ಕಲ್ಪ ಮೀಡಿಯಾ ಹೌಸ್ | ಸೊರಬ |
ವಿವಿಧ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರನ್ನು ಅನಾವಶ್ಯಕವಾಗಿ ಸತಾಯಿಸುವುದು, ವಿಳಂಬ ಮಾಡುವುದು ತಮ್ಮ ಗಮನಕ್ಕೆ ಬಂದರೆ ಅಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಎಚ್ಚರಿಕೆ ನೀಡಿದರು.
Also Read: ಭದ್ರಾ ಡ್ಯಾಂ ಪ್ರದೇಶಕ್ಕೆ ಶ್ರೀರವಿಶಂಕರ್ ಗುರೂಜಿ ಭೇಟಿ: 40 ವರ್ಷದ ಹಿಂದಿನ ದಿನ ಮೆಲುಕು
ಪುರಸಭೆ ಹಾಗೂ ತಾಲೂಕು ಕಚೇರಿಗಳಿಗೆ ಇಂದು ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿದರು.
ಕೆಲವು ಗ್ರಾಮ ಪಂಚಾಯ್ತಿಗಳು ಪುರಸಭೆಯೊಂದಿಗೆ ವಿಲೀನಗೊಂಡ ನಂತರ ಸಾರ್ವಜನಿಕರಿಗೆ ಕೆಲವೊಂದು ತೊಂದರೆಗಳು ಎದುರಾಗುತ್ತಿವೆ. ಪ್ರಮುಖವಾಗಿ ನಿರಪೇಕ್ಷಣಾ ಪತ್ರ, ಕಟ್ಟಡ ನಿರ್ಮಾಣ ಅನುಮತಿ ಪತ್ರ, ಇ-ಸ್ವತ್ತು, ಉದ್ಯೋಗ ಪರವಾನಗಿ ಪತ್ರ ಸೇರಿದಂತೆ ಹಲವು ದಾಖಲೆಗಳನ್ನು ಪಡೆಯಲು ಸಾರ್ವಜನಿಕರು ಕಚೇರಿಗೆ ತಿಂಗಳುಗಟ್ಟಲೆ ಅಲೆಯಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು.
ಇದಕ್ಕೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಸದ್ಯ 180 ಅರ್ಜಿಗಳು ಬಾಕಿದೆ. ಇದನ್ನು ತತಕ್ಷಣ ವಿಲೇವಾರಿ ಮಾಡಬೇಕು ಎಂದು ಸೂಚಿಸಿ, ಹೊಸದಾಗಿ ಅರ್ಜಿಗಳನ್ನು ವಿತರಿಸಿ, ಅವುಗಳನ್ನು ಆದಷ್ಟು ಶೀಘ್ರವೇ ವಿಲೇ ಮಾಡಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಅನಾವಶ್ಯಕವಾಗಿ ಕಚೇರಿಗಳಿಗೆ ಅಲೆದಾಡಿಸಬಾರದು ಎಂದು ತಾಕೀತು ಮಾಡಿದರು.
ಸಿಬ್ಬಂದಿ ಕೊರತೆ ಪರಿಹಾರಕ್ಕೆ ಕ್ರಮ
ಇನ್ನು, ಇಸಾ-ಪೋಡಿ ಅರ್ಜಿಗಳನ್ನು ಸಲ್ಲಿಸಿ ಇದಕ್ಕಾಗಿ ತಿಂಗಳುಗಳಗಟ್ಟಲೆ ಸಾರ್ವಜನಿಕರು ಕಾಯಬೇಕು. ಸಿಬ್ಬಂದಿ ಕೊರತೆಯಿದೆ ಎಂದು ಅಧಿಕಾರಿಗಳು ಹೇಳುತ್ತಾರೆ ಎಂದು ಡಿಸಿ ಅವರಿಗೆ ಸಾರ್ವಜನಿಕರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಸಿಬ್ಬಂದಿ ಕೊರತೆಯಿದ್ದರೂ ಬೇರೆ ತಾಲೂಕುಗಳಿಗೆ ಹೋಲಿಸಿದರೆ ಸೊರಬದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಈ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು. ಅಲ್ಲದೇ, ಸಿಬ್ಬಂದಿ ಕೊರತೆ ಪರಿಹರಿಸಲು ಕ್ರಮಗೊಳ್ಳಲಾಗುವುದು ಎಂದರು.
Also Read: ಬಸ್-ಕಾರು ನಡುವೆ ಭೀಕರ ಅಪಘಾತ: ಐವರು ವಿದ್ಯಾರ್ಥಿಗಳು ದುರ್ಮರಣ
ಇನ್ನು, ನಗರದಲ್ಲಿ ಕನ್ಸರ್ವೆನ್ಸಿ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿಸಿ ಅವರು, ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಕನ್ಸರ್ವೆನ್ಸಿಗಳ ಪಟ್ಟಿ ಮಾಡಿ ಸಲ್ಲಿಸಿ, ಅದರ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳಿ. ಸಾರ್ವಜನಿಕರ ಅನುಕೂಲಕ್ಕಾಗಿ ಯಾವುದೇ ಸಂಪರ್ಕ ರಸ್ತೆಗಳಲ್ಲಿ ಒತ್ತುವರಿಯಾಗಿದ್ದರೆ ಮುಲಾಜಿಲ್ಲದೇ ತೆರವುಗೊಳಿಸಿ ಎಂದು ಸೂಚಿಸಿದರು.
ಲಂಚ ಕೇಳಿದರೆ ಕಾನೂನು ಕ್ರಮ
ಇನ್ನು, ತಾಲೂಕಿನ ಸರ್ಕಾರಿ ಕಚೇರಿಗಳಿಗೆ ಆಗಮಿಸುವ ಯಾವುದೇ ಸಾರ್ವಜನಿಕರಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಣ ಅಥವಾ ಲಂಚ ಪಡೆದಿದ್ದ ತಮ್ಮ ಗಮನಕ್ಕೆ ಬಂದರೆ ಅಂತಹವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದರು.
ಅಲ್ಲದೇ, ಸಾರ್ವಜನಿಕರ ಕಾರ್ಯಗಳಲ್ಲಿ ವಿಳಂಬ ನೀತಿ ಅನುಸರಿಸುವುದು, ಅನಾವಶ್ಯಕವಾಗಿ ಅಲೆದಾಡಿಸುವುದು, ತೊಂದರೆಯಾಗುವ ರೀತಿಯನ್ನು ನಡೆದುಕೊಳ್ಳುವ ಕುರಿತಾಗಿ ತಮಗೆ ದೂರು ಬಂದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post