ಕಲ್ಪ ಮೀಡಿಯಾ ಹೌಸ್ | ಸೊರಬ |
ಕನ್ನಡ ಸಾಹಿತ್ಯದ ತೇರನ್ನು ಕಟ್ಟಿ ಸಾಗಿಸುವ, ಬೆಳೆಸುವ ಕೆಲಸ ಕೇವಲ ಮಾತಿನಲ್ಲಾದರೆ ರಥ ಎಳೆದಂತಲ್ಲ. ನಿರಂತರತೆ ಇಲ್ಲದಿದ್ದರೆ ಅದು ಸೇವೆಯಾಗುವುದಿಲ್ಲ ಎಂದು ಕರ್ನಾಟಕ ಜನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
ಪಟ್ಟಣದ ಗುರುಕುಲದ ಆವರಣದಲ್ಲಿ ಮುಂಬರುವ ಕಸಾಪ ಚುನಾವಣೆ ಹಿನ್ನೆಲೆಯಲ್ಲಿ ಕಸಾಪ ಸದಸ್ಯರು ಹಾಗೂ ಕನ್ನಡ ಸಾಹಿತ್ಯಾಸಕ್ತರೊಡನೆ ಸಮಾಲೋಚನೆ ನಡೆಸಿ ಮಾತನಾಡಿದರು.
ಕನ್ನಡ ಭಾಷೆ, ಸಾಹಿತ್ಯ ನಿಂತ ನೀರಾಗಬಾರದು, ಮಾತಿಗಿಂತ ಕೃತಿ ಮುಖ್ಯವಾಗಿರಬೇಕು ಎಂಬ ಆಶಯದೊಡನೆ ಅಧಿಕಾರವಿರದಿದ್ದರೂ ಸಾಹಿತ್ಯ, ಸಂಸ್ಕೃತಿಯನ್ನು ಕಟ್ಟಿಬೆಳೆಸುವ ಕೆಲಸ ನಮ್ಮಿಂದ ನಿರಂತರವಾಗಿ ನಡೆಯುತ್ತ ಬಂದಿದೆ. ಕೊರೋನಾ ಸಂದರ್ಭದಲ್ಲಿಯೂ ಆನ್‌ಲೈನ್ ಮೂಲಕ ಸಾಹಿತ್ಯಿಕ ಚಟುವಟಿಕೆಗಳು ಕ್ರಿಯಾಶೀಲಗೊಳಿಸಿದ ತೃಪ್ತಿ ನಮಗಿದೆ. ಗ್ರಾಮಾಂತರ ಪ್ರದೇಶದ ಅವ್ಯಕ್ತ ಪ್ರತಿಭೆಗಳಿಗೆ ನಮ್ಮ ವೇದಿಕೆ ಮೂಲಕ ಅನುವು ನೀಡಿ ಸಮಾಜದ ಮುಖ್ಯ ವಾಹಿನಿಗೆ ತಂದ ಸಂತಸವೂ ನಮಗಿದೆ.
ಸರ್ಕಾರದ ಮಾನ್ಯತೆ ಪಡೆದು ಹಿಂದಿನ ಅವಧಿಯ ಸಾಧನೆಯನ್ನು ತನ್ನದೆಂಬಂತೆ ಬಿಂಬಿಸಿ ಸ್ವಚ್ಛ ಸಾಹಿತ್ಯ ವಲಯವನ್ನು ರಾಡಿಗೊಳಿಸಿರುವ ಪ್ರಸ್ತುತ ಕಾರ್ಯನಿರ್ವಹಿಸಿದ ಜಿಲ್ಲಾ ಕಸಾಪ ಗುರಿ ಕೇವಲ ಜಾತಿ ಧರ್ಮಗಳಿಗಷ್ಟೆ ಸೀಮಿತವಾಗಿದ್ದು, ಇಂತಹ ಸಂಘಟನೆಯಿಂದ ನಾಡ ಬಾಷೆ, ಸಂಸ್ಕೃತಿ ಸಾಹಿತ್ಯ ಗಟ್ಟಿಗೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಸಾಹಿತ್ಯ ವಲಯ ಅರಿತುಕೊಳ್ಳಬೇಕಿದೆ ಎಂದರು.
ನಾಲ್ಕು ಪುಸ್ತಕ ಬರೆದರೆ, ಕನ್ನಡದ ದ್ವಜ ಹಿಡಿದರೆ ಅದು ಕನ್ನಡದ ಸೇವೆ ಎಂಬುದು ಕೇವಲ ತೋರ್ಪಡಿಕೆಯಷ್ಟೆ. ಪ್ರತಿಘಟ್ಟದಲ್ಲೂ, ಪ್ರತಿಕಾಲದಲ್ಲೂ ನಾಡ ಭಾಷೆ, ಸಂಸ್ಕೃತಿಯನ್ನು ಸರ್ವಧರ್ಮ ಸಮನ್ವಯತೆ ಮುಖೇನಾ ಗಟ್ಟಿಗೊಳಿಸುವ ಕಾರ್ಯ ಸಾಹಿತ್ಯ ವಲಯದ್ದು. ಇದೇ ತಿಂಗಳು ನಡೆಯಲಿರುವ ಕಸಾಪ ಚುನಾವಣೆಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧಿಸಿದ್ದು, ಇಲ್ಲಿಯವರೆಗಿನ ನನ್ನ ಸಂಘಟನೆಯ ಕಾರ್ಯ ಗಮನಿಸಿ ಮತನೀಡುವ ಮೂಲಕ ಗೆಲವಿಗೆ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.
ಸಭೆಯ ಪೂರ್ವದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಸಾಸಾಂವೇ ತಾಲ್ಲೂಕು ಗೌರವಾಧ್ಯಕ್ಷ ಪಾಣಿ ಶಿವಾನಂದ ನೇತೃತ್ವದಲ್ಲಿ ವೇದಿಕೆಯ ಅಧ್ಯಕ್ಷ ಷಣ್ಮುಖಾಚಾರ್, ಕಜಾಪ ಗೌರವಾಧ್ಯಕ್ಷ ರಾಜಪ್ಪ ಮಾಸ್ತರ್, ಅಧ್ಯಕ್ಷ ಶ್ರೀಪಾದಬಿಚ್ಚುಗತ್ತಿ, ಚಿಂತಕ ಭಾರ್ಗವ ನಾಡಿಗ್, ಕಜಾಪ ಮಹಿಳಾಘಟಕದ ಅಧ್ಯಕ್ಷೆ ಸುಜಾತಾ ಜೋತಾಡಿ, ಉಪಾಧ್ಯಕ್ಷೆ ಗೌರಮ್ಮ ಭಂಡಾರಿ, ಗೌರವಾಧ್ಯಕ್ಷೆ ಸವಿತಾಭಟ್, ಗುರುಕುಲ ಸಂಸ್ಥೆಯ ಸತೀಶ್ ಬೈಂದೂರ್, ಎನ್.ಗುರುಮೂರ್ತಿ, ಹಾಲೇಶನವುಲೆ, ನಿವೃತ್ತ ಉಪನ್ಯಾಸಕ ಬಂಗಾರಪ್ಪ, ಸಾಹಿತಿ ರೇವಣಪ್ಪ ಬಿದರಗೆರೆ, ಸರಸ್ವತಿ ನಾವುಡಾ, ಮೋಹನಸುರಭಿ, ಮಂಚಿ ರಮೇಶ್, ವಿ.ದಿನೇಶ್, ಸದಾನಂದ ಸಿ.ಪಿ, ಗಂಧರ್ವ, ಸೋಮಶೇಖರ್, ಸಾಗರ ಘಟಕದ ಅಧ್ಯಕ್ಷ ವಿ.ಟಿ.ಸ್ವಾಮಿ, ಉಮೇಶ್ ಹಿರೇನೆಲ್ಲೂರು, ಬಿ.ಕೆ.ಸತೀಶ್ ವೀರಪ್ಪಯ್ಯ, ಶ್ರೀನಿವಾಸಭಟ್, ಇನ್ನೂ ಅನೇಕ ಸಾಹಿತ್ಯಾಸಕ್ತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post