ಕಲ್ಪ ಮೀಡಿಯಾ ಹೌಸ್ | ಸೊರಬ |
ಜೇನುನೊಣ ಪಕೃತಿಯಲ್ಲಿ ಬಹುಮುಖ್ಯವಾದ ಪಾತ್ರ ವಹಿಸುತ್ತದೆ. ಜೇನುನೊಣಗಳಿಲ್ಲದೆ ಪರಾಗಸ್ಪರ್ಶ ಸಾದ್ಯವಿಲ್ಲ, ಜೇನು ಸಂತತಿ ನಾಶ ಆದರೆ ಬೆಳೆಗಳ ಉತ್ಪಾದನೆ ಕಡಿಮೆಯಾಗಿ ಮನುಷ್ಯ ಸಂತತಿ ಕೂಡ ನಾಶ ಆಗುತ್ತದೆ ಆದ್ದರಿಂದ ಜೇನು ಉಳಿಸುವುದು ನಮ್ಮ ಕರ್ತವ್ಯವೂ ಆಗಿದೆ ಎಂದು ಜೇನು ಕೃಷಿಕ ವಿಘ್ನೇಶ್ ತಲಕಾಲುಕೊಪ್ಪ ಹೇಳಿದರು.
ತಾಲ್ಲೂಕು ತಲಕಾಲುಕೊಪ್ಪದಲ್ಲಿ ಶಿವಮೊಗ್ಗ, ಭದ್ರಾವತಿ ತಾಲ್ಲೂಕು ಕೃಷಿಕರಿಗೆ ಜಿಲ್ಲಾ ತೋಟಗಾರಿಕೆ ಇಲಾಖೆ, ಜಿಪಂ ಶಿವಮೊಗ್ಗ ಮತ್ತು ಮಧುಬನ ಜೇನು ಸಂಸ್ಕರಣೆ ಮತ್ತು ಮಾರಾಟ ಸಹಕಾರ ಸಂಘ ನಿಸರಾಣಿ ಇವರುಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜೇನುಕೃಷಿ ತರಬೇತಿ ಮತ್ತು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ಪ್ರಾಚೀನಕಾಲದಿಂದಲೂ ಯಜ್ಞಯಾಗಾದಿ, ಪೂಜೆ, ಆಯುರ್ವೇದಗಳಲ್ಲಿ ಪವಿತ್ರ ಸ್ಥಾನವನ್ನು ಹೊಂದಿರುವ ಇದಕ್ಕೆ ದ್ರವ ಬಂಗಾರವೆಂದೇ ಕರೆಯಲಾಗುತ್ತದೆ. ಕೇವಲ ಆಹಾರ ಭದ್ರತೆ ಮಾತ್ರವಲ್ಲದೆ ಆರ್ಥಿಕ ಭದ್ರತೆಯನ್ನು ಕೂಡ ಒದಗಿಸುವ ಜೇನುಕೃಷಿ ಕೃಷಿಯ ಅವಿಭಾಜ್ಯ ಅಂಗವೂ ಕೂಡ. ಸಾಂಘಿಕ ದುಡಿಮೆಗೆ ಮಾದರಿಯಾಗಿರುವ ಇವು ಪೃಕೃತಿಯಲ್ಲಿನ ವಿಶೇಷವಾದ ಸೃಷ್ಟಿಗಳಲ್ಲಿ ಒಂದು. ಗ್ರಾಮೀಣಾಭಿವೃದ್ಧಿಯಲ್ಲಿ ಜೇನುಕೃಷಿಯ ಪಾತ್ರವೂ ಮುಖ್ಯವಾಗಿರುವುದರಿಂದ ಸರ್ಕಾರ ಜೇನುಕೃಷಿಗೆ ಮಹತ್ವ ನೀಡಿದ್ದು, ಆರ್ಥಿಕ ಸದೃಢತೆಯ ಜೊತೆಗೆ ಪ್ರಕೃತಿಯ ಸಮತೋಲನಕ್ಕೆ ನೆರವಾಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಜೀವವೈವಿಧ್ಯ ಮಂಡಳಿ ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ, ಸುಸ್ಥಿರ ಕೃಷಿಗೆ ಜೇನು ಅಗತ್ಯವಾಗಿದ್ದು, ಸಾವಯವ ಕೃಷಿಗೆ ಒತ್ತು ನೀಡುವ ಮೂಲಕ ಜೇನು ಸಂತತಿಯನ್ನು ಕಾಪಾಡಿಕೊಳ್ಳಬೇಕು. ನಮಗೆ ಆಶ್ರಯ ನೀಡಿರುವ ನೆಲ, ಪರಿಸರಕ್ಕೆ ಗೌರವವನ್ನಿಟ್ಟು ಮುಂಪೀಳಿಗೆಗೆ ಶುದ್ಧ ಗಾಳಿ, ಆಹಾರ, ನೀರನ್ನು ಒದಗಿಸಿಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಇಲಾಖೆಯ ಸಂಯೋಜನಾಧಿಕಾರಿ ನಾಗಭೂಷಣ ಜೇನುಕೃಷಿಗೆ ನೀಡುತ್ತಿರುವ ಸರ್ಕಾರದ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷ ಟಿ.ಎಸ್.ಸುದರ್ಶನ ಅಧ್ಯಕ್ಷತೆ ವಹಿಸಿದ್ದರು. ಇಲಾಖೆಯ ಅಧಿಕಾರಿಗಳು, ಶಿಬಿರಾರ್ಥಿಗಳು, ಜೇನು ಕೃಷಿಕ ಶ್ರೀಪಾದ ಕೋಣನಕಟ್ಟೆ ಮೊದಲಾದವರು ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post