ಕಲ್ಪ ಮೀಡಿಯಾ ಹೌಸ್ | ಸೊರಬ |
ಸೊರಬ: ವಿಧಾನಸಭಾ ಚುನಾವಣೆಗೆ ಸೊರಬ ಕ್ಷೇತ್ರದಿಂದ ಬಿಜೆಪಿಯ ಕುಮಾರ್ ಬಂಗಾರಪ್ಪ ಹಾಗೂ ಕಾಂಗ್ರೆಸ್’ನ ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ಮೂಲಕ ಕ್ಷೇತ್ರದಲ್ಲಿ ಸಹೋದರರ ಸವಾಲ್ ರಂಗೇರಿದೆ.
ಕುಮಾರ್ ಬಂಗಾರಪ್ಪ ನಾಮಪತ್ರ
ನಾಮಪತ್ರ ಸಲ್ಲಿಸುವ ಮೊದಲು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕುಮಾರ ಬಂಗಾರಪ್ಪ, ಕಳೆದ ಐದು ವರ್ಷಗಳ ಅವಧಿಯಲ್ಲಿ ತಾಲ್ಲೂಕಿನಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊAಡು ಚುನಾವಣೆ ಎದುರಿಸಲಿದ್ದೇನೆ ಎಂದರು.
ಜನತೆ ಇನ್ನಷ್ಟು ಅಭಿವೃದ್ಧಿಯ ದಾಹದಲ್ಲಿದ್ದಾರೆ. ಕಳೆದ ಬಾರಿ ಗೆಲುವು ತಂದುಕೊಟ್ಟ ಮತದಾರರಿಗೆ ಯಾವುದೇ ರೀತಿಯಿಂದಲೂ ಮೋಸ ಮಾಡಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ಮೂಲಕ ತಾಲೂಕಿಗೆ ಸುಮಾರು 2 ಸಾವಿರ ಕೋಟಿಯಷ್ಟು ಅನುದಾನವನ್ನು ಮಂಜೂರು ಮಾಡಿಸಿಕೊಂಡು ನೀರಾವರಿ ಯೋಜನೆ, ರಸ್ತೆ, ಚರಂಡಿ, ವಿದ್ಯುತ್’ನಂತಹ ಮೂಲಭೂತ ಸಮಸ್ಯೆಗಳಿಗೆ ವಿನಿಯೋಗಿಸಿ, ಜನರ ವಿಶ್ವಾಸಕ್ಕೆ ಚ್ಯುತಿ ತಂದಿಲ್ಲ ಎಂದರು.
ಮುಂದಿನ ದಿನಗಳಲ್ಲಿಯೂ 25 ವರ್ಷಗಳ ಮುಂದಾಯೋಚನೆ ಇಟ್ಟುಕೊಂಡು ತಾಲೂಕಿನ ಅಭಿವೃದ್ಧಿಯನ್ನು ಮಾಡುವ ಎಲ್ಲಾ ರೀತಿಯ ತಯಾರಿ ನಡೆಸಿದ್ದು, ನಂಜುಂಡಪ್ಪ ವರದಿಯಲ್ಲಿ ಅತ್ಯಂತ ಹಿಂದುಳಿದ ತಾಲೂಕೆಂದು ಗುರ್ತಿಸಿಕೊಂಡಿರುವ ಸೊರಬವನ್ನು ರಾಜ್ಯದಲ್ಲಿಯೇ ಮಾದರಿ ತಾಲೂಕನ್ನಾಗಿಸುವ ಗುರಿ ಹೊಂದಲಾಗಿದೆ ಎಂದ ಅವರು, ಹಿಂದೆ ನೀಡಿದ ಸಹಕಾರವನ್ನು ಮುಂದೆಯೂ ನೀಡುವ ಮೂಲಕ ಕಮಲಕ್ಕೆ ಮತ ನೀಡಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಕಾರಣೀಕರ್ತರಾಗಬೇಕು ಎಂದು ಕರೆ ನೀಡಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ತಾಲೂಕು ಅಭಿವೃದ್ಧಿ ಕಂಡಿದೆ ಎಂದರೆ ಅದಕ್ಕೆ ಕುಮಾರ ಬಂಗಾರಪ್ಪ ಅವರ ಮುಂದಾಲೋಚನೆಯ ಚಿಂತನೆ ಮತ್ತು ಪರಿಶ್ರಮವೇ ಕಾರಣವಾಗಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಸಮಸ್ಯೆಗಳ ಸುಳಿಯಲ್ಲಿದ್ದ ಸೊರಬ ಅಭಿವೃದ್ಧಿ ಕಂಡಿದೆ. ಈವರೆಗಿನ ಅವರ ಅಭಿವೃದ್ಧಿಯೇ ಗೆಲುವಿನ ಹಾದಿ ತೋರಿಸುತ್ತದೆ. ಆದ್ದರಿಂದ ಅಭಿವೃದ್ಧಿ ರಾಜಕಾರಣಕ್ಕೆ ತಮ್ಮ ಮತ ಎಂದಿಗೂ ಮೀಸಲಿಡುವ ಮೂಲಕ ಬೆಂಬಲಿಸಬೇಕು ಎಂದರು.
ನAತರ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಿಂದ ಮುಖ್ಯರಸ್ತೆಯ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಪ್ರವೀಣ್ ಜೈನ್ ಅವರಿಗೆ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ನಾಮಪತ್ರ ಸಲ್ಲಿಸಿದರು. ಅಭಿಮಾನಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಚುನಾವಣಾ ಉಸ್ತುವಾರಿ ಡಿ.ಎಸ್. ಅರುಣ್, ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ, ಮಂಡಲ ಪ್ರಭಾರಿ ಶ್ರೀನಾಥ, ಸೊರಬ ಮಂಡಲ ಅಧ್ಯಕ್ಷ ಪ್ರಕಾಶ ತಲಕಾಲುಕೊಪ್ಪ, ಉಪಾಧ್ಯಕ್ಷ ದೇವೇಂದ್ರಪ್ಪ ಚನ್ನಾಪುರ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ರಾಜನಂದಿನಿ ಮೊದಲಾದವರು ಇದ್ದರು.
ಮಧು ಬಂಗಾರಪ್ಪ ಉಮೇದುವಾರಿಕೆ
ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ಮೂಲಕ ತಮ್ಮ ಸಹೋದರನಿಗೆ ಸವಾಲ್ ಹಾಕಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಜನಪರ ಕಾಳಜಿ, ನಿರಂತರ ಜನ ಸಂಪರ್ಕ ಹಾಗೂ ಉತ್ತಮ ಬಾಂಧವ್ಯ ಬಂಗಾರಪ್ಪ ಅವರು ಹಾಕಿಕೊಟ್ಟ ಹಾದಿಯಾಗಿದ್ದು, ಅದೇ ಹಾದಿಯಲ್ಲಿ ಸಾಗುತ್ತಿರುವ ನಾನು ರಾಜ್ಯದಲ್ಲಿ ಒಬ್ಬ ನಾಯಕನಾಗಿ ಬೆಳೆಯಲು ಉತ್ತಮ ಅವಕಾಶ ಲಭಿಸಿದೆ. ಇದಕ್ಕೆಲ್ಲ ಕಾರಣ ತಾಲ್ಲೂಕಿನ ಮತದಾರರು. ಅವರಿಗೆ ನಾನು ಹಾಗೂ ನನ್ನ ಕುಟುಂಬ ಚಿರಋಣಿ ಎಂದ ಅವರು, ಇಂದು ಎಸ್. ಬಂಗಾರಪ್ಪನವರೇ ನಾಮಪತ್ರ ಸಲ್ಲಿಸಿದಂತಹ ಅನುಭವ ನನಗಾಗಿದೆ ಎಂದರು.
ಈ ಹಿಂದೆ ನೀರಾವರಿಗಾಗಿ ಮತ್ತು ಬಗರ್‌ಹುಕುಂ ಸಾಗುವಳಿದಾರರ ಹಕ್ಕುಪತ್ರಕ್ಕಾಗಿ ಪಾದಯಾತ್ರೆ ಮಾಡಿದ್ದೇನೆ. ಕಚವಿ ಏತ ನೀರಾವರಿ ಯೋಜನೆಗೆ 16 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ. ನನ್ನ ಅವಧಿಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಬಗರ್‌ಹುಕುಂ ಹಕ್ಕುಪತ್ರಗಳನ್ನು ವಿತರಿಸಿ ಹೆಗ್ಗಳಿಕೆ ಇದೆ.
ಡಬಲ್ ಇಂಜಿನ್ ಸರ್ಕಾರದಿಂದ ರೋಸಿ ಹೋಗಿರುವ ರಾಜ್ಯದ ಜನತೆ ಬದಲಾವಣೆ ಬಯಸಿದ್ದಾರೆ. ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್ ಪಕ್ಷ ಸೇರ್ಪಡೆಯಿಂದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಬಲ ಬಂದಿದೆ ಎಂದ ಅವರು, ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸಿದ ಫಲದಿಂದಾಗಿ ಕಾಂಗ್ರೆಸ್ ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಪಡೆಯವುದರ ಮೂಲಕ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೆರವಣಿಗೆಯಲ್ಲಿ ಸಹೋದರಿ ಗೀತಾ ಶಿವರಾಜ್‌ಕುಮಾರ್, ಸುಜಾತಾ ತಿಲಕ್‌ಕುಮಾರ್, ಪತ್ನಿ ಅನಿತಾ ಮಧು ಬಂಗಾರಪ್ಪ, ಪುತ್ರ ಸೂರ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಮುಖಂಡರಾದ ತಬಲಿ ಬಂಗಾರಪ್ಪ, ಎಚ್.ಗಣಪತಿ, ಕೆ. ಮಂಜುನಾಥ, ಕೆಪಿ ರುದ್ರಗೌಡ, ಶಿವಲಿಂಗೇಗೌಡ, ಸದಾನಂದಗೌಡ, ಸುರೇಶ್ ಹಾವಣ್ಣನವರ್, ಎಂ.ಡಿ. ಶೇಖರ್, ನಾಗಪ್ಪ ಮಾಸ್ತರ್, ಕೆ.ವಿ. ಗೌಡ, ಸುಜಾತ ಜೋತಾಡಿ, ತಾರಾ ಸತೀಶ್ ಮೊದಲಾದವರು ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post