ಸೊರಬ: ತಾಲೂಕಿನ ಗಡಿ ಭಾಗವಾದ ಬಾರಂಗಿ ಹಾಗು ತೊರವಂದ ಗ್ರಾಮಗಳಿಗೆ ಜಿಲ್ಲಾಧಿಕಾರಿ ದಯಾನಂದ ಭೇಟಿ ನೀಡಿ ಜನಸಂಪರ್ಕ ಸಭೆ ನಡೆಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರು ತಮ್ಮ ಗ್ರಾಮಗಳ ಹಲವು ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಕಳೆದ ಮೂರು ವರ್ಷದಿಂದ ತಾಲೂಕು ಬರಗಾಲದಿಂದ ತತ್ತರಿಸಿದ್ದು, ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿ ಕಾರ್ಯಕ್ರಮವನ್ನು ಆರಂಭಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಎಲ್ಲಾ ಗ್ರಾಮಸ್ಥರು ಎದ್ದು ನಿಂತು ಪ್ರತಿಭಟಿಸಿದರೆ, ಗುಡ್ಡದ ಬೆಣ್ಣೆಗೆರಿ ಗ್ರಾಮದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡಲಾಗುತ್ತಿದ್ದು ಅಂಗಡಿಗಳನ್ನು ಮುಚ್ಚಿಸುವಂತೆ ಸುಮಾರು 30 ರಿಂದ 50 ಜನ ಮಹಿಳೆಯರು ಜಿಲ್ಲಾಧಿಕಾರಿಗಳ ಮುಂದೆ ಪ್ರತಿಭಟನೆ ನಡೆಸಿದರು.
ಬಾರಂಗಿ ಮತ್ತು ಹಂಚಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರೈತರಿಗೆ ಬರಬೇಕಾದ ಬೆಳೆ ವಿಮೆ ವಿತರಣೆಯಲ್ಲಿ ಅನ್ಯಾಯವಾಗಿದ್ದು, ಸಮರ್ಪವಾಗಿ ಬೆಳೆ ಪರಿಹಾರ ಸಿಗದೆ, ರೈತರು ಅನ್ಯ ಮಾರ್ಗ ಹಿಡಿಯುವಂತಾಗಿದೆ ಅಲ್ಲದೆ ವಿತರಣೆ ಮಾಡುವಲ್ಲಿಯೂ ತಾರತಮ್ಯ ವೆಸಗಿದ್ದಾರೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು.
ಜಿಲ್ಲಾಧಿಕಾರಿ ದಯಾನಂದ ಮಾತನಾಡಿ ಬರಪೀಡಿತ ತಾಲೂಕೆಂದು ಸರ್ಕಾರ ಘೋಷಣೆ ಮಾಡಬೇಕಾಗಿದೆ. ಆ ಅಧಿಕಾರ ನನಗೆ ಇರುವುದಿಲ್ಲ. ತಮ್ಮ ಮನವಿಯನ್ನು ಸರ್ಕಾರದ ಗಮನಕ್ಕೆ ಕೂಡಲೇ ತರಲಾಗುವುದು ಎಂದು ಭರವಸೆ ನೀಡಿದ ಮೇರೆಗೆ ಕಾರ್ಯಕ್ರಮ ಪ್ರಾರಂಭವಾಯಿತು.
ಸ್ಥಳದಲ್ಲಿದ್ದ ಅಬಕಾರಿ ಅಧಿಕಾರಿಗಳಿಗೆ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಅಕ್ರಮ ಸಾರಾಯಿ ಅಂಗಡಿಗಳನ್ನು ಕೂಡಲೆ ಮುಚ್ಚಿಸುವಂತೆ ಹಾಗೂ ಮುಂದೆ ಪುನಃ ತೆರೆಯದಂತೆ ನೋಡಿಕೊಳ್ಳಬೇಕೆಂದು ಆದೇಶಿಸಿದರು.
ತೊರವಂದ ಗ್ರಾಮದ ಜನತಾ ದರ್ಶನ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಗ್ರಾಮದ ಸುಮಾರು 150 ಜನ ವಿದ್ಯಾರ್ಥಿಗಳು ಆಗಮಿಸಿ ನಾಳೆಯಿಂದಲೇ ಬಸ್ಸಿನ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಪ್ರತಿಭಟನೆಯ ಮೂಲಕ ಆಗ್ರಹಿಸಿದಾಗ ಜಿಲ್ಲಾಧಿಕಾರಿ ತಕ್ಷಣ ಸ್ಪಂದಿಸಿ ಸಾರಿಗೆ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಶಾಸಕ ಕುಮಾರ್ ಬಂಗಾರಪ್ಪ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇಗೌಡ, ಸಾಗರ ಉಪ ವಿಭಾಗಾಧಿಕಾರಿ ನಾಗರಾಜ್ ಸಿಂಗ್ರೇರ್, ತಹಶೀಲ್ದಾರ್ ಕೈಕಶನ್, ಗ್ರೇಡ್2 ತಹಶೀಲ್ದಾರ್ ರಶ್ಮಿ, ತಾಪಂ ಅಧ್ಯಕ್ಷೆ ನಯನಾ ಶ್ರೀಪಾದ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು,ಸುರೇಶ್ ಹಾವಣ್ಣನವರ್ ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ನಾಗರಾಜ್,ತಹಸೀಲ್ದಾರ್ ಕೈಕಸನ್, ರಶ್ಮಿ (ಗ್ರೇಟ್ 2) ತಹಸೀಲ್ದಾರ್, ತಾಪಂ ಅಧ್ಯಕ್ಷ ಸುರೇಶ್ ಹಾವಣ್ಣನವರ್, ಸ್ಥಳೀಯ ಜನಪ್ರತಿನಿಧಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗು ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ: ಮಧುರಾಮ್, ಸೊರಬ
Discussion about this post