ಕಲ್ಪ ಮೀಡಿಯಾ ಹೌಸ್ | ಸೊರಬ |
ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳು ವಿಫುಲ ಉದ್ಯೋಗಾವಕಾಶಗಳನ್ನು ಪಡೆಯಲು ಅವಕಾಶವಿದೆ. ಕೌಶಲ್ಯಾಧರಿತ ಜೀವನ ಕ್ರಮಕ್ಕೆ ಈ ನೀತಿ ನೆರವಾಗಲಿದೆ ಎಂದು ಕರ್ನಾಟಕ ಯುವ ನೀತಿ ಸಮಿತಿ ಸದಸ್ಯ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಪಟ್ಟಣಕ್ಕೆ ಆಗಮಿಸಿದ್ದ ಅವರು ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಯುವಬ್ರಿಗೇಡ್ ಸಹಯೋಗದಲ್ಲಿ ನಡೆದ ಯುವ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಿಕ್ಷಣ ಕೇವಲ ಸರ್ಕಾರಿ ಅಥವಾ ಯಾವುದೇ ಖಾಸಗಿ ಕಂಪೆನಿಗಳ ಉದ್ಯೋಗಕ್ಕಾಗಿ ಎನ್ನುವ ಮನೋಭಾವದಿಂದ ಯುವಕರು ಹೊರಬರಬೇಕು. ಶಿಕ್ಷಣ ಸ್ವ ಉದ್ಯೋಗಕ್ಕೆ ಬಳಕೆಯಾದರೆ ನಮ್ಮ ಕಲಿಕೆ ಸಾರ್ಥಕ. ಜ್ಞಾನದ ವಿಸ್ತರಣೆ ಆಯಾ ಕಾಲಘಟ್ಟಕ್ಕನುಗುಣವಾಗಿ ದೊರೆಯುವಂತಾಗಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಹಂತದಲ್ಲಿ ಪೋಷಕರ ಪಾತ್ರ ಹಿರಿದು, ಮಕ್ಕಳ ಬೆಳವಣಿಗೆಯಲ್ಲಿ ಕುರುಡು ಮನೋಭಾವಕ್ಕಿಂತ ಸೂಕ್ಷ್ಮ ಅವಲೋಕನ, ಮಾರ್ಗದರ್ಶನ ಅವಶ್ಯವಿರುತ್ತದೆ ಎಂದರು.
ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳಲ್ಲದೆ ಹಳೇಸೊರಬ ಪ್ರೌಢಶಾಲೆ ವಿದ್ಯಾರ್ಥಿಗಳ ಜೊತೆ, ಸ್ವಾಮಿ ವಿವೇಕಾನಂದ ಪ್ರೌಢಶಾಲೆಗೆ ಭೇಟಿ ನೀಡಿ ಸಂವಾದ ನಡೆಸಿದರು. ಮಕ್ಕಳ ಟ್ಯಾಬ್, ಕಂಪ್ಯೂಟರ್ ಬಳಕೆ ಕುರಿತು ಮಾಹಿತಿ ಪಡೆದರು.
ಕಾಲೇಜು ಪ್ರಾಚಾರ್ಯ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ವೀರೇಶಮೇಸ್ತ್ರಿ, ಉಪಾಧ್ಯಕ್ಷ ಮಧುರಾಯಶೇಟ್, ಯುವ ಬ್ರಿಗೇಡ್‌ನ ಸಂಚಾಲಕ ಮಹೇಶಖಾರ್ವಿ, ಕಸಾಸಾಂವೇ ಅಧ್ಯಕ್ಷ ಶಂಕರಶೇಟ್, ಗುರುಕುಲದ ಸತೀಶ್ ಬೈಂದೂರು, ನಾಗರಾಜಗುತ್ತಿ, ಇನ್ನೂ ಅನೇಕರು ಪಾಲ್ಗೊಂಡಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post