ಕಲ್ಪ ಮೀಡಿಯಾ ಹೌಸ್ | ಸೊರಬ |
ಕನ್ನಡ ಸಾಹಿತ್ಯ ಪರಿಷತ್ ಮತ್ತೊಮ್ಮೆ ಸ್ವಾರ್ಥಲಾಲಸೆಯನ್ನು ಬಿಂಬಿಸುವ ಮೂಲಕ ಹಿಂದಿನ ಅವಧಿಯ ಧೋರಣೆಯನ್ನೆ ಮುಂದುವರೆಸಿಕೊಂಡು ಹೋಗುವ ಸ್ಪಷ್ಟ ನಿಲುವನ್ನು ತೋರಿಸಿಕೊಟ್ಟಿದೆ. ಜಿಲ್ಲಾ ತಾಲ್ಲೂಕು ಘಟಕದ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆಯಲ್ಲಿ ಸದಸ್ಯರ ಅಭಿಪ್ರಾಯವನ್ನು ಧಿಕ್ಕರಿಸಿದ್ದು, ಈ ಹಿಂದೆ ಸಕ್ರಿಯವಾಗಿದ್ದ ಸಾಹಿತ್ಯ ಕಾರ್ಯ ಚಟುವಟಿಕೆಯುಳ್ಳ ನಿರತ ಸದಸ್ಯರನ್ನ ಹಾಗೂ ಜಿಲ್ಲಾಧ್ಯಕ್ಷರ ಗೆಲುವಿಗೆ ಟೊಂಕಕಟ್ಟಿ ನಿಂತವರನ್ನು ಸಂಪೂರ್ಣ ಕಡೆಗಣಿಸಿ ಅಧಿಕಾರದ ಅಹಂಕಾರ ಪ್ರದರ್ಶಿಸಿದ್ದಾರೆ ಎಂಬ ಖಂಡನಾ ಮಾತುಗಳು ಪಟ್ಟಣದ ಗುರುಕುಲ ವಿದ್ಯಾಸಂಸ್ಥೆ ಆವರಣದಲ್ಲಿ ಸೇರಿದ್ದ ಸಮಾನ ಮನಸ್ಕರ ಸಭೆಯಲ್ಲಿ ವ್ಯಕ್ತವಾದವು.
ಈ ಹಿಂದೆ ಗುರುಭವನದಲ್ಲಿ ನಡೆದ ಕಸಾಪ ಸಮಾಲೋಚನಾ ಸಭೆಯಲ್ಲಿ ಸವ೯ ಸದಸ್ಯರ ಅಭಿಪ್ರಾಯದಂತೆ ಸೊರಬ ತಾಲ್ಲೂಕು ಅಧ್ಯಕ್ಷರ ಆಯ್ಕೆಯಲ್ಲಿ ಹೊಸಬರಿಗೆ ಅವಕಾಶ ಕೊಡಬೇಕು ಎಂಬುದು ಶೇ. 99ರಷ್ಟು ಸದಸ್ಯರ ಅಭಿಪ್ರಾಯವಾಗಿತ್ತು. ಕಳೆದ 5 ವಷ೯ಗಳಿಂದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಮತ್ತು ಕರ್ನಾಟಕ ಜನಪದ ಪರಿಷತ್ ಸಕ್ರಿಯ ಕಾರ್ಯ ಚಟುವಟಿಕೆಗಳ ಮೂಲಕ ಗಮನ ಸೆಳೆದಿತ್ತು. ಅಲ್ಲಿ ಪ್ರಾಮಾಣಿಕವಾಗಿ ದುಡಿದವರನ್ನೂ ಸಂಪೂರ್ಣ ಕಡೆಗಣಿಸಿ ಕಸಾಪ ಚುನಾವಣೆ ಬಳಿಕ ಗೆದ್ದೆತ್ತಿನ ಬಾಲ ಹಿಡಿದ ಮಂದಿಗೆ ಪಟ್ಟ ಕಟ್ಟಲಾಗಿದೆ ಎಂಬ ಆರೋಪಗಳು ಕೇಳಿಬಂದವು.
ಯಾವುದೇ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದ ಮುಖಗಳಿಗೆ ಮಣೆ ಹಾಕಲಾಗಿದೆ. ಸರ್ವಸದಸ್ಯರ ಅಭಿಪ್ರಾಯ ಎಲ್ಲವನ್ನೂ ಗಾಳಿಗೆ ತೂರಿ ಏಕಮುಖವಾಗಿ ಈ ಹಿಂದೆಯೂ ಕಸಾಪ ಅಧ್ಯಕ್ಷರಾಗಿದ್ದವರಿಗೆ ಪುನಃ ಅಧ್ಯಕ್ಷ ಪಟ್ಟ ಕಟ್ಟಿದ್ದು ಕ್ರಿಯಾಶೀಲ ಕಾರ್ಯಕರ್ತರಿಗೆ ನೋವಾಗಿದೆ ಎಂದು ಸಭೆಯಲ್ಲಿದ್ದ ಸದಸ್ಯರು ಆತಂಕ ವ್ಯಕ್ತಪಡಿಸಿದರು.
ಯಾವುದೋ ಪೂವಾ೯ಗ್ರಹಪೀಡಿತರಾಗಿ ಸವ೯ ಸದಸ್ಯರ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾದ ನಿಣ೯ಯಗಳನ್ನು ಗಾಳಿಗೆ ತೂರಿ, ಪ್ರಾಮಾಣಿಕ ಸೇವೆಗೆ ಬೆಲೆ ಕೊಡದೇ, ಅಧಿಕಾರಕ್ಕಾಗಿ, ಖುಚಿ೯ಗಾಗಿ ಸಾಹಿತ್ಯ, ಸಾಂಸ್ಕೃತಿಕ ವಾತಾವರಣವನ್ನು ಗಲೀಜು ಮಾಡುವವರಿಗೆ ಈ ನಮ್ಮ ಖಂಡನಾ ನಿರ್ಣಯಗಳು ಕೊಂಚ ಎಚ್ಚರ ಮೂಡಿಸಿದರೂ ಸಾಕು ಅವರ ಸೇವೆ ಸಾಥ೯ಕವಾಗುತ್ತದೆ. ದ್ವೇಷಕ್ಕಾಗಿ ಅಲ್ಲ ಸಾಹಿತ್ಯ, ಭಾಷೆ, ಈ ನೆಲೆಯ ಸೇವೆಗಾಗಿ ಇನ್ನು ಮುಂದೆ ಇಂತಹ ಸ್ವಾರ್ಥ, ಅಧಿಕಾರ ದಾಹದವರಿಂದ ಹೊರಗಿದ್ದು ತಮ್ಮದೇ ಆದ ಸಾಹಿತ್ಯ ಜಗಲಿಯ ಮೂಲಕ ಸಾಹಿತ್ಯ ಸೇವೆಗೆ ಅಣಿಯಾಗುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಒಮ್ಮತದ ಒಪ್ಪಿಗೆ ವ್ಯಕ್ತವಾಯಿತು.
ಸಭೆಯಲ್ಲಿ ಷಣ್ಮುಖಾಚಾರ್, ಸಾಹಿತಿ ಮಂಜಪ್ಪ ಹುಲ್ತಿಕೊಪ್ಪ, ಮಂಜಪ್ಪ ಬನದಕೊಪ್ಪ, ಮೋಹನ್ ಸುರಬಿ, ಶ್ರೀಪಾದ ಬಿಚ್ಚುಗತ್ತಿ, ಸುಜಾತಾ ಜೋತಾಡಿ, ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷ ಲಿಂಗರಾಜ ಗೌಡ್ರು ಕೋಣನಮನೆ, ರಮೇಶ್ ಮಂಚಿ, ವಕೀಲ ಡಾಕಪ್ಪ ಹೆಸರಿ, ಉದ್ಯಮಿ ಎಂ ಎನ್ ಗುರುಮೂರ್ತಿ, ಸುಬ್ರಹ್ಮಣ್ಯ ಗುಡಿಗಾರ್, ಗಾಯಕ ಎಚ್ ಗುರುಮೂರ್ತಿ, ಸರಸ್ವತಿ ನಾವುಡ, ಶೈಲಜಾ ಹೆಬ್ಬಾರ್, ಮಮತಾ ರಾಜೇಶ್ ಮೊದಲಾದವರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post