ಕಲ್ಪ ಮೀಡಿಯಾ ಹೌಸ್ | ಸೊರಬ |
ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಿಕೊಂಡು ಬರುತ್ತಿರುವ ಲಯನ್ಸ್ ಸಂಸ್ಥೆ ಗ್ರಾಮೀಣ ಪ್ರದೇಶಗಳಲ್ಲಿನ ಅವಶ್ಯಕತೆ ಗಳನ್ನು ಪೂರೈಸುವಲ್ಲಿ ಮುಂಚೂಣಿಯಲ್ಲಿದೆ ಎಂದು ಲಯನ್ಸ್ ಸಂಸ್ಥೆಯ ಪಿಡಿಜಿ ಹೆಚ್.ಎಸ್. ಮಂಜಪ್ಪ ಹೇಳಿದರು.
ತಾಲ್ಲೂಕು ಬರಿಗೆ ಗ್ರಾಮದ ಬಹುಮುಖ ಪ್ರತಿಭೆ ಹವ್ಯಾಸಿ ಪತ್ರಕರ್ತರು ಮತ್ತು ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಬಿ.ಎನ್.ಸಿ.ರಾವ್ ಅವರಿಗೆ ವಿಶ್ವ ಛಾಯಾಗ್ರಹಣ ದಿನ ಮತ್ತು ಸದ್ಭಾವನಾ ದಿನದ ಅಂಗವಾಗಿ ಲಯನ್ಸ್ ಸಂಸ್ಥೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಎಲೆ ಮರೆಯ ಕಾಯಿಯಂತೆ ಗ್ರಾಮೀಣ ಪ್ರದೇಶಗಳಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಸಮಾಜದ ಕರ್ತವ್ಯ. ಈ ನಿಟ್ಟಿನಲ್ಲಿ ಪ್ರತಿಭಾನ್ವಿತರ ನೆಲೆಯಲ್ಲಿಯೆ ಗೌರವಿಸುತ್ತಿರುವುದು ಔಚಿತ್ಯ ಪೂರ್ಣ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶ್ರೀಪಾದ ಬಿಚ್ಚುಗತ್ತಿ, ಸನ್ಮಾನಿತರು ಸೃಜನಶೀಲ ಚಟುವಟಿಕೆಗಳಲ್ಲಿ ನಿರಂತರ ಕ್ರಿಯಾಶೀಲರಾಗಿರುವ ಜೊತೆಗೆ ಕುಟುಂಬದ ಎಲ್ಲಾ ಸದಸ್ಯರು ಬೇರೆಬೇರೆ ಚಟುವಟಿಕೆಗಳ ಮೂಲಕ ಗಮನಸೆಳೆದಿದ್ದಾರೆ. ಇಂತಹವರನ್ನು ಸಂಸ್ಥೆ ಗುರುತಿಸಿದ್ದು ಶ್ಲಾಘನೀಯ ಎಂದ ಅವರು ವಿಶ್ವಛಾಯಾಗ್ರಹಣ ದಿನ, ಸದ್ಭಾವನ ದಿನ ಔಚಿತ್ಯತೆ ಕುರಿತು ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಬಿಎನ್ಸಿ ರಾವ್ ತಮ್ಮ ಹವ್ಯಾಸದ ಏರಿಳಿತ ಕುರಿತು ಅನುಭವ ಹಂಚಿಕೊಂಡರು. ಲಯನ್ಸ್ ಸಂಸ್ಥೆ ಅಧ್ಯಕ್ಷ ಡಿ.ಎಚ್.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಳವಿ ಲಯನ್ಸ್ ಸಂಸ್ಥೆ ಅಧ್ಯಕ್ಷ ಸಿದ್ಧೇಶ್ ಅತಿಥಿ ಗಳಾಗಿ ಪಾಲ್ಗೊಂಡರು.
ರಚಿತಾ ಮತ್ತು ಶರಧಿ ನೃತ್ಯ ಪ್ರದರ್ಶಿಸಿ ರಂಜಿಸಿದರು. ಬರಿಗೆ ಮತ್ತು ಸುತ್ತಮುತ್ತಲ ಗ್ರಾಮಸ್ಥರು, ಸಂಸ್ಥೆಯ ಸದಸ್ಯರು ಮೊದಲಾದವರಿದ್ದರು. ಗೀತಾ ಸಿ.ರಾವ್ ಪ್ರಾರ್ಥಿಸಿ, ಅಮೃತ ಸಿ.ರಾವ್ ಸ್ವಾಗತಿಸಿದರು. ಪ್ರಶಾಂತ ಹೆಚ್.ಎಂ. ನಿರೂಪಿಸಿ, ಎಸ್.ಕೃಷ್ಣಾನಂದ್ ವಂದಿಸಿದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post