ಕಲ್ಪ ಮೀಡಿಯಾ ಹೌಸ್ | ಸೊರಬ |
ರಾಜ್ಯದಲ್ಲಿ ಅತಿವೃಷ್ಟಿ ಹಾನಿಯಿಂದ ರೈತರ ಎಲ್ಲಾ ಬೆಳೆಗಳು ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿವೆ. ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರೋಪಾದಿಯಲ್ಲಿ ರೈತರ ರಕ್ಷಣೆಗೆ ಬರಬೇಕಾಗಿದೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಒತ್ತಾಯಿಸಿದೆ.
ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ರಾಜ್ಯ ಕಾರ್ಯಾಧ್ಯಕ್ಷ ಮಂಜುನಾಥ್ ಗೌಡ ಮಾತನಾಡಿ, ಪ್ರವಾಹ ಪೀಡಿತ ಪ್ರದೇಶಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಸೂಕ್ತ ಕ್ರಮ ಕೈಗೊಳ್ಳದೆ ಅಜಾಗರೂಕತೆ ವಹಿಸುವುದು ಶೋಚನೀಯ ಸಂಗತಿಯಾಗಿದೆ. ಪರಿಹಾರ ಹಂಚಿಕೆ ಮಾಡುವಾಗ ವಿಪತ್ತು ಘೋಷಣೆ ಸಮಯದಲ್ಲಿ ತೆಗೆದುಕೊಳ್ಳಲಾಗುವ ಅಗತ್ಯ ಕ್ರಮಗಳನ್ನೇ ಅತೀವೃಷ್ಟಿ ಸಂದರ್ಭದಲ್ಲಿ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ರಾಷ್ಟ್ರೀಯ ವಿಪತ್ತು ಘೋಷಣೆ ಮಾಡಿ ಅದರ ಅಡಿಯಲ್ಲಿ ರೈತರನ್ನು ರಕ್ಷಣೆ ಮಾಡಬೇಕಾಗಿದೆ. ಮಲೆನಾಡಿನಲ್ಲಿಯೂ ಕೂಡ ಎಲ್ಲಾ ಬೆಳೆಗಳು ಆರ್ಥಿಕ ಬೆಳೆಗಳು ಕೂಡ ಬಹಳ ದೊಡ್ಡ ಪ್ರಮಾಣದಲ್ಲಿ ನಷ್ಟಕ್ಕೆ ಈಡಾಗಿವೆ. ಅಡಿಕೆ ಬೆಳೆಗೆ ಶೇ.95 ರಷ್ಟು ಕೊಳೆ ರೋಗ ಬಂದಿದೆ. ರೈತರು ಮೂರು ಬಾರಿ ಮುಂಜಾಗ್ರತಾ ಕ್ರಮವಾಗಿ ಕೊಳೆ ರೋಗದ ಔಷಧಿಯನ್ನು ಸಿಂಪಡಿಸಿದ್ದರೂ ಸಹ ಕೊಳ ರೋಗ ಹತೋಟಿಗೆ ಬಂದಿರುವುದಿಲ್ಲ, ಕಾರಣ ಸರ್ಕಾರಗಳು ರೈತರ ನೆರವಿಗಾಗಿ ತಕ್ಷಣ ಪರಿಹಾರ ಮತ್ತು ಬೆಳೆ ವಿಮೆ ನೀಡಲು ಕ್ರಮ ತೆಗೆದುಕೊಳ್ಳಬೇಕು. ಕಳೆದ ಬಾರಿಯ ಬೆಳೆ ವಿಮೆಯೂ ಕೂಡ ಬರಬೇಕಾಗಿದೆ. ಅದನ್ನು ಕೂಡ ತಕ್ಷಣ ನೀಡಬೇಕು. ಎಲ್ಲಾ ರೀತಿಯ ಮನೆ, ಕೊಟ್ಟಿಗೆ ಜಮೀನು ದಾನಿಗಳಿಗೂ ಮತ್ತು ಜೀವ ಹಾನಿಗಳಿಗೂ ಪರಿಹಾರ ನೀಡಬೇಕು ಎಂದರು.
Also read: ಯುಪಿಐ ಪಾವತಿ ಸೇವೆಗಳ ಮೇಲೆ ಶುಲ್ಕ: ಕೇಂದ್ರ ಸರ್ಕಾರದ ಸ್ಪಷ್ಟನೆಯೇನು? ಇಲ್ಲಿದೆ ನೋಡಿ
ಕೆಲವು ಗೊಬ್ಬರದ ಅಂಗಡಿಗಳಲ್ಲಿ ಡಿಎಪಿ, ಯೂರಿಯಾ ತೆಗೆದುಕೊಳ್ಳುವಾಗ ಮತ್ತೊಂದು ವಸ್ತುವನ್ನು ತೆಗೆದುಕೊಳ್ಳಲು ಒತ್ತಾಯ ಮಾಡುತ್ತಾರೆ. ಈ ಕ್ರಮವನ್ನು ನಿಲ್ಲಿಸಬೇಕು. ರಾಜ್ಯದ ಯಾವುದೇ ಸರೋವರ, ಹಳ್ಳಗಳು ನೆರೆ ಬಂದಾಗ ನಿರ್ದಿಷ್ಟವಾದ ಭೂಮಿ ಮುಳುಗಡೆಯಾಗುತ್ತವೆ. ನಿರ್ದಿಷ್ಟ ಜಮೀನಿನ ಬೆಳೆಗಳು ನಾಶವಾಗುತ್ತವೆ. ಬೆಳೆಯ ಹಾನಿಯ ಪ್ರಮಾಣವನ್ನು ಅಧಿಕಾರಿಗಳು ಮಳೆ ಬಂದ ಪ್ರಮಾಣದ ಆಧಾರದ ಮೇಲೆ ಯಾವ ನದಿಯ ಎಷ್ಟು ಜಮೀನು ಮುಳುಗಡೆಯಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಪ್ರತಿ ಬಾರಿಯೂ ಮುಳುಗಡೆ ಪ್ರದೇಶಕ್ಕೆ ಹೋಗಿ ನೆಪ ಮಾತ್ರಕ್ಕೆ ಮುಳುಗಡೆಯಾದ ಪ್ರದೇಶವನ್ನು ನೋಡುವುದನ್ನು ಬಿಟ್ಟು, ಆ ನದಿಯ ಮುಳುಗಡೆ ಪ್ರದೇಶದ ಎಲ್ಲಾ ರೈತರಿಗೆ ಪರಿಹಾರ ನೀಡಬೇಕು. ಇಂತಹ ಸಂದರ್ಭದಲ್ಲಿಯೂ ರೈತರನ್ನು ಬೀದಿಗಿಳಿಸದಂತೆ, ಪರಿಹಾರಕ್ಕಾಗಿ ಕಚೇರಿಗೆ ಅಲೆದಾಡಿಸದಂತೆ ನೋಡಿಕೊಳ್ಳುವದು ಸರ್ಕಾರಗಳ ಜವಾಬ್ದಾರಿಯಾಗಿದೆ. ಇದನ್ನು ಮರೆತರೆ ಮುಂದಿನ ದಿನಗಳಲ್ಲಿ ಘೋರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸಂಚಾಲಕ ಉಮೇಶ್ ಪಾಟೀಲ್ ಮಾತನಾಡಿ, ಕೃಷಿ ಚಟುವಟಿಕೆಗಳಿಗೆ ಸಂಬಂಧಪಟ್ಟ ಸಲಕರಣೆಗಳ ಹಂಚಿಕೆಯಲ್ಲಿ ವಿಳಂಬವಾಗುತ್ತಿದೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುವುದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post