ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಶ್ರೀ ರೇಣುಕಾಂಬ ದೇವಸ್ಥಾನದ ರಥಭೀದಿಯಲ್ಲಿರುವ 22 ಅಂಗಡಿ ಮಳಿಗೆಗಳನ್ನು ಸೋಮವಾರ ದೇವಸ್ಥಾನದ ಆಡಳಿತ ಕಛೇರಿ ಆವರಣದಲ್ಲಿ ಪ್ರಭಾರ ಉಪ ತಹಸೀಲ್ದಾರ್ ಹಾಗೂ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವಿ.ಎಲ್. ಶಿವಪ್ರಸಾದ್ ಅವರ ಸಮ್ಮುಖದಲ್ಲಿ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಲಾಯಿತು.
22 ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ 21 ಲಕ್ಷದ 61 ಸಾವಿರರೂ ಸಂಗ್ರಹವಾಗಿದೆ. ಕಳೆದ ವರ್ಷ ಹರಾಜು ಪ್ರಕ್ರಿಯೆ ನಡೆಸಿದಾಗ 13 ಲಕ್ಷದ 35 ಸಾವಿರ ರೂ. ಆದಾಯ ದೊರಕಿದೆ.
ಅಂಗಡಿ ಮಳಿಗೆಗಳನ್ನು ಗುತ್ತಿಗೆ ಹಿಡಿದ ಗುತ್ತಿಗೆದಾರರು ಸರ್ಕಾರವು ನಿರ್ಮಿಸಿ ಕೊಟ್ಟ ರೀತಿಯಲ್ಲಿಯೇ ಮುಂದಿನ 11 ತಿಂಗಳ ಅವಧಿಯ ತನಕ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಗುತ್ತಿಗೆ ಹಿಡಿದ ಗುತ್ತಿಗೆದಾರರು ಏಳು ದಿನಗಳ ಒಳಗೆ ಹಣ ಪಾವತಿ ಮಾಡಬೇಕು ಎಂದು ಹರಾಜಿನಲ್ಲಿ ತಿಳಿಸಿದರು.
ಈ ವೇಳೆ ಮಾತನಾಡಿದ ಶ್ರೀರೇಣುಕಾಂಬ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯನಿರ್ವಹಣಾಧಿಕಾರಿ ವಿ.ಎಲ್. ಶಿವಪ್ರಸಾದ್, ದೇವಸ್ಥಾನದ ಅಂಗಡಿ ಮಳಿಗೆಗಳನ್ನು ಬಿಟ್ಟು ಇತರೆ ದೇವಸ್ಥಾನದ ಆವರಣ ಮತ್ತು ರಸ್ತೆಗಳಲ್ಲಿ ವ್ಯಾಪಾರ ವಹಿವಾಟುಗಳನ್ನು ನಡೆಸಿದ್ದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕುಂಕುಮ, ಬಂಡಾರ, ಅಂಗಡಿ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಸ್ಥಳ ನಿಗದಿಪಡಿಸುವಲ್ಲಿ ಚರ್ಚಿಸುತ್ತೇವೆ, ಸ್ಥಳ ಅವಕಾಶದ ಅಭಾವದ ಕೊರತೆ ಇರುವುದರಿಂದ ಯಾವುದೇ ಪಾರ್ಕಿಂಗ್ ಹರಾಜು ಪ್ರಕ್ರಿಯೆ ನಡೆಸಿಲ್ಲ. ಪ್ರತಿಯೊಬ್ಬ ವ್ಯಾಪಾರಸ್ಥರಿಗೂ ಸಮಾನವಾಗಿ ಸಿಗುವಂತೆ ಅಂಗಡಿ ಮಳಿಗೆಗಳನ್ನು ಹರಾಜು ಮಾಡಿದ್ದೇವೆ ಎಂದರು.
ಹರಾಜು ಪ್ರಕ್ರಿಯೆಯಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಸನ್ನ ಶೇಟ್, ಸದಸ್ಯರಾದ ಪ್ರವೀಣ್ ಮಿರ್ಜಿ, ನಟರಾಜ್, ದೇವೇಂದ್ರಪ್ಪ, ವೆಂಕಟೇಶ್, ರತ್ನಾಕರ್ ಶಾನುಭೋಗ, ದೇವಸ್ಥಾನದ ಸಿಬ್ಬಂದಿ ಶಶಿಕಲಮ್ಮ, ಚಂದನ್ ಸೇರಿದಂತೆ ಮತ್ತಿತರರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















