ಕಲ್ಪ ಮೀಡಿಯಾ ಹೌಸ್ | ಸೊರಬ |
ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಯಿಂದ ವೀರಶೈವ ಲಿಂಗಾಯತ ಸಮಾಜವನ್ನು ಕಡೆಗಣಿಸಲಾಗುತ್ತಿದೆ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಶಿವಮೊಗ್ಗ ಜಿಲ್ಲಾಧ್ಯಕ್ಷ ಸಿ.ಪಿ. ಈರೇಶಗೌಡ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ನಂತರ ಬಿಜೆಪಿ ಪಕ್ಷ ಶಿವಮೊಗ್ಗ ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ರಾಜಕೀಯವಾಗಿ ಕಡೆಗಣಿಸುತ್ತಾ ಬಂದಿದೆ. ಈ ಮಧ್ಯೆ ಬಿಜೆಪಿ ವೀರಶೈವ ಲಿಂಗಾಯತ ಸಮಾಜದ ಮುಖಂಡರಿಗೆ ನೀಡಿದ್ದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಚಾಚುತಪ್ಪದೇ ಎಲ್ಲಾ ಸಮಾಜವನ್ನು ಸಮಾನವಾಗಿ ಕಂಡು ಬಿಜೆಪಿ ಪಕ್ಷವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಬೆಳೆಸಿ ಅಧಿಕಾರಕ್ಕೆ ತರುವಲ್ಲಿ ಲಿಂಗಾಯಿತ ಸಮಾಜವು ಕೂಡಾ ಪ್ರಮುಖ ಪಾತ್ರ ವಹಿಸಿದೆ.
ಈ ನಿಟ್ಟಿನಲ್ಲಿ ಇತ್ತೀಚಿನ ಬೆಳವಣಿಗೆಯಲ್ಲಿ ಬಿಜೆಪಿ ಪಕ್ಷ ಲಿಂಗಾಯಿತ ಸಮಾಜದ ಹಿರಿಯರನ್ನು, ಬಿಜೆಪಿ ಪಕ್ಷಕ್ಕಾಗಿ ದುಡಿದ ಮುಖಂಡರನ್ನು ಕಡೆಗಣಿಸುತ್ತಿರುವುದನ್ನು ಸಮುದಾಯವು ಅವಲೋಕಿಸಿದೆ. ಅಲ್ಲದೇ ವಿಧಾನ ಪರಿಷತ್ ಚುನಾವಣೆಗೂ ಕೂಡಾ ಲಿಂಗಾಯಿತ ಸಮುದಾಯವನ್ನು ಕಡೆಗಣಿಸಿದೆ. ಲಿಂಗಾಯಿತ ಸಮುದಾಯದ ಬೆಂಬಲದಿಂದ ಗೆಲವು ಸಾಧಿಸಿ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಸಮುದಾಯದ ಪ್ರಬಲ ಮುಖಂಡರನ್ನು ತುಳಿಯುವ ಸಂಪ್ರದಾಯವನ್ನು ಖಂಡಿಸುತ್ತೇವೆ. ಪ್ರಬಲ ಸಮುದಾಯವನ್ನು ವೋಟ್‌ಬ್ಯಾಂಕ್‌ಗಾಗಿ ಬಳಸಿಕೊಳ್ಳುವ ಕಾಲ ಬಿಜೆಪಿ ಪಾಲಿಗೆ ಮುಗಿದು ಹೋಗಿದೆ. ಭವಿಷ್ಯದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆಯು ನಿರ್ಣಾಯಕ ತೀರ್ಮಾನಕ್ಕೆ ಬರಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post