ಕಲ್ಪ ಮೀಡಿಯಾ ಹೌಸ್ | ಸೊರಬ |
ಗ್ರಾಮೀಣ ಭಾಗದಲ್ಲಿ ದೇಶೀಯ ತಳಿಯ ಗೋವುಗಳ ರಕ್ಷಣೆಗೆ ಗೋಪಾಲಕರ ಪಾತ್ರ ಮಹತ್ವದ್ದಾಗಿದೆ. ಮಲೆನಾಡು ಗಿಡ್ಡ ಸೇರಿದಂತೆ ಸ್ಥಳೀಯ ಗೋವುಗಳ ರಕ್ಷಣೆಗೆ ಸರ್ಕಾರ ಹೊಸ ಯೋಜನೆಗಳನ್ನು ರೂಪಿಸಬೇಕಿದೆ ಎಂದು ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಹೇಳಿದರು.
ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿಯಿಂದ 20ನೇ ವರ್ಷದ ಗಣೇಶೋತ್ಸವ ಅಂಗವಾಗಿ ಹಮ್ಮಿಕೊಂಡ ಗೋಪಾಲಕರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಯಿಯ ಹಾಲು ಮಗುವಿಗೆ ಒಂಬತ್ತು ತಿಂಗಳು ಲಭಿಸಿದರೆ, ಮನುಷ್ಯನಿಗೆ ಜೀವನ ಪೂರ್ತಿ ಗೋತಾಯಿ ಹಾಲುಣಿಸುತ್ತಾಳೆ. ಆದ್ದರಿಂದಲೇ ಗೋವಿಗೆ ಮಹಾತಾಯಿ ಎಂದು ಕರೆಯುತ್ತೇವೆ. ಕಲಿಯುಗದ ಕಾಮದೇನು ಎಂದು ಸಹ ಬಣ್ಣಿಸಲಾಗುತ್ತದೆ. ಗೋವುಗಳ ಸೇವೆ ಮಾಡುವುದು ಪುಣ್ಯದ ಕಾರ್ಯವಾಗಿದೆ. ಸಮಿತಿಯಿಂದ ಗೋವುಗಳ ರಕ್ಷಣೆ ಜೊತೆಗೆ ಗಣೇಶೋತ್ಸವದ ಸಂದರ್ಭದಲ್ಲಿ ಗೋಪಾಲಕರು, ಹೈನುಗಾರಿಕೆಯಲ್ಲಿ ತೊಡಗಿದವರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುವವರನ್ನು ಗೌರವಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಸನ್ಮಾನ ಸ್ವೀಕರಿಸಿದ ವಾಹನ ಚಾಲಕ ಎಸ್. ರಾಮಣ್ಣ ಮಾತನಾಡಿ, ಸಮಿತಿಯಿಂದ ಗೌರವಿಸುತ್ತಿರುವುದು ಸಂತಸ ತಂದಿದೆ. ತಮ್ಮ ಸುಮಾರು 53 ವರ್ಷಗಳ ಚಾಲಕ ವೃತ್ತಿಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸಿದ್ದೇನೆ. ಚಾಲಕ ವೃತ್ತಿ ಅತ್ಯಂತ ಸವಾಲಿನ ಮತ್ತು ಕಷ್ಟದಾಯಕವಾಗಿರುತ್ತದೆ. ಸಮಯ ನಿರ್ವಹಣೆ ಮತ್ತು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ತಾಲೂಕಿನಲ್ಲಿ ಅಂಬ್ಯುಲೆನ್ಸ್ ಸೇವೆ ಇಲ್ಲದ ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವುದು ಕ್ಲಿಷ್ಟಕರವಾದ ಸನ್ನಿವೇಷದಲ್ಲೂ ಚಾಲನೆ ಮಾಡಿ ಜೀವ ಉಳಿಸಿದ ಆತ್ಮತೃಪ್ತಿ ಇದೆ ಎಂದರು.
ಸನ್ಮಾನ ಸ್ವೀಕರಿಸಿದ ಗೋಪಾಲಕ ಹಾಗೂ ಹೈನುಗಾರಿಕೆಯಲ್ಲಿ ತೊಡಗಿರುವ ಯುವಕ ಜೆ.ವಿ. ಗುರುರಾಜ್ ಪಾಟೀಲ್ ಮಾತನಾಡಿ, ಗೋ ಪಾಲನೆ ಮಾಡುವುದು ಖುಷಿಯ ಕೆಲಸವಾಗಿದೆ. ಗೋಪಾಲನೆ ಮತ್ತು ಹೈನುಗಾರಿಕೆಯಲ್ಲಿ ತೊಡಗಿದ ತರುವಾಯ ನಮ್ಮ ಕುಟುಂಬ ಉತ್ತಮ ಸ್ಥಿತಿಯಲ್ಲಿದೆ. ಕಿರಿಯ ವಯಸ್ಸಿನಲ್ಲಿಯೇ ಗೌರವ ನೀಡುತ್ತಿರುವುದು ಸಮಾಜದಲ್ಲಿ ಜವಾಬ್ದಾರಿ ಹೆಚ್ಚಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಬಸ್ ನಿರ್ವಾಹಕ ಕೆ. ವೀರಭದ್ರಪ್ಪ, ಹಿರಿಯ ಹೋಟೆಲ್ ಉದ್ಯಮಿ ನಾರಾಯಣ ಭಟ್ ಅವರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ನಂತರ ಶ್ರೀ ಗಣೇಶ ಮೂರ್ತಿಗೆ 21 ತೆಂಗಿನ ಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆ ನಡೆಸುವ ಮೂಲಕ ಪವಿತ್ರ ದಂಡಾವತಿ ನದಿಯಲ್ಲಿ ನಿಮಜ್ಜನ ನಡೆಸಲಾಯಿತು.
ಸಮಿತಿಯ ಗೌರವಾಧ್ಯಕ್ಷ ಕೆ. ಪ್ರಭಾಕರ ರಾಯ್ಕರ್, ಗೌರವ ಸದಸ್ಯರಾದ ಕೃಷ್ಣಮೂರ್ತಿ ಭಾವೆ, ಪ್ರಧಾನ ಕಾರ್ಯದರ್ಶಿ ವೀರೇಂದ್ರ ಗೌಡ ಜೇಡಗೇರಿ, ಉಪಾಧ್ಯಕ್ಷ ನಾಗಪ್ಪ ಎಸ್.ಬಿ. ಬಿದರಗೇರಿ, ಖಜಾಂಚಿ ರಾಜೇಂದ್ರ ಜೈನ್, ಸಂಘಟನಾ ಕಾರ್ಯದರ್ಶಿ ಯು.ಎಸ್. ಶರತ್ ಸ್ವಾಮಿ, ಕಾರ್ಯದರ್ಶಿ ಅಭಿ ಹೊಯ್ಸಳ, ಸಹ ಕಾರ್ಯದರ್ಶಿ ವೀರಭದ್ರ, ಸಿಂಪಿ ಸಮಾಜದ ಉಪಾಧ್ಯಕ್ಷ ಅನಿಲ್ ಕುಮಾರ್ ಬಾಂಬೋರೆ, ವಾಹನ ಚಾಲಕರ ಸಂಘದ ಅಧ್ಯಕ್ಷ ದಾನಶೇಖರ್ ಗುಂಡಶೆಟ್ಟಿಕೊಪ್ಪ, ಅಲೆಗ್ಸಾಂಡರ್ ಡಿಸೋಜಾ, ಬಸವರಾಜ ಹಳೇಸೊರಬ, ಚಂದ್ರಕಾಂತ ತವನಂದಿ, ಭೂಪಾಲ್, ಸಮಿತಿಯ ಕಾರ್ಯಕರ್ತರಾದ ಉದ್ಯೋತ್‍ರಾಜ್ ಇಂದ್ರ ಜೈನ್, ಅಭಿಷೇಕ್ ಗೌಡ, ಚವನ್ ರಾಜ್ ಗೌಡ, ನಮಾಮಿರಾಜ್ ಇಂದ್ರ ಜೈನ್, ಕೌಶಿಕ್ ಗೌಡ ಸೇರಿದಂತೆ ಇತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post