ಕಲ್ಪ ಮೀಡಿಯಾ ಹೌಸ್ | ಸೊರಬ |
ಪಶ್ಚಿಮಘಟ್ಟದ ಸಂರಕ್ಷಣೆ ಮತ್ತು ಸಂವರ್ಧನೆ, ಜನಜಾಗೃತಿ ಮತ್ತು ಜನಾಂದೋಲನ, ಮಲೆನಾಡಿನ ಸುಸ್ಥಿರ ಅಭಿವೃದ್ಧಿಗಾಗಿ ಸಕ್ರಿಯ ಕಾರ್ಯನಿರ್ವಹಿಸುತ್ತಿರುವ ಇಲ್ಲಿನ ಪರಿಸರ ಜಾಗೃತಿ ಟ್ರಸ್ಟ್ ಶರಾವತಿ ಸಂರಕ್ಷಣೆಗಾಗಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಶರಾವತಿ ಭೂಗತ ಪಂಪ್ಡ್ ಸ್ಟೋರೇಜ್ ಯೋಜನೆ #Sharavathi Pumped Storage Project ಪರಿಸರ ಪರಿಣಾಮ ವರದಿ ಸಂಪೂರ್ಣ ತಪ್ಪು ಹಾಗೂ ಯೋಜನಾ ಪರವಾದ ವರದಿ ಮಾತ್ರ ಆಗಿದೆ. ಸುಳ್ಳಿನ ಸರಮಾಲೆಯ ವರದಿಯಿದು ಎಂದು ಪಜಾಟ್ರಸ್ಟ್ ಅಧ್ಯಕ್ಷ ವಕೀಲ ಎಂ.ಆರ್.ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದೇ 16 ರಂದು ನಡೆಯಲಿರುವ ಶರಾವತಿ ಪಂಪ್ ಸ್ಟೋರೇಜ್ ಜಲವಿದ್ಯುತ್ ಯೋಜನೆಯ ಸಾರ್ವಜನಿಕ ಅಹವಾಲು ಸಭೆ ಪೂರ್ವದಲ್ಲೆ ಯೋಜನೆಯ ಮಾರಕ ಪರಿಣಾಮಗಳ ಕುರಿತು ಟ್ರಸ್ಟ್ ಅಭಿಪ್ರಾಯಗಳನ್ನು ನೀಡಿದೆ. ಅಹವಾಲು ಸಭೆಯ ಅಧ್ಯಕ್ಷ ಮಾನ್ಯ ಜಿಲ್ಲಾಧಿಕಾರಿಗಳಿಗೆ ಯೋಜನಾ ವಿರೋಧಿ ಅಂಕಿ, ಅಂಶಗಳನ್ನು ಪ್ರಚುರ ಪಡಿಸುವ ಮೂಲಕ ಮನವಿ ಸಲ್ಲಿಸಲಿದೆ.
ಯಾವುದೇ ಬೃಹತ್ ಅಭಿವೃದ್ಧಿ ಯೋಜನೆ ಜಾರಿ ಮಾಡುವಾಗ ಈ ಯೋಜನೆಯ ವ್ಯಾಪ್ತಿ ಪ್ರದೇಶವನ್ನು ಗುರುತಿಸಲಾಗುತ್ತದೆ. ಆದರೆ, ಶರಾವತಿ ಕಣಿವೆಯ ಗೇರುಸೊಪ್ಪಾದಿಂದ ಕೆಳಗೆ ಶರಾವತಿ ನದಿ ತೀರದ ಹಳ್ಳಿಗಳು ರೈತರು, ಮೀನುಗಾರರು, ಜನತೆ ಮೇಲೆ, ನದಿ ಪರಿಸ್ಥಿತಿ ಮೇಲೆ ಭೂಗತ ಯೋಜನೆ ಏನೆಲ್ಲ ದುಷ್ಪರಿಣಾಮ ಬೀರಲಿದೆ ಎಂಬ ಕನಿಷ್ಠ ಪ್ರಸ್ತಾಪವನ್ನೇ ಯೋಜನಾ ವರದಿಯಲ್ಲಿ ಹೇಳಲಾಗಿಲ್ಲ. ಈ ಯೋಜನೆ ಜಾರಿಯಿಂದ ಶರಾವತಿ ನದಿಗೆ ಸಿಹಿನೀರು ಸಿಗುವುದಿಲ್ಲ ಎಂಬ ವಿಜ್ಞಾನಿಗಳ ಅಭಿಪ್ರಾಯವನ್ನು ಪರಿಸರ ಇಲಾಖೆ, ಸಿ.ಆರ್.ಜಡ್ ಪ್ರಾಧಿಕಾರ ಪರಿಗಣಿಸಿಲ್ಲ. ಈ ಮುಖ್ಯ ಅಂಶ ಪರಿಸರ ಪರಿಣಾಮ ವರದಿಯಲ್ಲಿ ಎದ್ದು ಕಾಣಬೇಕಿತ್ತು. ಕೆ.ಪಿ.ಸಿ ಭೂಗತ ಜಲವಿದ್ಯುತ್ ಯೋಜನೆಯಿಂದ ಒಂದು ಲಕ್ಷ ರೈತರು, ಮೀನುಗಾರರು ಬೆಳೆ ಬೆಳೆಯಲಾರದ, ಮೀನು ಕ್ಷಾಮ ಎದುರಿಸುವ ಉಪ್ಪು ನೀರು ಕುಡಿಯುವ ಪರಿಸ್ಥಿತಿಗೆ ಬರುತ್ತಾರೆ. ಬೃಹತ್ ಯೋಜನೆಗಳನ್ನು ಮಲೆನಾಡಿನ ಜನತೆ ಮೇಲೆ, ಪರಿಸರದ ಮೇಲೆ ಅತಿಯಾಗಿ ಹೇರುತ್ತಲೇ ಇರುವ ರಾಜ್ಯ-ಕೇಂದ್ರ ಸರ್ಕಾರಗಳು ತೋರಿಕೆಗೆ ಅಹವಾಲು ಸಭೆ ನಡೆಸುತ್ತಿವೆ. ಅರಣ್ಯ, ಪರಿಸರ, ಜೀವವೈವಿಧ್ಯ ಮತ್ತು
ವನ್ಯಜೀವಿ ಕಾಯಿದೆಗಳ ಪಾಲನೆ ಮತ್ತು ಉಲ್ಲಂಘನೆ ವಿಷಯದಲ್ಲಿ ಸರ್ಕಾರದ ಬೃಹತ್ ಅಭಿವೃದ್ಧಿ ಯೋಜನೆಗಳು ಹೊರತಾಗಿವೆಯಾ? ಶರಾವತಿ ಭೂಗತ ಯೋಜನೆ ವಿಷಯದಲ್ಲಿ ರಾಜ್ಯ ಸರ್ಕಾರದ ಕರ್ನಾಟಕ ಪವರ್ ಕಾರ್ಪೋರೇಷನ್‌ಗೆ ಅರಣ್ಯ-ವನ್ಯಜೀವಿ ಪರವಾನಿಗೆ ಸಿಗಲು ಕಾಯಿದೆಗಳನ್ನು ಸಡಿಲಗೊಳಿಸಲು ವಿಶೇಷ ಪರಿಸ್ಥಿತಿ ಇದೆಯಾ ಎಂಬುದನ್ನು ¸ ಸರ್ಕಾರ ಬಹಿರಂಗ ಗೊಳಿಸಬೇಕು ಎಂದು ಟ್ರಸ್ಟ್ ಆಗ್ರಹಿಸಿದೆ.
ಪಶ್ಚಿಮಘಟ್ಟದ ಶರಾವತಿ ಅಭಯಾರಣ್ಯ ಕಣಿವೆ ನಾಶಮಾಡುವ ಭೂಗತ ಜಲವಿದ್ಯುತ್ ಯೋಜನೆಯ ವಿನಾಶಕಾರಿ ಸಾಹಸಕ್ಕೆ ಮುಂದಾಗುವುದನ್ನು ಪವರ್ ಕಾರ್ಪೊರೇಷನ್ ಕೈ ಬಿಡಬೇಕು. ಬದಲಾಗಿ ಶಿವಮೊಗ್ಗಾ ಮತ್ತು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಘಟ್ಟದ ಹಳ್ಳಿಗಳ ೩ ಲಕ್ಷ ಕುಟುಂಬಗಳ ಮನೆಗಳಿಗೆ ಛಾವಣಿ ಸೋಲಾರ್ ವಿದ್ಯತ್ ನೀಡುವ ಯೋಜನೆ ಜಾರಿ ಮಾಡಲು ಕೆ.ಪಿ.ಸಿ ಮುಂದಾಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಟ್ರಸ್ಟ್ ಒತ್ತಾಯ ಮಾಡಿದೆ.
ಟ್ರಸ್ಟ್ ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಪ್ರಧಾನ ಕಾರ್ಯದರ್ಶಿ ಸಿ.ಪಿ.ಈರೇಶಗೌಡ, ವಕೀಲ ಎಂ.ನಾಗಪ್ಪ, ಗಂಗಾಧರಗೌಡ ಹೊಳೆಮರೂರು ಮುಂತಾದ ಸದಸ್ಯರು ಹಾಗೂ ಪರಿಸರಾಸಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post