ಕಲ್ಪ ಮೀಡಿಯಾ ಹೌಸ್ | ಸೊರಬ |
ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಲು ಹಾಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಗ್ರಾಮಪಂಚಾಯತಿ ಅಧ್ಯಕ್ಷ ಕೇಶವ ಹೇಳಿದರು.
ತಾಲೂಕಿನ ಕುಪ್ಪಗಡ್ಡೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸಮೂಹ ಸಂಪನ್ಮೂಲ ಕೇಂದ್ರ ಸೊರಬ, ಗ್ರಾಮ ಪಂಚಾಯತಿ ಕುಪ್ಪಗಡ್ಡೆ ಸಹಯೋಗದಲ್ಲಿ ಹಮ್ಮಿಕೊಂಡ ಪ್ರಸಕ್ತ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಯ ಅನೇಕ ಮಕ್ಕಳು ಪ್ರತಿಭಾವಂತರಿದ್ದಾರೆ. ಅವರಿಗೆ ಇಂತಹ ವೇದಿಕೆಗಳ ಅಗತ್ಯವಿದ್ದು, ಸರ್ಕಾರ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಒಳ್ಳೆಯ ಕಾರ್ಯವಾಗಿದೆ. ಪ್ರತಿಯೊಬ್ಬ ಮಕ್ಕಳಲ್ಲಿಯೂ ಕೆಲವು ವಿಶೇಷ ಪ್ರತಿಭೆಗಳು ಇರುತ್ತವೆ ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಶಿಕ್ಷಕರು ಮತ್ತು ಪೋಷಕರು ಮಾಡಬೇಕು. ವಿದ್ಯಾರ್ಥಿಗಳು ಈ ವೇದಿಕೆಯನ್ನು ಬಳಸಿಕೊಂಡು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಆಯ್ಕೆ ಆಗುವಂತೆ ಆಸಕ್ತಿಯಿಂದ ಭಾಗವಹಿಸಬೇಕು.
– ಎಲ್.ಜಿ. ರಾಜಶೇಖರ್, ಅಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್, ಕುಪ್ಪಗಡ್ಡೆ.
ಮಕ್ಕಳು ಪಠ್ಯ ಜೊತೆಗೆ ಸಹಪಠ್ಯಗಳಲ್ಲಿ ಆಸಕ್ತಿಯಿಂದ ಭಾಗವಹಿಸಬೇಕು. ಅಭಿನಯ, ಸಂಗೀತ, ನಾಟಕ, ಮಿಮಿಕ್ರಿ ಸೇರಿದಂತೆ ತಮ್ಮ ಎಲ್ಲ ಕಲೆ ಪ್ರತಿಭೆ ಪ್ರದರ್ಶಿಸಲು ಪ್ರತಿಭಾ ಕಾರಂಜಿಯಲ್ಲಿ ಅವಕಾಶವಿದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಮಕ್ಕಳು ಉತ್ಸಾಹದಿಂದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಬೇಕು, ಶಿಕ್ಷಕರು ಹಾಗೂ ಆಯೋಜಕರು ನಿಸ್ಪಕ್ಷಪಾತವಾಗಿ ವಿಜೇತರನ್ನು ಆಯ್ಕೆಮಾಡಿ, ಪ್ರೋತ್ಸಾಹಿಸಬೇಕು ಎಂದರು.
Also read: ಶ್ರೀ ವಿಜಯ ದಾಸರ ಆರಾಧನೆ | ಮಾಧ್ವ ಮಹಾ ಮಂಡಳಿ ವತಿಯಿಂದ ನಗರ ಸಂಕೀರ್ತನೆ
ಬಿಆರ್ ಪಿ ರಾಘವೇಂದ್ರ ಮಾತನಾಡಿ, ಜಗತ್ತಿನಲ್ಲಿ ಅತಿ ಶ್ರೇಷ್ಠವಾದ ವಸ್ತು ಶಿಕ್ಷಣವಾಗಿದೆ. ಶಿಕ್ಷಣವೆಂದರೆ ಕೇವಲ ಅಂಕಗಳಿಕೆ ಮಾತ್ರವಾಗಿರದೇ ಮಕ್ಕಳ ಸರ್ವಾಂಗೀಣ ಪ್ರಗತಿಯಾಗಿದೆ. ಆದ್ದರಿಂದ ಇಲಾಖೆ ಇಂಥಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ವಿದ್ಯಾರ್ಥಿಗಳು ಕನಕದಾಸ, ವೀರರಾಣಿ ಕೆಳದಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಕ್ಕಮಹಾದೇವಿ ಸೇರಿದಂತೆ ಅನೇಕರ ಛದ್ಮವೇಷ ಧರಿಸಿ ಸಾರ್ವಜನಿಕರ ಗಮನ ಸೆಳೆದರು. ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ಕುಪ್ಪಗಡ್ಡೆ ಕ್ಲಸ್ಟರ್ ನ 14 ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತ ಮಕ್ಕಳಿಗೆ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಪ್ರಾಸ್ತಾವಿಕವಾಗಿ ಸಿ ಆರ್ ಪಿ ಮಧು ಮಾತನಾಡಿದರು. ಎಸ್ ಡಿಎಂಸಿ ಅಧ್ಯಕ್ಷ ಎಚ್.ಡಿ. ಮಾಲತೇಶ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಮಮತಾ ರೇವಣಪ್ಪ, ಬಸವರಾಜ, ವಿದ್ಯಾಗುರುರಾಜ, ಮೋಹನ್ ಕುಮಾರ, ನೂರ್ ಅಹಮ್ಮದ್. ಶಿಕ್ಷಕರಾದ ಅಣ್ಣಪ್ಪ, ಸವಿತಾ ,ರಜಿನ, ಜಯಮಾಲ,ಪಾರ್ವತಿ,ದಿವ್ಯ,ಅಕ್ಷಿತ, ಎಸ್ ಡಿ ಎಂ ಸಿ ಸದಸ್ಯರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಬಿ.ಎಲ್. ಜ್ಯೋತಿ, ಸ್ವಾಗತಿಸಿದರು. ಶಿಕ್ಷಕ ಶಿವಕುಮಾರ್ ವಂದಿಸಿದರು. ಮಂಗಳ ಹೆಗಡೆ ನಿರೂಪಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post