ಕಲ್ಪ ಮೀಡಿಯಾ ಹೌಸ್ | ಸೊರಬ |
ದೇಶದಲ್ಲಿ ಕೋಮುಭಾವನೆಗಳನ್ನು ಕೆರಳಿಸಿ ಅಧಿಕಾರ ನಡೆಸುತ್ತಿರುವ ಬಿಜೆಪಿಯು ಆಟಗಳು ಇನ್ನು ಮುಂದೆ ನಡೆಯುವುದಿಲ್ಲ ಎನ್ನುವುದಕ್ಕೆ ಬಿಹಾರದಲ್ಲಿನ ಬೆಳವಣಿಗೆಗಳೇ ಸಾಕ್ಷಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಹೇಳಿದ್ದಾರೆ.
ಬಂಗಾರಧಾಮದಲ್ಲಿ ತಾಲೂಕು ಯುವ ಕಾಂಗ್ರೆಸ್ ಹಾಗೂ ಎನ್’ಎಸ್’ಯುಐ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಾದ್ಯಂತ ಬಿಜೆಪಿ ಜನರ ಭಾವನೆ ಹಾಗೂ ಧರ್ಮಗಳ ನಡುವೆ ಕೆರಳಿಸಿ ಅಧಿಕಾರಕ್ಕೆ ಬಂದಿದೆ. ಶಾಶ್ವತವಾಗಿ ನಾವು ಅಧಿಕಾರದಲ್ಲಿ ಇರುತ್ತೇವೆ ಎಂಬ ಭ್ರಮೆಯಲ್ಲಿ ಇದ್ದಾರೆ. ಆದರೆ, ಈಗ ಇವರ ಯೋಗ್ಯತೆ ಜನರಿಗೆ ತಿಳಿದಿದ್ದು, ಜನರು ಪ್ರಜ್ಞಾವಂತರಾಗಿದ್ದಾರೆ. ಹೀಗಾಗಿ, ಇವರ ಆಟಗಳು ಇನ್ನು ಮುಂದೆ ನಡೆಯುವುದಿಲ್ಲ. ಬಿಹಾರದಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಯೇ ಇದಕ್ಕೆ ಸಾಕ್ಷಿ ಎಂದು ಕಟಕಿಯಾಡಿದರು.

ಅಂದು ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಈಸ್ಟ್ ಇಂಡಿಯಾ ಕಂಪನಿ ದೇಶವನ್ನು ಗುಲಾಮಗಿರಿಗೆ ತಳ್ಳಿತು. ಆದರೆ ಇಂದು ಉದ್ಯಮಿಗಳಾದ ಅಂಬಾನಿ, ಅದಾನಿ ದೇಶವನ್ನು ತಮ್ಮ ಕಪಿಮುಷ್ಠಿಯಟ್ಟುಕೊಂಡು ಸರ್ಕಾರವನ್ನು ನಡೆಸುತ್ತಿದ್ದಾರೆ. ಇಂಥವರಿAದ ದೇಶವನ್ನು ಬಿಡಿಸಿಕೊಳ್ಳಬೇಕಿದೆ. ಆರ್ಥಿಕವಾಗಿ ದಿವಾಳಿಯಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಹಾರ ಪದಾರ್ಥ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹಾಕುವ ಮೂಲಕ ಬಡವರ ಮೇಲೆ ಪ್ರಹಾರ ನಡೆಸಿದ್ದಾರೆ. ಬೆಲೆ ಏರಿಕೆ ಹಾಗೂ ಜಿಎಸ್‌ಟಿಯಂದಾಗಿ ರೋಸಿ ಹೋಗಿರುವ ಮತದಾರರು ಕಾಂಗ್ರೆಸ್ ಕಡೆ ಮುಖ ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಅಲ್ಲದೇ ತಾವು ಸೊರಬ ಕ್ಷೇತ್ರದಿಂದ ಗೆಲ್ಲುವುದು ನೂರಕ್ಕೆ ನೂರು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎನ್’ಎಸ್’ಯುಐ ಘಟಕದ ಅಧ್ಯಕ್ಷ ಅಭಿಷೇಕ್ ಮಾತನಾಡಿ, ಭಾರತ ಸ್ವಾತಂತ್ರ ಸಂಗ್ರಾಮದಲ್ಲಿ ಬಿಜೆಪಿಯ ಪಾತ್ರ ಶೂನ್ಯವಾಗಿದ್ದು, ಬಂಧಿಯಾಗಿದ್ದ ಸಾವರ್ಕರ್ ಜೈಲು ವಾಸಕ್ಕೆ ಹೆದರಿ ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟಿದ್ದರು. ಇಂತಹವರನ್ನು ಬಿಜೆಪಿ ವೀರ ಎಂದು ಬಿಂಬಿಸುತ್ತಿದೆ ಎಂದು ಹೇಳಿದರು.
ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಎನ್’ಎಸ್’ಯುಐ ಪದಾಧಿಕಾರಿಗಳಾದ ಸಂಜಯ ದೇವತಿಕೊಪ್ಪ, ಯಶೋಧರ ಅಂದವಳ್ಳಿ, ರವಿ ಕೆಸರಿ, ಪಾಂಡು ಕೊಡಕಣಿ, ಸಚಿನ್, ಮಧು, ಸಿದ್ದೇಶ್, ನಂಜುಂಡ ಕಲ್ಲಂಬಿ, ಅನಿಲ್, ಮಂಜು ಹೆಸರಿ, ಅಭಿಷೇಕ್ ಬಿಳವಾಣಿ, ಜಗದೀಶ ಕಕ್ಕರಸಿ, ರಾಘು ಹುಲ್ತಿಕೊಪ್ಪ, ಪ್ರದೀಪ್, ಮಂಜುನಾಥ ಚಿಕ್ಕಶಕುನ ಮುಖಂಡರಾದ ಎಚ್. ಗಣಪತಿ, ನಾಗಪ್ಪ ಮಾಸ್ತರ್, ನಾಗರಾಜ ಚಂದ್ರಗುತ್ತಿ, ಪ್ರಭಾಕರ ಶಿಗ್ಗಾ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಶಿ ಚಿಲನೂರು ಮೊದಲಾದವರು ಹಾಜರಿದ್ದರು.
(ವರದಿ: ಮಧುರಾಮ್, ಸೊರಬ)









Discussion about this post