ಕಲ್ಪ ಮೀಡಿಯಾ ಹೌಸ್ | ಸೊರಬ |
ತರಕಾರಿ ಬೇಕಾ ತರಕಾರಿ? ತಾಜಾ ತಾಜಾ ತರಕಾರಿ? ಬನ್ನಿ ಸರ್ ಬನ್ನಿ ಆಫ್ ರೇಟ್‌ಗೆ ಕೊಡ್ತೀವಿ.. ಸೊಪ್ಪು, ಹೂ, ಹಣ್ಣು ಏನೇ ತೊಗಳ್ಳಿ ಕಡಿಮೆ ಬೆಲೆಗೆ ಕೊಡ್ತೀವಿ. ಇದು ಯಾವುದೋ ನಗರ, ಪಟ್ಟಣ, ಸಂತೆಯಲ್ಲ. ಸರ್ಕಾರಿ ಶಾಲೆಯೊಂದರ ಮಕ್ಕಳ ಸಂತೆಯ ಚಿತ್ರಣ.
ಹಿಂದೆ ಸಂತೆಗಳು ಅಂದ್ರೆ ಗ್ರಾಮೀಣರ ಜೀವನದ ಭಾಗವಾಗಿದ್ದವು. ಎಲ್ಲಾ ರೀತಿಯ ವಸ್ತುಗಳನ್ನು ಕೊಳ್ಳುವುದು. ಮಾರುವುದು ಸಂತೆಯ ವಿಶೇಷ, ವಾರಕ್ಕೊಂದು ಸಂತೆ ಬಂತೆಂದರೆ ಅಲ್ಲಿ ಎಲ್ಲಾ ವಸ್ತು ಸಿಗಲಿವೆ, ಸಂತೆಗೆ ಹೋಗಿ ಬರೋದೆ ಒಂದು ಸುಂದರ ಅನುಭವದಂತಿತ್ತು, ಆದರೆ ಇಂದು ಸಂತೆಗಳು ಅಲ್ಲೊಂದು ಇಲ್ಲೊಂದು ಕಾಣ ಬಹುದಾಗಿದೆ. ಮಾಲ್, ಬಿಗ್ ಮಾರ್ಕೆಟ್‌ಗಳ ಹಾವಳಿಯಿಂದ ಇಂದು ಸಂತೆಗಳು ಕಳೆಗುಂದಿವೆ.
ಪಟ್ಟಣ, ನಗರಗಳಲ್ಲಿ ದೊಡ್ಡ ದೊಡ್ಡ ಮಾರ್ಕೆಟ್‌ಗಳು ತಲೆ ಎತ್ತಿ ಸಂತೆ, ಸಣ್ಣ ಮಾರುಕಟ್ಟೆಗಳಿಗೆ ಹೊಡೆತ ನೀಡಿವೆ. ಸಂತೆ ಅಂದ್ರೆ ಎಷ್ಟೋ ಮಕ್ಕಳಿಗೆ ತಿಳಿದೇ ಇಲ್ಲ. ಸಂತೆ ಮತ್ತು ವ್ಯವಹಾರದ ಮಹತ್ವ ಸಾರುವ ನಿಟ್ಟಿನಲ್ಲಿ ಆಶಾಕಿರಣ ಪಬ್ಲಿಕ್ ಶಾಲೆ ಬಸವೇಶ್ವರ ನಗರ ಸೊರಬದಲ್ಲಿ ಮಕ್ಕಳ ಸಂತೆ ಏರ್ಪಡಿಸಲಾಗಿತ್ತು. ಈ ಸಂತೆ ಮೇಳದಲ್ಲಿ ವಿದ್ಯಾರ್ಥಿಗಳು ಹಣ್ಣು, ತರಕಾರಿ, ಹೂವು, ತಿಂಡಿ ಪದಾರ್ಥಗಳನ್ನು ಮಾರಾಟ ಮಾಡಿ ತಮ್ಮ ವ್ಯಾಪಾರ ಕೌಶಲ್ಯ ಪ್ರದರ್ಶಿಸಿ ಸಡಗರಪಟ್ಟರು.
ಶನಿವಾರ ನಡೆದ ಮಕ್ಕಳ ಸಂತೆಯನ್ನು ಶ್ರೀಪಾದ ಬಿಚ್ಚುಗತ್ತಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ, ಅವರು ಕೇವಲ ಪುಸ್ತಕದ ಜ್ಞಾನವಷ್ಟೆ ಮಕ್ಕಳಿಗೆ ಸಾಲದು, ಅವರಿಗೆ ವ್ಯವಹಾರ ಜ್ಞಾನವೂ ಅಗತ್ಯ. ಬಾಲ್ಯದಿಂದಲೇ ಓದಿನ ಜೊತೆಗೆ ಜೀವನಕ್ಕೆ ಅಗತ್ಯ ನೆರವಾಗುವ ಇನ್ನಿತರ ಜ್ಞಾನವನ್ನು ಒದಗಿಸಿಕೊಡುವ ಮೂಲಕ ಶಿಕ್ಷಣ ಸಂಸ್ಥೆಗಳು ಮಾದರಿಯಾಗಬೇಕು.
ಆಶಾಕಿರಣ ಸಂಸ್ಥೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ, ಬೌದ್ಧಿಕ ವಿಕಾಸಕ್ಕೆ ಪೂರಕವಾಗಿ ಜ್ಞಾನವನ್ನು ಹಂಚಿಕೊಳ್ಳುತ್ತಿರುವುದು ಶ್ಲಾಘನೀಯ. ಮುಂಪೀಳಿಗೆಯ ಜೀವನೋಪಾಯಕ್ಕೆ ಆಶಾ ಕಿರಣ. ಮಕ್ಕಳ ಅಭಿರುಚಿಗನುಗುಣವಾಗಿ ಅವು ಬೆಳೆಯುವ ಹಂತದ ಆಸಕ್ತಿಗಳನ್ನು ಗಮನಿಸಿ ಪೋಷಿಸುವ ಜವಾಬ್ಧಾರಿ ಪೋಷಕರದ್ದು, ಮಾನವಿಕ ಆವರಣವನ್ನು ಪಠ್ಯೇತರ ಚಟುವಟಿಕೆಗಳ ಮುಖೇನ ತಿಳಿಸಿಕೊಡುವ ಉತ್ಸಾಹ, ಕರ್ತವ್ಯ ಸಮಾಜದ್ದು. ಮಕ್ಕಳಲ್ಲಿ ವ್ಯವಹಾರಿಕ ಪ್ರಜ್ಞೆ ಬೆಳೆಸಲು ಹಾಗೂ ಗಣಿತ ಜ್ಞಾನ ಹೆಚ್ಚಿಸಲು ಪ್ರತ್ಯೇತರ ಚಟುವಟಿಕೆಯಾಗಿ ಶಾಲೆಗಳಲ್ಲಿ ಮಕ್ಕಳ ಸಂತೆ ಏರ್ಪಡಿಸಲಾಗುತ್ತಿರುವುದು, ಮಕ್ಕಳು ಇಂತಹ ಚಟುವಟಿಕೆಗಳ ಮೂಲಕ ಪರಸ್ಪರ ಬೆರೆಯುವ, ಸಂಭ್ರಮಿಸುವ ಜೊತೆಗೆ ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು ಎಂದರು.
ಶಾಲಾ ಮುಖ್ಯೋಪಧ್ಯಾಯಿನಿ ಶೋಭಾ ಮಾತನಾಡಿ, ಶೈಕ್ಷಣಿಕ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ ಬೆಳೆಸಲು ಮಕ್ಕಳ ಸಂತೆ ಮೇಳಗಳು ಉತ್ತಮ ವೇದಿಕೆಯಾಗಿದೆ ವಿದ್ಯಾರ್ಥಿಗಳಿಗೆ ಓದು ಮುಖ್ಯ ಮನಸಿಟ್ಟುಕೊಂಡು ಚೆನ್ನಾಗಿ ಓದಿ ತಮ್ಮಗುರಿ ಸಾಧಿಸಲು ಗಮನ ನೀಡಬೇಕು. ಶಿಕ್ಷಕರು, ಪೋಷಕರು ನೀಡುವ ಮಾರ್ಗದರ್ಶನ ಅನುಸರಿಸಿ ಆದರ್ಶಗುಣ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಸುಮಾರು 120 ವಿದ್ಯಾರ್ಥಿಗಳು ಭಾಗವಹಿಸಿದ್ದರು 30 ಹೆಚ್ಚು ಅಂಗಡಿಗಳು ಶಾಲೆಯ ಅವರಣದಲ್ಲಿ ತಲೆಯೆತ್ತುವ ಮೂಲಕ ಸುಮಾರು 40ಸಾವಿರಕ್ಕೂ ಹೆಚ್ಚು ವಹಿವಾಟು ನಡೆಸುವಲ್ಲಿ ಮಕ್ಕಳಲ್ಲೂ ವ್ಯಾಪಾರದ ಅನುಭವ ಮೂಡಿಸಲು ಕಾರಣವಾಯಿತು.
ಶಾಲಾ ಶಿಕ್ಷಕರು ಮತ್ತು ಪೋಷಕರು ಹಾಜರಿದ್ದು ಮಕ್ಕಳ ಸಂತೆಯಲ್ಲಿ ಖರೀದಿ ಮಾಡಿ ಮಕ್ಕಳಲ್ಲಿ ಉತ್ಸಾಹ ಮೂಡಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















