ಕಲ್ಪ ಮೀಡಿಯಾ ಹೌಸ್ | ಸೊರಬ |
ಕ್ರೀಡಾಕೂಟಗಳಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದ್ದು, ಕ್ರೀಡಾಪಟುಗಳಲ್ಲಿ ಸ್ಪರ್ಧಾ ಮನೋಭಾವ ಮುಖ್ಯವಾಗಿರುತ್ತದೆ ಎಂದು ತಹಶೀಲ್ದಾರ್ ಹುಸೇನ್ ಸರಕಾವಸ್ ಹೇಳಿದರು.
ಶುಕ್ರವಾರ ಪಟ್ಟಣದ ಎಸ್. ಬಂಗಾರಪ್ಪ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ತಾಲೂಕು ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಹಮ್ಮಿಕೊಂಡ 17 ವರ್ಷದೊಳಗಿನ ಪ್ರೌಢಶಾಲೆಗಳ ತಾಲೂಕು ಮಟ್ಟದ ಬಾಲಕ-ಬಾಲಕಿಯರ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಿದೆ. ಕ್ರೀಡೆಗಳಲ್ಲಿ ಗೆದ್ದವರು ಬೀಗದೇ, ಸೋತವರು ಕುಗ್ಗದೇ, ಅನುಭವವೆಂದು ಭಾವಿಸಬೇಕು. ನಿರಂತರ ಅಭ್ಯಾಸ, ಕಠಿಣ ಶ್ರಮ ಪಟುವ ಕ್ರೀಡಾಪಟು ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡುವುದರಲ್ಲಿ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರವೂ ಸಹಕಾರ ನೀಡುತ್ತದೆ. ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುವ ಮೂಲಕ ತಮ್ಮ ಶಾಲೆ ಮತ್ತು ಪೋಷಕರಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಟಿ. ಬಾಲಚಂದ್ರ ಮಾತನಾಡಿ, ವಿದ್ಯಾರ್ಥಿಗಳು ದೇಶವನ್ನು ಕಟ್ಟುವ ಸತ್ಪ್ರಜೆಗಳಾಗಬೇಕು. ಕ್ರೀಡಾಕೂಟಗಳು ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ಕ್ರೀಡಾಪಟುಗಳಲ್ಲಿನ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸುವ ಕೆಲಸ ಶಿಕ್ಷಕರ ಮತ್ತು ಶಿಕ್ಷಕರ ಮೇಲಿರುತ್ತದೆ ಎಂದರು.
ತಹಶೀಲ್ದಾರ್ ಹುಸೇನ್ ಸರಕಾವಸ್ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಲಿಂಗರಾಜ ಒಡೆಯರ್ ಕ್ರೀಡಾಜ್ಯೋತಿ ಸ್ಥಾಪಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಸ್. ರಘುಪತಿ, ಕಾರ್ಯದರ್ಶಿ ಧರ್ಮಪ್ಪ, ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಪಾಣಿ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಮಹೇಶ್ ಖಾರ್ವಿ, ಸಮುದಾಯ ಆರೋಗ್ಯಾಧಿಕಾರಿ ಎಚ್.ವೈ. ರಕ್ಷಿತಾ, ದೈಹಿಕ ಶಿಕ್ಷಕರಾದ ಪರಮೇಶ್ವರಪ್ಪ, ಜಯಶ್ರೀ, ವಿನಾಯಕ, ಡಿ. ಕಮಲಾಕರ ಸೇರಿದಂತೆ ಇತರರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post