ಕಲ್ಪ ಮೀಡಿಯಾ ಹೌಸ್ | ಸೊರಬ |
ಸಹಕಾರ ಸಂಘಗಳ ಬೆಳವಣಿಗೆಯಲ್ಲಿ ಷೇರುದಾರರು ಮತ್ತು ಸದಸ್ಯರ ಪಾತ್ರ ಮಹತ್ವದ್ದಾಗಿದ್ದು, ಶ್ರೀ ರಂಗನಾಥ ವಿವಿಧೋದ್ದೇಶ ಸಹಕಾರ ಸಂಘವು ಶತಮಾನವನ್ನು ಪೂರೈಸಿ ಉತ್ತಮ ಸೇವೆ ನೀಡುತ್ತಿದೆ ಎಂದು ಸಂಘದ ಅಧ್ಯಕ್ಷ ಬಂದಗಿ ಬಸವರಾಜ ಶೇಟ್ ಹೇಳಿದರು.
ಶನಿವಾರ ಪಟ್ಟಣದ ಶ್ರೀ ರಂಗನಾಥ ವಿವಿಧೋದ್ದೇಶ ಸಹಕಾರ ಸಂಘದ ಆವರಣದಲ್ಲಿ ಕರೆದಿದ್ದ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದಿಂದ ನಿಯಂತ್ರಿತ ಮತ್ತು ಅನಿಯಂತ್ರಿತ ಆಹಾರ ಧಾನ್ಯಗಳನ್ನು ಮತ್ತು ಇತರೆ ನಿತ್ಯೋಪಯೋಗಿ ವಸ್ತುಗಳನ್ನು ಮಾರಾಟ ಮಾಡಿದ್ದರಿಂದ 3.25 ಲಕ್ಷ ರೂ., ಲಾಭಗಳಿಸಿದೆ. ಸಂಘಕ್ಕೆ ವಿನಿಯೋಗಗಳು ಮತ್ತು ಸಾಲಗಳ ಮೇಲಿನ ಬಡ್ಡಿಯಿಂದ ಮತ್ತು ಇತರೆ ಮೂಲಗಳಿಂದ 5.96 ಲಕ್ಷ ರೂ., ಜಮಾ ಬಂದಿದ್ದು, ಸಿಬ್ಬಂದಿ ವೆಚ್ಚ ಮತ್ತು ಆಡಳಿತಾತ್ಮಕ ವೆಚ್ಚಗಳನ್ನು ಹೋಗಲಾಡಿಸಿ 1.29 ಲಕ್ಷ ರೂ., ನಿವ್ವಳ ಲಾಭಗಳಿಕೆಯಾಗಿದೆ. ಜೊತೆಗೆ ನೂತನ ವಾಣಿಜ್ಯ ಕಟ್ಟಡದಿಂದಲೂ ಸಂಘಕ್ಕೆ ಬಾಡಿಗೆ ರೂಪದಲ್ಲಿ ಮಾಸಿಕ 45 ಸಾವಿರ ರೂ., ಜಮಾವಾಗುತ್ತಿದೆ. ಸಂಘದಲ್ಲಿ 345 ಪೂರ್ಣ ಷೇರುದಾರು ಹಾಗೂ 70 ಅಪೂರ್ಣ ಷೇರುದಾರರಿದ್ದಾರೆ ಎಂದು ಮಾಹಿತಿ ನೀಡಿದರು.
Also read: ಮೋದಿಯವರ ‘ನನ್ನ ಮಣ್ಣು, ನನ್ನ ದೇಶ’ ಅಭಿಯಾನದಡಿ ‘ಅಮೃತ ಕಲಶ ಯಾತ್ರೆ’ಗೆ ಅಮಿತ್ ಶಾ ಚಾಲನೆ
ಸಂಘದ ಗೋದಾಮು ಶಿಥಿಲವ್ಯವಸ್ಥೆಯಲ್ಲಿದ್ದು, ನೂತನ ಕಟ್ಟಡ ನಿರ್ಮಾಣ ಮಾಡಬೇಕಿದೆ. ಶತಮಾನ ಕಂಡಿರುವ ಏಕೈಕ ಸಂಘವಾಗಿದ್ದು, ಈ ಹಿಂದಿನ ಸಾಲಿನ ಲಾಭ-ನಷ್ಟಗಳನ್ನು ಪರಿಶೀಲಿಸಿದಾಗ ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿಪಥದಲ್ಲಿ ಸಾಗುತ್ತಿದೆ. ಇದಕ್ಕೆ ಸಂಘದ ಸದಸ್ಯರ ಸಹಕಾರ ಸಾಕಷ್ಟಿದೆ. ಮುಂದಿನ ದಿನಗಳಲ್ಲಿಯೂ ಸಹ ಕೆಲಸ ಕಾರ್ಯಗಳು ಸುಗಮವಾಗಿ ನಡೆದುಕೊಂಡು ಹೋಗಲು ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದರು.
ಸಭೆಯಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ವೈದ್ಯ ಡಾ. ಎಂ.ಕೆ. ಭಟ್, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭು ಕೆ. ಸಾಹುಕಾರ್, ಆಯುಷ್ ವೈದ್ಯಾಧಿಕಾರಿ ಡಾ.ಎಂ.ಕೆ. ಮಹೇಶ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು.
ಸಂಘದ ಆಂತರಿಕ ಸಹಾಯಕ ಕೆ. ರಾಜಶೇಖರಪ್ಪ ವಾರ್ಷಿಕ ವರದಿ ವಾಚಿಸಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮಹೇಶ್ ಕಾಳೆ, ನಿರ್ದೇಶಕರಾದ ದತ್ತಾತ್ರೇಯಮೂರ್ತಿ ಪುರಾಣಿಕ್, ಸಿ. ರಾಜಶೇಖರ, ಮಧುರಾಯ ಜಿ. ಶೇಟ್, ಜೆ.ಎಸ್. ನಾಗರಾಜ ಜೈನ್, ಡಿ.ಎಸ್. ಶಂಕರ್ ಶೇಟ್, ಇ.ಎಚ್. ಮಂಜುನಾಥ್, ಕೆ.ಪಿ. ಶ್ರೀಧರ್ ನೆಮ್ಮದಿ, ಎ.ವಿ. ರೇಣುಕಾ ಮಾರುತಿ, ಸಾವಿತ್ರಮ್ಮ, ಕಾರ್ಯದರ್ಶಿ ಆರ್. ರವಿಕುಮಾರ್, ಸಿಬ್ಬಂದಿ ಶಿವಕುಮಾರ್ ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post