ಕಲ್ಪ ಮೀಡಿಯಾ ಹೌಸ್ | ಸೊರಬ |
ವ್ಯಕ್ತಿಯ ಬದುಕಿಗೆ ಪರಿಸರ ಎಲ್ಲವನ್ನೂ ಕಲ್ಪಿಸಿದೆ, ಆದರೆ, ಬದುಕಿನ ಜೀವಿತಾವಧಿಯಲ್ಲಿ ಪರಿಸರಕ್ಕೆ ಮತ್ತು ಸಮಾಜಕ್ಕೆ ಪೂರಕವಾದ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಪಿಎಸ್‍ಐ ಎಚ್.ಎನ್. ನಾಗರಾಜ್ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪಟ್ಟಣ ಪ್ರೌಢ ಶಾಲೆಯ ಆವರಣದಲ್ಲಿ ಜೆಸಿಐ, ಜೆಸಿಐ ಸಿಂಧೂರ ಹಾಗೂ ದೊಡ್ಮನೆ ರಾಮಪ್ಪ ಶ್ರೀಧರ್ ಸೇವಾ ಟ್ರಸ್ಟ್ ಸಹಯೋಗದಲ್ಲಿ ಜೆಸಿಐ ಸಂಸ್ಥೆಯ ರಾಷ್ಟ್ರೀಯ ಹಸಿರೀಕರಣ ಸಂಯೋಜಕ ಡಿ.ಎಸ್. ಪ್ರಶಾಂತ್ ಕುಮಾರ್ ದೊಡ್ಮನೆ ಜನ್ಮದಿನದ ನಿಮಿತ್ತ ಜೆಸಿಐ ಪಾರ್ಕ್ ನಿರ್ಮಾಣಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಜನ್ಮ ದಿನವನ್ನು ಆಡಂಭರವಾಗಿ ಆಚರಿಸಿ, ದುಂದು ವೆಚ್ಚ ಮಾಡದೆ ಪ್ರಶಾಂತ್ ಕುಮಾರ್ ದೊಡ್ಮನೆ ಅವರು ಸಸಿಗಳನ್ನು ನೆಡುವ ಮೂಲಕ ಆಚರಿಸಿಕೊಳ್ಳುತ್ತಿರುವುದು ಯುವಕರಿಗೆ ಮಾದರಿಯಾಗಿದ್ದಾರೆ. ಪರಿಸರ ಉಳಿದರೆ ಮಾತ್ರ ಮನುಕುಲದ ಉಳಿವು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಸಿಗಳನ್ನು ನೆಟ್ಟರೆ ಸಾಲದು ಪೋಷಿಸಬೇಕು. ಮಕ್ಕಳಲ್ಲೂ ಬಾಲ್ಯದಿಂದಲೇ ಪರಿಸರ ಜಾಗೃತಿ ಜೊತೆಗೆ ಕಾನೂನಿನ ಬಗ್ಗೆ ಅರಿವನ್ನು ಹೊಂದಬೇಕು. ಅಪ್ರಾಪ್ತರು ವಾಹನ ಚಾಲನೆ ಮಾಡಬಾರದು ಎಂದು ತಿಳಿಸಿದರು.
ಜೆಸಿಐ ಪಾರ್ಕ್ ನಾಮಫಲಕ ಅನಾವರಣಗೊಳಿಸಿದ ಜೆಸಿಐ ವಲಯ ಅಧ್ಯಕ್ಷ ಅನುಷ್‍ಗೌಡ ಮಾತನಾಡಿ, ಕೇಕ್ ಬಿಡು ಗಿಡ ನೆಡು ಎಂಬ ಆಲೋಚನೆಯೊಂದಿಗೆ ಜನ್ಮ ದಿನ ಆಚರಿಸುತ್ತಿರುವುದು ಶ್ಲಾಘನೀಯ. ಕಳೆದ ಆರು ವರ್ಷಗಳಿಂದ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಪಾರ್ಕ್‍ಗಳನ್ನು ನಿರ್ಮಿಸುತ್ತಿರುವ ವಿಷಯ ತಿಳಿದು ಸಂತಸ ತಂದಿತು ಎಂದರು.
ಜೆಡಿಎಸ್ ರಾಷ್ಟ್ರೀಯ ಹಸಿರೀಕರಣ ಸಂಯೋಜಕ ಡಿ.ಎಸ್. ಪ್ರಶಾಂತ್ ಕುಮಾರ್ ದೊಡ್ಮನೆ ಮಾತನಾಡಿ, ಹಸಿರು ಎಲ್ಲರ ಉಸಿರು ಎಂಬ ಧ್ಯೇಯದೊಂದಿಗೆ ಪರಿಸರಕ್ಕೆ ಪೂರಕವಾಗಿ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಜೆಸಿಐ ಸಂಸ್ಥೆಯಿಂದ ಸಮಾಜ ಸೇವೆಯ ಜೊತೆಗೆ ಹಸಿರೀಕರಣಕ್ಕೆ ಒತ್ತು ನೀಡಲಾಗಿದೆ. ಈ ಹಿಂದೆ ಜಡೆ, ಕರಡಿಗೆರೆ, ಪಿಡಬ್ಲುಡಿ ಕಾಲೋನಿ, ಚನ್ನಾಪುರ ಶಾಲೆಗಳಲ್ಲಿ ಮತ್ತು ಪಟ್ಟಣದ ಬಾಲಿಕಾ ಪ್ರೌಢ ಶಾಲೆಯಲ್ಲಿ ಪಾರ್ಕ್ ನಿರ್ಮಿಸಲಾಗಿತ್ತು. ಇದೀಗ ಪಟ್ಟಣದ ಪ್ರೌಢ ಶಾಲೆಯಲ್ಲಿ ಪಾರ್ಕ್ ನಿರ್ಮಿಸಲಾಗುತ್ತಿದೆ. ಕಾಡು ಜಾತಿ, ಫಲ ನೀಡುವ ಮತ್ತು ಅಲಂಕಾರಿಕ ಸುಮಾರು 150 ಗಿಡಗಳನ್ನು ನೆಡಲಾಗುತ್ತಿದೆ. ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಕುರಿತು ಗಮನಕ್ಕೆ ಬಂದಿದೆ. ಈ ಬಗ್ಗೆ ಪುರಸಭೆಯ ಸದಸ್ಯರಿಗೆ ಕೊಳವೆಬಾವಿ ಕೊರೆಸುವಂತೆ ಗಮನಕ್ಕೆ ತರಲಾಗುವುದು. ಇದರಿಂದ ಗಿಡಗಳಿಗೆ ಹನಿ ನಿರಾವರಿ ವ್ಯವಸ್ಥೆ ಕಲ್ಪಿಸಲು ಅನುಕೂಲವಾಗಲಿದೆ ಎಂದರು.
Also read: ಗಣೇಶ ವಾಸುದೇವ ಶೇಟ್ ಪತ್ನಿ ಮಥುರಾ ಬಾಯಿ ನಿಧನ
ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಮತ್ತು ಪಠ್ಯ ಪರಿಕರಗಳನ್ನು ವಿತರಿಸಲಾಯಿತು.
ಜೆಸಿಐ ಸಿಂಧೂರ ಸಂಸ್ಥಾಪಕ ಅಧ್ಯಕ್ಷೆ ಪೂಜಾ ಪ್ರಶಾಂತ್ ದೊಡ್ಮನೆ, ಜೆಸಿಐ ಅಧ್ಯಕ್ಷ ಎನ್. ರಾಘವೇಂದ್ರ, ಜೆಸಿಐ ಸಿಂಧೂರದ ನಿವೇದಿತಾ ಗೌಡ, ಲಯನ್ಸ್ ಜಿಲ್ಲಾ ಗೌವರ್ನರ್ ಸವಿತಾ ಎಂ.ಕೆ. ಭಟ್, ಹಿರಿಯ ವಕೀಲರಾದ ಎಂ.ಆರ್. ಪಾಟೀಲ್, ಎಂ. ನಾಗಪ್ಪ, ವಕೀಲ ಆಶೀಕ್, ಪ್ರಮುಖರಾದ ಮಹೇಶ್ ಖಾರ್ವಿ, ವಿನೋದ್ ವಾಲ್ಮೀಕಿ, ಭಾರತಿ ಹನುಮಂತಪ್ಪ, ರಾಘವೇಂದ್ರ ಯಲಕುಂದ್ಲಿ, ನವೀನ್ ಸಹಸ್ರವಳ್ಳಿ, ಮುಖ್ಯ ಶಿಕ್ಷಕ ಪಿ. ಮಾರುತಿ, ಶಿಕ್ಷಕರಾದ ಬಿ. ನಾಗರಾಜ್, ಉಷಾ ಭಟ್, ಮಂಗಳಾ ಹೆಗಡೆ, ಪ್ರತಿಭಾ, ಪರಮೇಶ್ವರಪ್ಪ, ಉಮೇಶ್ ಲಕ್ಷ್ಮಣ್ ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post