ಕಲ್ಪ ಮೀಡಿಯಾ ಹೌಸ್ | ಸೊರಬ |
ಜನಪದ ಕಲಾವಿದರನ್ನು ಭಿಕ್ಷುಕರಂತೆ ನೋಡದೆ ಅವರ ಅಭಿಜಾತ ಕಲೆಗೆ ಪ್ರೋತ್ಸಾಹಿಸುವ ಸಮಾಜ ನಮ್ಮದಾಗಬೇಕು ಎಂದು ಜಿಲ್ಲಾ ಕಸಾಪ, ಕಜಾಪ, ಕಸಾಸಾಂವೇ ಅಧ್ಯಕ್ಷ ಡಿ.ಮಂಜುನಾಥ್ ಆಶಿಸಿದರು.
ಸೊರಬ ತಾಲ್ಲೂಕು ಗುಂಡಶೆಟ್ಟಿಕೊಪ್ಪ ಗ್ರಾಮದಲ್ಲಿ ನಡೆದ ತಾಲ್ಲೂಕು ಕರ್ನಾಟಕ ಜನಪದ ಪರಿಷತ್ ನ ಪದಗ್ರಹಣ ಸಮಾರಂಭ ಉದ್ಧೇಶಿಸಿ ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ವಿಫುಲ ಜನಪದ ಕಲೆಯ ಕಲೋಪಾಸಕರಿದ್ದು ಅಂತಹ ಕಲೆ ಮತ್ತು ಕಲಾವಿದರನ್ನು ವೇದಿಕೆಗೆ ತರುವ ಕೆಲಸ ಇನ್ನಷ್ಟು ಆಗಬೇಕಿದೆ. ಈ ನಿಟ್ಟಿನಲ್ಲಿ ಕಜಾಪ ಸಕ್ರಿಯ ಕಾರ್ಯನಿರ್ವಹಿಸುತ್ತಿದ್ದು ನಶಿಸಿ ಹೋಗಲಿದ್ದ ಕೆಲವು ಜನಪದ ಪ್ರಕಾರಗಳನ್ನು ಉಳಿಸುವಂತಾಗಿದೆ. ಪ್ರತಿ ವರ್ಷ ಜಿಲ್ಲಾ ಜನಪದ ಉತ್ಸವ ನಡೆಸಿ ಅನೇಕ ಕಲಾವಿದರನ್ನು ನಾಡಿಗೆ ಪರಿಚಯಿಸಲಾಗುತ್ತಿದೆ.
ತಾಲ್ಲೂಕು ಮಟ್ಟದ ಕಜಾಪ ವೇದಿಕೆ ಮೂಲಕ ತಳ ಹಂತದ ಬೆಳಕಿಗೆ ಬಾರದ ಇನ್ನೂ ಅನೇಕ ಜನಪದ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ಪರಿಚಯಿಸುವ ಸದುದ್ದೇಶ, ಮಹದಾಸೆ ನಮ್ಮದು ಎಂದರು.
ಪದಗ್ರಹಣ ಸಮಾರಂಭದ ವೇಳೆ ತಾಲ್ಲೂಕು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಪ್ರಜ್ವಲ್ ಚಂದ್ರಗುತ್ತಿ ಮಾತನಾಡಿ, ಈ ನೆಲೆಯ ಜನಪದ ಕಲಾಸಂಪತ್ತನ್ನು ರಕ್ಷಿಸಿ ಬೆಳೆಸುವ ಕಾರ್ಯ ಎಲ್ಲರದ್ದು, ಈ ಜವಾಬ್ಧಾರಿ ಅರಿತು ಹಲವು ಜನಪದ ಪ್ರಕಾರಗಳನ್ನು ಪುನಃಶ್ಚೇತನಗೊಳಿಸುವ ಕಾರ್ಯಕ್ಕೆ ನಾವು ಸರ್ವವಿಧದಿಂದಲೂ ಸನ್ನದ್ಧರಾಗಿದ್ದೇವೆ. ಪ್ರಸಕ್ತ ಕಜಾಪ ಪದಾಧಿಕಾರಿಗಳೆಲ್ಲರೂ ಜನಪದ ಕಲಾವಿದರಾಗಿದ್ದು ನಮಗೆ ಇನ್ನಷ್ಟು ಉತ್ಸಾಹ ಹೆಚ್ಚಿಸಿದೆ ಎಂದರು.
ವೀಳ್ಯ ನೀಡುವ ಮೂಲಕ ನೂತನ ಅಧ್ಯಕ್ಷರಿಗೆ ಅಧಿಕಾರ ನೀಡಲಾಯಿತು. ಗೌರವಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಹಾಗೂ ಗುಂಡಶೆಟ್ಟಿ ಗ್ರಾಮಸ್ಥರು, ತಾಲ್ಲೂಕು ಹಿರಿಯ ಜನಪದ ಕಲಾವಿದರು ವೀಳ್ಯ ನೀಡಿದರು.
ಸರಳ, ಸುಂದರ ಜನಪದ ವೇದಿಕೆಯಲ್ಲಿ ಗ್ರಾಮದ ಹಿರಿಯ ಕಲಾವಿದರಾದ ಕೆ.ರುದ್ರಪ್ಪ, ಬಸವಂತಪ್ಪ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಷಣ್ಮುಖಾಚಾರ್, ಹಿರಿಯ ಕಲಾವಿದ ಹೆಚ್ಚೆ ಧರ್ಮಪ್ಪ, ರಾಜಪ್ಪ ಮಾಸ್ತರ್, ಶಿಕಾರಿಪುರ ಹುಚ್ಚರಾಯಪ್ಪ, ಡಾ.ಉಮೇಶ್ ಭದ್ರಾಪುರ, ಗ್ರಾಮ ಪ್ರಮುಖ ಕೆ. ನಿಂಗಪ್ಪ, ಗ್ರಾಮಾಧ್ಯಕ್ಷ ಬಸವರಾಜ್, ಕರವೇ ತಾಲ್ಲೂಕು ಅಧ್ಯಕ್ಷ ಸಿ.ಕೆ.ಬಲೀಂದ್ರಪ್ಪ, ಕಸಾಸಾಂವೇ ಅಧ್ಯಕ್ಷ ಶಂಕರ ಶೇಟ್, ಯಶವಂತಪ್ಪ ಚಂದ್ರಗುತ್ತಿ ಇನ್ನೂ ಅನೇಕರಿದ್ದರು.
ಶಿವರುದ್ರಪ್ಪ ಜೋಗಿ, ಭರತ್ ಚಂದ್ರಗುತ್ತಿ, ಮೋಹನ್ ಮೊದಲಾದವರ ಜನಪದ ಗಾಯನವಿತ್ತು.
ಕಲಾವಿದ ಶಂಕ್ರಪ್ಪ ಕುಮ್ಮೂರು ಗಣಸ್ತುತಿಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹರೀಶ್ ಗುಂಡಶೆಟ್ಟಿಕೊಪ್ಪ ಸ್ವಾಗತಿಸಿದರು. ಮೋಹನ ಸುರಭಿ ನಿರೂಪಿಸಿದರು. ಡಿ.ಮಹೇಶ್ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















