ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವ ದೇಶದ ಪ್ರತಿಯೊಬ್ಬ ನಾಗರೀಕರನ್ನು ಸರ್ಕಾರಗಳು ಕಾರ್ಪೋರೇಟ್ ಸಂಸ್ಥೆಗಳ ಗುಲಾಮರನ್ನಾಗಿಸಲು ಹೊರಟಿರುವುದು ಖಂಡನೀಯ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಜಪ್ಪ ಮಾಸ್ತರ್ ಆರೋಪ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾ.20ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರೈತ ಮಹಾ ಪಂಚಾಯತ್ ಸಮಾವೇಶದ ಅಂಗವಾಗಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಅನೇಕ ಸಂಸ್ಥೆಗಳನ್ನು ಈಗಾಗಲೇ ಖಾಸಗೀಕರಣದ ಹೆಸರಿನಲ್ಲಿ ನೌಕರರನ್ನು ಬೀದಿಪಾಲು ಮಾಡಲಾಗಿದೆ. ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿರುವುದು ಬಡವರು-ಕೂಲಿ ಕಾರ್ಮಿಕರು ಸಂಕಷ್ಟದಲ್ಲಿ ಬದುಕು ಸಾಗಿಸುವಂತಾಗಿದೆ. ಜನರ ಹಸಿವನ್ನು ಕಾಪೋರೇಟ್ ಸಂಸ್ಥೆಗಳಿಗೆ ಮಾರಾಟ ಮಾಡಲು ಹೊರಟಿರುವುದು ದುರ್ಧೈವದ ಸಂಗತಿಯಾಗಿದೆ. ಈಗಾಗಲೇ ರೈತರ ಬೆಳೆಗಳನ್ನು ದಾಸ್ತಾನು ಮಾಡಲು ಬೃಹತ್ ಗೋದಾಮುಗಳ ನಿರ್ಮಾಣವು ಖಾಸಗಿ ವ್ಯಕ್ತಿಗಳಿಂದ ನಡೆಯುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಆಹಾರ ಭದ್ರತೆಯ ಸಮಸ್ಯೆಯೂ ತಲೆ ದೋರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿದ್ಯುತ್ ಖಾಸಗೀಕರಣಗೊಳಿಸುವ ಯತ್ನವೂ ನಡೆಯುತ್ತಿದ್ದು, ಈಗ ಬೆಳೆಗಳ ರಕ್ಷಣೆಗೆ ಉಚಿತವಾಗಿ ಬಳಕೆಯಾಗುತ್ತಿದ್ದ ವಿದ್ಯುತ್‌ಗೂ ಮೀಟರ್ ಫಿಕ್ಸ್ ಮಾಡುವ ದಿನಗಳು ಸಮೀಪದಲ್ಲಿವೆ. ಈಗಾಗಲೇ ದೂರ ಸಂಪರ್ಕ ಇಲಾಖೆಯಂತಹ ಅನೇಕ ಸಂಸ್ಥೆಗಳು ಖಾಸಗಿಯವರಿಗೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಕೃಷಿ ಭೂಮಿಯೂ ಸಹ ಕಾರ್ಪೋರೇಟ್ ಸಂಸ್ಥೆಗಳ ವಶವಾಗುವುದು ಖಚಿತ ಎಂದು ಆತಂಕ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ಸುಮಾರು 106 ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದರೆ, ಕೇಂದ್ರ ಸರ್ಕಾರ ಚಳುವಳಿಯನ್ನು ಹತ್ತಿಕ್ಕುವ ಯತ್ನ ನಡೆಸುತ್ತಿದೆಯೇ ವಿನಃ, ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದ್ದು, ಕಾರ್ಪೋರೇಟ್ ಸಂಸ್ಥೆಗಳ ಕೈಗೊಂಬೆಯಾಗಿ ಕೇಂದ್ರವು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಉತ್ತರ ಭಾರತಕ್ಕೆ ಸೀಮಿತವಾಗಿದೆ ಎನ್ನುತ್ತಿದ್ದ ಹೋರಾಟ ಇದೀಗ ದಕ್ಷಿಣ ಭಾರತಕ್ಕೂ ವ್ಯಾಪಿಸಿದ್ದು, ಮೊದಲ ಬಾರಿಗೆ ಶಿವಮೊಗ್ಗದಿಂದ ರೈತ ಮಹಾಪಂಚಾಯತ್ ಸಮಾವೇಶ ಆರಂಭವಾಗಲಿದೆ. ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ನಡೆಯಲಿರುವ ಸಮಾವೇಶಕ್ಕೆ ರಾಷ್ಟ್ರೀಯ ರೈತ ಮುಖಂಡರಾದ ರಾಕೇಶ್ ಟಿಕಾಯತ್, ಡಾ. ದರ್ಶನ್ ಪಾಲ್, ಯದುವೀರ್ ಸಿಂಗ್ ಸೇರಿದಂತೆ ಅನೇಕ ರಾಜ್ಯ ಮತ್ತು ಜಿಲ್ಲಾ ಮಟ್ಟದ ರೈತ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಸಮಾವೇಶಕ್ಕೆ ತಾಲ್ಲೂಕಿನ ರೈತರು ಜಾತ್ಯಾತೀತವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಡಿಎಸ್‌ಎಸ್ ತಾಲ್ಲೂಕು ಸಂಚಾಲಕ ಶಿವಾಜಿ ಕೋಡಿಕೊಪ್ಪ, ಜೆಐಎಚ್ ತಾಲ್ಲೂಕು ಸಂಚಾಲಕ ಎಂ. ಬಷೀರ್ ಆಹ್ಮದ್, ಡಬ್ಲ್ಯುಪಿಐ ತಾಲ್ಲೂಕು ಅಧ್ಯಕ್ಷ ಶಾಬುದ್ಧೀನ್, ಮೂವ್‌ಮೆಂಟ್ ಫಾರ್ ಜಸ್ಟೀಸ್ ತಾಲ್ಲೂಕು ಅಧ್ಯಕ್ಷ ಸಲೀಂ ಆಹ್ಮದ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಶೇಖರಮ್ಮ, ಆರ್. ಅಬ್ದುಲ್ ರಶೀದ್, ಚಂದ್ರಪ್ಪ ಸೇರಿದಂತೆ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post