ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನ ಕುಬಟೂರು ಗ್ರಾಮದ ಶ್ರೀ ಚಿಂತಾಮಣಿ ನರಸಿಂಹ ಸ್ವಾಮಿ ದೇವರ ವಿಗ್ರಹ ಭಗ್ನ ಮಾಡಲಾಗಿದ್ದು, ದೇವಸ್ಥಾನ ಸಮಿತಿಯ ಎನ್. ವೆಂಕಟೇಶ್ ನೀಡಿದ ದೂರಿನ ಮೇರೆಗೆ ಮಂಗಳವಾರ ಆನವಟ್ಟಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದೇವರ ಮೂರ್ತಿಯು ಎರಡನೇ ಶತಮಾನಕ್ಕೆ ಸೇರಿದ್ದಾಗಿದ್ದು, ಮಂಗಳವಾರ ಬೆಳಗಿನ ಜಾವ ದೇವಸ್ಥಾನಕ್ಕೆ ಪೂಜೆಗೆಂದು ಅರ್ಚಕ ವೇಣುಗೋಪಾಲ್ ಆಚಾರ್ ತೆರಳಿದ್ದಾರೆ. ಈ ವೇಳೆ ದೇವಸ್ಥಾನದ ಬೀಗ ಒಡೆದಿರುವುದು ಹಾಗೂ ದೇವರ ಮೂರ್ತಿಗೆ ಬಟ್ಟೆ ಕಟ್ಟಿರುವುದು ಕಂಡು ಬಂದಿದೆ. ಬಟ್ಟೆಯನ್ನು ತೆರವು ಮಾಡಿದಾಗ ದೇವರ ಮೂರ್ತಿಯ ಮುಖದ ಭಾಗದಲ್ಲಿ ಭಗ್ನವಾಗಿರುವುದು ಗೋಚರಿಸಿದೆ. ವಿಷಯ ತಿಳಿಯುತ್ತಿದ್ದಂತೆ ಹಿಂದೂ ಜಾಗರಣಾ ವೇದಿಕೆ, ವಿಹಿಂಪ ಹಾಗೂ ಭಜರಂಗದಳ ಮತ್ತು ಸ್ಥಳೀಯರು ದೇವಸ್ಥಾನಕ್ಕೆ ದೌಡಾಯಿಸಿದರು. ಮೂರ್ತಿಯನ್ನು ಭಗ್ನಗೊಳಿಸಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಡಿವೈಎಸ್ ಪಿ ಕೆ.ಇ. ಕೇಶವ್ ರಾವ್, ಪಿಎಸ್ಐ ಚಂದನ್ ಛಲವಾದಿ ಸೇರಿದಂತೆ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರ ಸ್ವ ಗ್ರಾಮದಲ್ಲಿ ದೇವರ ಮೂರ್ತಿ ಭಗ್ನವಾದ ವಿಷಯ ಗಂಭೀರ ಸ್ವರೂಪ ಪಡೆಯುವುದನ್ನು ಅರಿತ ಪೊಲೀಸರು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದರು. ವಿವಿಧಡೆ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದರು.
ಈ ವೇಳೆ ಹಾನಗಲ್ ತಾಲೂಕಿನ ಗೋಂದಿ ಗ್ರಾಮದ ಕೋಟೇಶಪ್ಪ ಎಂಬುವನ್ನು ವಶಕ್ಕೆ ಪಡೆದಿದ್ದಾರೆ. ಮೂರ್ತಿಯನ್ನು ಭಗ್ನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ ಮೇಲ್ನೋಟಕ್ಕೆ ಆತ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದ್ದು, ಆತನನ್ನು ಧಾರವಾಡದ ಮಾನಸಿಕ ಆಸ್ಪತ್ರೆಗೆ ಕಳುಹಿಸಿ ಇಲಾಖೆಯಿಂದ ಚಿಕಿತ್ಸೆ ಕೊಡಿಸುವುದಾಗಿ ತಿಳಿದು ಬಂದಿದೆ. ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post