ಕಲ್ಪ ಮೀಡಿಯಾ ಹೌಸ್ | ಸೊರಬ (ಶಿವಮೊಗ್ಗ) |
ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಸಾಗರ ಪಟ್ಟಣದಲ್ಲಿ ಕಳೆದುಹೋಗಿದ್ದ ಸುಮಾರು ₹3 ಲಕ್ಷ ಮೌಲ್ಯದ ಚಿನ್ನದ ಸರವನ್ನು ಅದರ ಮಾಲೀಕರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮತ್ತು ಮಾನವೀಯತೆ ಮೆರೆದ ಸೊರಬ (Soraba) ಘಟಕದ ಗೃಹರಕ್ಷಕ ದಳದ ಸಿಬ್ಬಂದಿ ಸೋಮಪ್ಪ ಕಾರೇಕೊಪ್ಪ ಅವರನ್ನು ಕನ್ನಡ ಸಾಹಿತ್ಯ, ಸಾಂಸ್ಕೃತಿಕ ವೇದಿಕೆ ಹಾಗೂ ಸೊರಬ ಪೊಲೀಸ್ ಠಾಣೆಯ ವತಿಯಿಂದ ಸನ್ಮಾನಿಸಲಾಯಿತು.
ಸಾಗರ ತಾಲೂಕಿನ ತಾಳಗುಪ್ಪ ಗ್ರಾಮದ ಸೂರಜ್ ಎಂಬುವವರು ಗಣೇಶ ಚತುರ್ಥಿ ಹಬ್ಬದ ವೇಳೆ ಸಾಗರ ಪಟ್ಟಣದಲ್ಲಿ ಚಿನ್ನದ ಸರ ಕಳೆದುಕೊಂಡಿದ್ದರು. ಕರ್ತವ್ಯದಲ್ಲಿದ್ದ ಗೃಹರಕ್ಷಕ ದಳದ (Home Guards) ಸಿಬ್ಬಂದಿ ಸೋಮಪ್ಪ ಕಾರೇಕೊಪ್ಪ ಅವರಿಗೆ ಸರ ದೊರೆತಿದ್ದು, ಅದನ್ನು ತಮ್ಮಲ್ಲೇ ಇಟ್ಟುಕೊಳ್ಳದೆ ಸಂಬಂಧಪಟ್ಟ ವ್ಯಕ್ತಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದರು. ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಪ್ರಾಮಾಣಿಕತೆ ಮತ್ತು ಸಂಸ್ಕಾರಕ್ಕೆ ಮಾದರಿ
ಸಿಪಿಐ ಮಹಾಂತೇಶ್ ಲಂಬಿ ಅವರು ಸೋಮಪ್ಪ ಅವರನ್ನು ಸನ್ಮಾನಿಸಿ ಮಾತನಾಡಿ, ಸಿಕ್ಕಿದ್ದೆಲ್ಲವೂ ತಮಗೇ ಸೇರಬೇಕು ಎಂದು ಭಾವಿಸುವವರ ನಡುವೆ ವಿಭಿನ್ನವಾಗಿ ಗುರುತಿಸಿಕೊಳ್ಳುವಂತಹ ಕಾರ್ಯವನ್ನು ಸೋಮಪ್ಪ ಮಾಡಿದ್ದಾರೆ. ಮತ್ತೊಬ್ಬರಿಗೆ ಸೇರಿದ ವಸ್ತುವನ್ನು ಅದರ ಮಾಲೀಕರಿಗೆ ಹಿಂದಿರುಗಿಸುವ ಉದಾರ ಮನೋಭಾವ ಹಿರಿಯರು ಕಲಿಸಿದ ಸಂಸ್ಕಾರದಿಂದ ಮಾತ್ರ ಬರಲು ಸಾಧ್ಯ. ಇಂತಹ ಉತ್ತಮ ಸಂಸ್ಕಾರದಿಂದ ಬಂದಿರುವ ಸೋಮಪ್ಪ ಅವರ ಕಾರ್ಯ ಶ್ಲಾಘನೀಯ. ಅವರ ಪ್ರಾಮಾಣಿಕತೆಯನ್ನು ಗುರುತಿಸಿ ಇಲಾಖೆ ಅಭಿನಂದನೆ ಸಲ್ಲಿಸಿದೆ ಎಂದರು.
Soraba: ಗೃಹರಕ್ಷಕ ಸಿಬ್ಬಂದಿಯ ಸೇವೆಯನ್ನು ಸಮಾಜ ಗುರುತಿಸುತ್ತಿರುವುದು ಸಂತಸದ ವಿಷಯ
ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಡಾ. ಎಂ.ಕೆ. ಭಟ್ ಮಾತನಾಡಿ, ನಿಷ್ಕಾಮ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಸರ್ಕಾರ ನಿರ್ಲಕ್ಷಿಸಿರುವುದು ವಿಷಾದನೀಯ. ಕಳೆದುಹೋದ ವಸ್ತುಗಳನ್ನು ಮರಳಿಸುವುದರಿಂದ ಹಿಡಿದು ಸಾವು-ಬದುಕಿನ ನಡುವೆ ಹೋರಾಡುವವರ ಜೀವ ಉಳಿಸುವವರೆಗೆ ವಿವಿಧ ಸಂದರ್ಭಗಳಲ್ಲಿ ಸಿಬ್ಬಂದಿ ತಮ್ಮನ್ನು ತಾವು ಸೇವೆಗೆ ಸಮರ್ಪಿಸಿಕೊಳ್ಳುತ್ತಾರೆ. ಇಂತಹ ಸಿಬ್ಬಂದಿಯ ಒಳ್ಳೆಯ ಕೆಲಸವನ್ನು ಸಮಾಜ ಸೇವಕ ಶಂಕರ್ ಶೇಟ್ ಅವರು ಗುರುತಿಸಿ ಅಭಿನಂದಿಸಿರುವುದು ಹೆಮ್ಮೆಯ ಸಂಗತಿ. ಸರ್ಕಾರ ಗೃಹರಕ್ಷಕ ದಳವನ್ನು ಮರೆತರೂ ಸಮಾಜವು ಅವರ ಸೇವೆಯನ್ನು ಗುರುತಿಸಿ ಗೌರವಿಸುತ್ತಿರುವುದು ಸಂತೋಷ ತಂದಿದೆ ಎಂದರು.
ಪ್ರಾಮಾಣಿಕ ಸಿಬ್ಬಂದಿ ನಮ್ಮ ಘಟಕದ ಹೆಮ್ಮೆ
ಗೃಹರಕ್ಷಕ ದಳದ ಘಟಕಾಧಿಕಾರಿ ಪ್ರಶಾಂತ್ ಹುಣವಳ್ಳಿ ಮಾತನಾಡಿ, ಪ್ರಾಮಾಣಿಕ ಸಿಬ್ಬಂದಿಯನ್ನು ಹೊಂದಿರುವ ಘಟಕಾಧಿಕಾರಿಯಾಗಿರುವುದು ನನಗೆ ಹೆಮ್ಮೆಯ ವಿಷಯ. ಕಳೆದುಹೋದ ಚಿನ್ನದ ಸರವನ್ನು ಅದರ ಮಾಲೀಕರಿಗೆ ಹಿಂದಿರುಗಿಸುವ ಮೂಲಕ ಸೋಮಪ್ಪ ಕಾರೇಕೊಪ್ಪ ಅವರು ಗೃಹರಕ್ಷಕ ದಳದ ಗೌರವವನ್ನು ಹೆಚ್ಚಿಸಿದ್ದಾರೆ. ಅವರ ಪ್ರಾಮಾಣಿಕತೆ ಇತರ ಸಿಬ್ಬಂದಿಗೂ ಮಾದರಿಯಾಗಿದೆ ಎಂದರು.
ಸಮಾಜಕ್ಕೆ ಮಾದರಿಯಾದ ಸೋಮಪ್ಪ ಅವರ ಕಾರ್ಯ
ಕನ್ನಡ ಸಾಹಿತ್ಯ, ಸಾಂಸ್ಕೃತಿಕ ವೇದಿಕೆ ಸೊರಬದ ಅಧ್ಯಕ್ಷ ಡಿ.ಎಸ್. ಶಂಕರ್ ಶೇಟ್ ಮಾತನಾಡಿ, “ಸೋಮಪ್ಪ ಅವರು ಸುಮಾರು ₹3 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಳೆದುಕೊಂಡ ವ್ಯಕ್ತಿಗೆ ಹಿಂದಿರುಗಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಪ್ರಾಮಾಣಿಕತೆ ಇತರರಿಗೂ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಸನ್ಮಾನಿಸಲಾಗಿದೆ. ಚಿನ್ನದ ಸರವನ್ನು ಮರಳಿ ಪಡೆದು ಅದರ ಮಾಲೀಕರು ನೆಮ್ಮದಿಪಡುವಂತೆ ಮಾಡಿದ ಸೋಮಪ್ಪ ಅವರ ಕಾರ್ಯ ಶ್ಲಾಘನೀಯ,” ಎಂದರು.
Also Read>> ಅ.11ರಿಂದ 26ರವರೆಗೆ ರವೀಂದ್ರನಗರದಲ್ಲಿ ಶರನ್ನವರಾತ್ರೋತ್ಸವದ ವೈಭವ
ಖಾಕಿ ಸಮವಸ್ತ್ರ ಧರಿಸಿದ್ದಕ್ಕೆ ಸಾರ್ಥಕ ಭಾವ
ಸನ್ಮಾನ ಸ್ವೀಕರಿಸಿ ಮಾತನಾಡಿದ ಸೋಮಪ್ಪ ಕಾರೇಕೊಪ್ಪ ಅವರು, “ನನಗೆ ಖಾಕಿ ಬಟ್ಟೆ ಧರಿಸಿದ್ದಕ್ಕೆ ಸಾರ್ಥಕ ಭಾವ ಮೂಡಿದೆ. ನಾನು ಮಾಡಿದ ಸಣ್ಣ ಕೆಲಸ ಇಂದು ಸನ್ಮಾನ ಮಾಡುವಷ್ಟರ ಮಟ್ಟಿಗೆ ನನ್ನನ್ನು ತಂದು ನಿಲ್ಲಿಸಿದೆ. ಸಿಕ್ಕ ಚಿನ್ನದ ಸರವನ್ನು ಮನೆಗೆ ಕೊಂಡೊಯ್ದಿದ್ದರೆ ಹತ್ತು ದಿನ ಖುಷಿಪಡಬಹುದಿತ್ತು. ಆದರೆ ಅದನ್ನು ಹಿಂದಿರುಗಿಸಿದ ಬಳಿಕ ಎಲ್ಲರೂ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದರಿಂದ ಪ್ರತಿದಿನವೂ ಸಂಭ್ರಮಿಸುವಂತಾಗಿದೆ,” ಎಂದು ತಮ್ಮ ಸಂತಸ ಹಂಚಿಕೊಂಡರು.
ಮತ್ತೊಬ್ಬರ ಕಷ್ಟವನ್ನು ಅರ್ಥಮಾಡಿಕೊಂಡು ಪ್ರಾಮಾಣಿಕತೆಯಿಂದ ನಡೆದುಕೊಳ್ಳುವುದು ಸಮಾಜದಲ್ಲಿ ನಂಬಿಕೆ ಮತ್ತು ಮಾನವೀಯತೆಯನ್ನು ಬಲಪಡಿಸುತ್ತದೆ ಎಂಬುದಕ್ಕೆ ಸೋಮಪ್ಪ ಕಾರೇಕೊಪ್ಪ ಅವರ ಕಾರ್ಯ ಉತ್ತಮ ಉದಾಹರಣೆಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









