ಕಲ್ಪ ಮೀಡಿಯಾ ಹೌಸ್ | ಸೊರಬ |
ರೈಡರ್ಸ್ ಗಳು ಕೇವಲ ಸವಾರಿಯನ್ಬಷ್ಟೆ ಮಾಡುತ್ತಿಲ್ಲ. ತಮ್ಮ ಅವಿಸ್ಮರಣೀಯ ಸವಾರಿಯಲ್ಲಿ ಪರಿಸರ ಕಾಳಜಿಯನ್ನೂ ಬಿಂಬಿಸುತ್ತಿರುವುದು ಶ್ಲಾಘನೀಯ ಎಂದು ಪರ್ಯಾವರಣದ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
ಸಾಗರ ಆರ್ ಬಿ ಡಿ ರೈಡರ್ಸ್ ಗಳು ಮಳೆಗಾಲದ ಸೊಬಗು, ಪ್ರಕೃತಿ ಪ್ರೀತಿ ಮತ್ತು ಸಾಮಾಜಿಕ ಕಾಳಜಿಯ ಸಂದೇಶದೊಂದಿಗೆ ತಾಲ್ಲೂಕಿನ ಗುಡವಿ ಪಕ್ಷಿಧಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಕುರಿತು ಮಾತನಾಡಿದರು.
ಸಮಾಜದೊಂದಿಗೆ ಸಂಪರ್ಕ ಬೆಳೆಸುವ ಶಕ್ತಿ ಹೊಂದಿರುವ ರೈಡರ್ಸ್ ಸಮೂಹ ಹೇಗೆ ಒಗ್ಗಟ್ಟಿನಿಂದ ಸಮಾಜಮುಖಿ ಕಾರ್ಯಗಳಿಗೆ ಕೈಜೋಡಿಸಬಹುದು, ಮುಂದಿನ ದಿನಗಳಲ್ಲಿ ಸಾಮಾಜಿಕ ಕಾಳಜಿಯ ಕೆಲಸಗಳಲ್ಲಿ ಹೇಗೆ ಪರಿಣಾಮಕಾರಿ ಪಾತ್ರ ವಹಿಸಬಹುದು ಎಂಬ ಬಗ್ಗೆ ಮಾಹಿತಿ ನೀಡಿದ ಅವರು ಮಲೆನಾಡಿನ ಜ್ವಲಂತ ಸಮಸ್ಯೆಯಾಗಿ, ಮುಂದಿನ ಪೀಳಿಗೆಯ ಉಸಿರು, ಹಸಿರಿಗೆ ಧಕ್ಕೆ ತರುತ್ತಿರುವ ಅಣು ವಿದ್ಯುತ್ ಸ್ಥಾವರ, ಶರಾವತಿ, ವರದಾ, ಬೇಡ್ತಿ, ಅಘನಾಶಿನಿಯಂತಹ ಜೀವನದಿಗಳ ಸಂರಕ್ಷಣೆಗೆ ಕಟಿ ಬದ್ಧರಾಗಬೇಕು ಎಂದರು.
ಹೆಲ್ಪಿಂಗ್ ಹ್ಯಾಂಡ್ ನ ಮಧುರಾಮ್ ಮಾತನಾಡಿ, ರೈಡರ್ಸ್‌ಗಳು ಕೇವಲ ಸವಾರಿ ಮಾಡುವವರಲ್ಲ, ರೈಡಿಂಗ್ ಮೂಲಕ ಹೊಸ ಸ್ನೇಹಗಳು, ವಿಶೇಷ ವ್ಯಕ್ತಿಗಳ ಪರಿಚಯ, ಪರಸ್ಪರ ಬಾಂಧವ್ಯ ಗಟ್ಟಿಯಾಗುವುದು ಮತ್ತು ಸಮಾಜದಲ್ಲಿ ಒಗ್ಗಟ್ಟು ಮೂಡುವುದು ಸಾಧ್ಯವಾಗುತ್ತದೆ ಎಂದರು.
ಆರ್ ಬಿ ಡಿ ಸಂಸ್ಥೆಯ ಉಪಾಧ್ಯಕ್ಷರಾದ ಗಣೇಶ್ ರೈಡರ್ಸ್‌ಗಳ ಸಂಘಟನೆ, ಅದರ ಉದ್ದೇಶ ಹಾಗೂ ಇಂತಹ ಕಾರ್ಯಕ್ರಮಗಳಿಗೆ ನೀಡುತ್ತಿರುವ ಪ್ರೋತ್ಸಾಹ ಮತ್ತು ಬೆಂಬಲದ ಮಹತ್ವವನ್ನು ವಿವರಿಸಿದರು.
ರೈಡನರ್ ಡ್ಯಾನಿ ಅವರು ತಮ್ಮ 10 ವರ್ಷಗಳ ರೈಡಿಂಗ್ ಅನುಭವವನ್ನು ಹಂಚಿಕೊಂಡು, ಸುರಕ್ಷಿತ ಸವಾರಿ, ಶಿಸ್ತು ಮತ್ತು ತಂಡದ ಒಗ್ಗಟ್ಟಿನ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಆರ್ ಬಿ ಡಿ ಮೋಟಾರ್ಸ್ ವತಿಯಿಂದ ಪರಿಸರ ಕಾಳಜಿಯ ಭಾಗವಾಗಿ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಹಸಿರು ಪರಿಸರ ನಿರ್ಮಾಣ ಮತ್ತು ಪ್ರಕೃತಿ ಸಂರಕ್ಷಣೆಯ ಸಂದೇಶವನ್ನು ಈ ಮೂಲಕ ಸಾರಲಾಯಿತು.
ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಸಾಗರ ಭಾಗದ ಬುಲೆಟ್ ರೈಡರ್ಸ್, ಆರ್ ಬಿ ಡಿ ಸಿಬ್ಬಂದಿ ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









