ಕಲ್ಪ ಮೀಡಿಯಾ ಹೌಸ್
ಸೊರಬ: ತಾಲ್ಲೂಕಿನ ಹಳೇಸೊರಬ ಗ್ರಾಮದ ಸರ್ವೆ ನಂ.245ರಲ್ಲಿ ನಡೆದ ಮರಗಳ ಅಕ್ರಮ ಕಡಿತಲೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯಿಂದ ಸತತ ಮೂರು ದಿನಗಳ ಕಾರ್ಯಾಚರಣೆ ನಡೆಸಲಾಗಿದ್ದು, ಲಕ್ಷಾಂತರ ರೂ.ಮೌಲ್ಯದ ವಿವಿಧ ಜಾತಿಯ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಯ ಸಹಕಾರದಿಂದ ನಡೆದ ಕಾರ್ಯಾಚರಣೆಯಲ್ಲಿ ಹಲಸು, ದೇವಧಾರಿ, ನೇರಲು, ಬರಣಿಗೆ, ತೇಗ, ಕಾಡುಜಾತಿ ಸೇರಿದಂತೆ ವಿವಿಧ ಅಪರೂಪದ ನೂರಾರು ವರ್ಷಗಳ ಹಳೆಯ ದಾದ 58.307 ಕ್ಯೂಬಿಕ್ ಮೀಟರ್‌ನ 104 ಮರದ ತುಂಡುಗಳು ಪತ್ತೆಯಾದವು. ಇವುಗಳನ್ನು ಪಟ್ಟಣದ ಅರಣ್ಯ ಇಲಾಖೆಯ ಕಚೇರಿಯ ಆವರಣದಲ್ಲಿ ಸಂಗ್ರಹಿಸಿ, ಮರದ ತುಂಡುಗಳ ಅಳತೆ ನಡೆಸುವ ಕಾರ್ಯ ತ್ವರಿತವಾಗಿ ನಡೆಯುತ್ತಿದ್ದು, ಈ ಸಂಬಂಧ ಗ್ರಾಮ ಸಮಿತಿ ಪ್ರಮುಖರನ್ನ ಕರೆಸಿ ವಿಚಾರಣೆ ನಡೆಸಲಾಯಿತು.
ಡಿಎಫ್‌ಒ ಮೋಹನ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ತಾಲ್ಲೂಕಿನ ಹಳೇಸೊರಬದ ಸರ್ವೆ ನಂ.245ರ ಕಾನು ಖರಾಬು ಪ್ರದೇಶದಲ್ಲಿ ನೂರಾರು ವರ್ಷಗಳಿಂದ ಬೆಳೆದು ನಿಂತಿದ್ದ ನೆಲೆ ಬಾಳುವ ಮರಗಳನ್ನು ಕಡಿತಲೆ ಮಾಡಿರುವುದು ಬೆಳಕಿಗೆ ಬಂದಿರುತ್ತದೆ. ಗ್ರಾಮ ಸಮಿತಿಯಿಂದಲೇ ಅಕ್ರಮಕ್ಕೆ ಕುಮ್ಮಕ್ಕು ನೀಡಿದೆ ಎಂದು ಮೇಲ್ನೋಟಕ್ಕೆ ತಿಳಿದು ಬರುತ್ತಿದೆ. ಕಡಿತಲೆ ಮಾಡಿದ ಮರಗಳನ್ನು ಕೆಲವರ ಮನೆಯ ಆವರಣದಿಂದಲೇ ವಶಕ್ಕೆ ಪಡೆಯಲಾಗಿದೆ. ಬ್ರಿಟೀಷರ ಅವಧಿಯಲ್ಲಿ ಹಳೇಸೊರಬ ಮತ್ತು ತವನಂದಿ ಕಾಡಿಗೆ ಪ್ರಾಮುಖ್ಯತೆ ನೀಡಿದ್ದರು. ಇಲ್ಲಿನ ಅರಣ್ಯ ಸಂಪತ್ತಿನ ಬಗ್ಗೆ ಕಾಳಜಿ ಹೊಂದಿದ್ದ ಬ್ರಿಟಿಷರು 1865ರ ಹೊಸ್ತಿಲಲ್ಲಿಯೇ ಗ್ರಾಮಸ್ಥರಿಗೆ ನಿರ್ಬಂಧ ಹಾಕಿದ್ದರು ಎಂಬುದು ಇತಿಹಾಸ. ಜನರ ದುರಾಸೆಗೆ ಅತ್ಯಂತ ಅಪರೂಪದ ಮರಗಳು ಕಡಿತಲೆಗೊಂಡಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ವಿಚಾರಣೆ ನಡೆಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಸಿಎಫ್ ಪ್ರವೀಣ್ ಕುಮಾರ್ ಬಸ್ರೂರ್ ಮಾತನಾಡಿ, ಗ್ರಾಮ ಸಮಿತಿಗೆ ಹಣವನ್ನು ಸಂದಾಯ ಮಾಡಿ ಗ್ರಾಮಸ್ಥರು ಅಕ್ರಮವಾಗಿ ಮರಗಳನ್ನು ಕಡಿತಲೆ ಮಾಡಿದ್ದಾರೆ. ಸತತ ಮೂರು ದಿನಗಳಿಂದ ಕಾರ್ಯಚರಣೆ ನಡೆಸಿ, ಮಾಹಿತಿ ಕಲೆಹಾಕಲಾಗುತ್ತಿತ್ತು. ಆದರೆ, ದೊಡ್ಡ ಪ್ರಮಾಣದಲ್ಲಿ ಮರಗಳು ಕಡಿತಲೆಯಾಗಿರುವುದು ತಿಳಿಯುತ್ತಿದ್ದಂತೆ ಸೊರಬ, ಆನವಟ್ಟಿ, ಶಿಕಾರಿ ಪುರ, ಶಿರಾಳಕೊಪ್ಪ ಮತ್ತು ಸಾಗರ ವಲಯಗಳ ಸುಮಾರು 50 ಅರಣ್ಯ ಸಿಬ್ಬಂದಿ ಕೂಬಿಂಗ್ ಕಾರ್ಯಾಚರಣೆ ನಡೆಸಲಾಯಿತು. ಮರ ಕಡಿಯುವವರು ಊರಿನ ಮುಖಂಡರ ಗಮನಕ್ಕೆ ತಂದು ಅವರು ಕಡಿಯಲು ಅನುಮತಿ ನೀಡಿದ ಮೇಲೆಯೇ ಕಡಿತಲೆಗೆ ಮುಂದಾಗುತ್ತಿದ್ದರು. ಕಡಿತಲೆಯಾಗುವ ಪ್ರತಿ ಮರಕ್ಕೆ 250 ರೂಪಾಯಿ ಹಣವನ್ನು ಗ್ರಾಮ ಸಮಿತಿಯವರು ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ ಎಂದರು.
ಈ ಬಾರಿ ಹೊರಗಿನಿಂದ ಟ್ರಾಕ್ಟರ್‌ನ್ನು ತರಿಸಲಾಗಿತ್ತು. ಇಲಾಖೆಗೆ ಈ ಟ್ರಾಕ್ಟರ್‌ನಲ್ಲಿ ನಾಟಾ ಸರಬರಾಜು ಆಗುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದು ಕೊಂಡು ಕಾರ್ಯಾಚರಣೆ ನಡೆಸಲಾಗಿದೆ. ಈ ಸಂಬಂಧ ಒಟ್ಟಾರೆ 9 ಜನರ ಮೇಲೆ ಕೇಸನ್ನು ದಾಖಲು ಮಾಡಲಾಗಿದೆ. ಮರಗಳು ಕಡಿತಲೆಗೊಂಡಿರುವ ಪ್ರದೇಶಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್. ರವಿಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post