೆಪ್ಪ ಗ್ರಾಮಗಳು, ಗ್ರಾಮದ ರೈತ ಕುಟುಂಬಗಳು ಅಪಾಯದ ಸ್ಥಿತಿಯಲ್ಲಿವೆ ಎಂದು ಗ್ರಾಮಸ್ಥರುಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಹಣದ, ರಾಜಕೀಯ ಬಲದ ಮುಂದೆ ಕುಗ್ಗಿ ಹೋಗಿರುವ ನಾವು ಆಡಳಿತ ವ್ಯವಸ್ಥೆಯ ಎದುರು ಬಲಿಪಶು ಆಗಿದ್ದೇವೆ. ನಮ್ಮಲ್ಲೇ ಕೆಲವರು ಆಮಿಷಕ್ಕೆ ಬಲಿಯಾಗಿದ್ದು ಸಾಮಾನ್ಯರ ಸ್ಥಿತಿ ಚಿಂತಾಜನಕವಾಗಿದೆ.
Also Read>> ಸೊರಬ | ಪುಷ್ಟಿಯಿಲ್ಲದ ಪುಷ್ಟಿ ಕಾರ್ಯಕ್ರಮ | ಶಿಕ್ಷಣ ಸಚಿವರು ಗಮನಿಸುವರೇ?
ಅಸಲಿ ವಿಷಯ
ಬೆಲವಂತನಕೊಪ್ಪ ಸನಂ 100 ರಲ್ಲಿ ಕಲ್ಲು ಗಣಿಗಾರಿಕೆ #StoneMining ನಡೆಯುತ್ತಿದ್ದು ಗಣಿ ನಿಯಮಾವಳಿಗಳನ್ನು ಉಲ್ಲಂಘಿಸಿ ಕಲ್ಲು ತೆಗೆಯುವ ಭರಾಟೆಯಲ್ಲಿ ಈಗಾಗಲೇ ಸುಮಾರು 60 ಕ್ಕೂ ಅಧಿಕ ಬೋರ್ವೆಲ್ #Borewell ಕಂಪನದ ತೀವ್ರತೆಯಿಂದ ಅನುಪಯುಕ್ತವಾಗಿದೆ. ಹೊತ್ತಲ್ಲದ ಹೊತ್ತಿನಲ್ಲಿ ಕಲ್ಲು ಸಿಡಿಸುತ್ತಿರುವುದರಿಂದ ಕೃಷಿ ಭೂಮಿಗೆ ಹೋಗಲು ಕೂಡ ಆಗುತ್ತಿಲ್ಲ. ಈಗಾಗಲೇ ಹೋದವರು ಕಲ್ಲು ಸಿಡಿತದ ಗಾಯದಿಂದ ಬಳಲಿದ್ದಾರೆ.
ಜಾನುವಾರು ಮೇಯಿಸಲು ಅವಕಾಶವಿಲ್ಲ. ಅಲ್ಲೇ ಇರುವ ಗ್ರಾಮದ ತಾಯಿ ಕೊಣತ್ಯವ್ವನ ಪೂಜೆಗೂ ತೆರಳದಂತಾಗಿದೆ ಎಂದು ಹತಾಶೆ ವ್ಯಕ್ತಪಡಿಸಿರುವ ಗ್ರಾಮಸ್ಥರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ನಮ್ಮ ಕೊಟ್ಟಿಗೆ ಮನೆ ಗೋಡೆ ಬಿರುಕು ಬಿಟ್ಟಿದೆ, ನಮ್ಮ ಮನೆ ಗೋಡೆ ಸೀಳಿಕೊಂಡಿದೆ ಎಂದು ಹಲವರು ಗಣಿ ಕಂಪನದ ತೀವ್ರತೆಯನ್ನು ಪ್ರತ್ಯಕ್ಷ ತೋರಿಸುತ್ತಾರೆ. ಇದೇ ಸನಂಲ್ಲಿಯೆ ಸ್ಮಶಾನವಿದ್ದು ಸ್ಮಶಾನಕ್ಕೆ ತೆರಳಲು ಅಡ್ಡಿಯಾಗಿದೆ. ಅಲ್ಲಿನ ನೀರು ಕಲುಷಿತಗೊಂಡಿದೆ, ಧೂಳು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ್ದು ಅಸ್ತಮ, ತುರಿಕೆ, ಉಸಿರಾಟದ ಕಾಯಿಲೆಗಳು ಕಾಡುತ್ತಿವೆ.
ವಾಸ್ತವವಾಗಿ ಗಣಿ ಅನುಮತಿ ಪಡೆದಿದೆ ಎನ್ನಲಾಗಿದ್ದು ಗಣಿ ನಿಯಮಗಳ ಉಲ್ಲಂಘನೆಯಾಗಿದೆ. ಇಲ್ಲಿನ ಪರಿಸ್ಥಿತಿ ಕೇಳಲು ಹೋದವರಿಗೆ ಧಮಕಿ ಹಾಕುತ್ತಾರೆ. ಗ್ರಾಮದ ಕೆಲವರು ಅವರ ಪರವಾಗಿ ನಿಂತು ವಿರೋಧಿಸುವುದಕ್ಕೂ ಅಡ್ಡಿಪಡಿಸುತ್ತಿದ್ದಾರೆ. ಹಾಗಾಗಿ ಗಣಿಯವರ ದುರಾಚಾರ ಧಿಕ್ಕರಿಸುವ ಸಾಮರ್ಥ್ಯವೂ ಕ್ಷೀಣಿಸಿದೆ ಎಂದು ಹಪಹಪಿಸುವ ಕೆಲವರು ಮಾಧ್ಯಮಗಳಿಗೆ ಹೆಸರು ಹೇಳಲು ಕೂಡ ಹಿಂಜರಿದಿದ್ದಾರೆ.
ಕೂಡಲೇ ಕಂದಾಯ ಇಲಾಖೆ, ಗ್ರಾಪಂ ಇತ್ತ ಗಮನಹರಿಸಬೇಕು. ಗಣಿ ನಡೆಯದಂತೆ ಕ್ರಮಕೈಗೊಳ್ಳಬೇಕು. ಇಲಾಖೆಗಳು ಮುಂದಾಗದಿದ್ದರೆ ನಾವು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಅವರುಗಳು ಎಚ್ಚರಿಸಿದ್ದಾರೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post