ಕಲ್ಪ ಮೀಡಿಯಾ ಹೌಸ್
ಸೊರಬ: ಕೊರೋನ ಪಾಸಿಟಿವ್ ಪ್ರಕರಣಗಳು ಹೆಚ್ಚು ಕಂಡು ಬಂದ ತಾಲ್ಲೂಕಿನ ಆನವಟ್ಟಿ ಪಟ್ಟಣವನ್ನು ಗುರುವಾರ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಯಿತು.
ಪಟ್ಟಣದಲ್ಲಿ 151 ಸಕ್ರೀಯ ಕೊರೋನ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, 15 ಜನ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ. ಒಂದೇ ಬಡಾವಣೆ, ಒಂದೇ ಕುಟುಂಬ ಅಥವಾ ನೆರೆಹೊರೆಯದಲ್ಲಿ 5 ಕ್ಕಿಂತ ಹೆಚ್ಚು ಜನರಲ್ಲಿ ಕೊರೋನ ಸೋಂಕು ಕಾಣಿಸಿಕೊಂಡ ಬಡಾವಣೆಗಳನ್ನು ಮೈಕ್ರೋ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿ, ಸಾರ್ವಜನಿಕರ ಪ್ರವೇಶ ಮತ್ತು ಸಂಚಾರವನ್ನು ನಿಷೇಧಿಸಲಾಗಿದೆ.
ಹೆಚ್ಚು ಕೊರೋನ ಸೋಂಕು ಕಾಣಿಸಿಕೊಂಡ ದೇವಸ್ಥಾನದ ಹಕ್ಕಲು, ಸಂತೆ ಮೈದಾನ, ನೆಹರೂ ನಗರ, ಜೆ.ಸಿ. ಬಡಾವಣೆ, ಬ್ರಾಹ್ಮಣ ಬೀದಿ, ತಿಮ್ಮಾಪುರ ಬಡಾವಣೆಗಳು ಮೈಕ್ರೋ ಕಂಟೈನ್ಮೆಂಟ್ ಝೋನ್ ಪ್ರದೇಶಗಳಾಗಿದ್ದು, ಈ ಪ್ರದೇಶಗಳಲ್ಲಿ ಮತ್ತು ಜನ ಹೆಚ್ಚು ಸೇರುವ ಪ್ರದೇಶಗಳಲ್ಲಿ ಪಟ್ಟಣ ಪಂಚಾಯ್ತಿ ವತಿಯಿಂದ ಸ್ಯಾನಿಟೈಸ್ ಮಾಡಲಾಯಿತು.
ಗುರುವಾರದಿಂದ ಮುಂದಿನ ಐದು ದಿನಗಳವರೆಗೆ ಕಠಿಣ ನಿರ್ಬಂಧ ಜಾರಿಯಾಗಿದ್ದು, ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಧಿಕೃತವಾದ ಡೈರಿಗಳಲ್ಲಿ ಹಾಲು ಮಾರಲು ಸಂಜೆ 6 ರವರೆಗೆ ಅವಕಾಶವಿದೆ. ಬೆಳಗ್ಗೆ 10ರವರೆಗೆ ತರಕಾರಿಗಳನ್ನು ತಳ್ಳುವ ಗಾಡಿ ಅಥವಾ ಹೊತ್ತು ಮಾರಲು ಅವಕಾಶ ನೀಡಲಾಗಿದೆ. ತುರ್ತು ಅಗತ್ಯ ಸೇವೆಯಾದ ಔಷಧದ ಅಂಗಡಿಗಳಿಗೆ ರಾತ್ರಿ 10 ರವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಪೊಲೀಸ್ ಇಲಾಖೆಯಿಂದ ಅನಗತ್ಯ ತಿರುಗುವವರಿಗೂ ಸಹ ಕಡಿವಾಣ ಹಾಕಲಾಗಿದೆ.
ಕಂಟೈನ್ಮೆಂಟ್ ಝೋನ್ ನಲ್ಲಿರುವ ನಿವಾಸಿಗಳು ಅಗತ್ಯ ವಸ್ತುಗಳು ಬೇಕಿದ್ದರೆ, ದೂರವಾಣಿ ಸಂಖ್ಯೆ 08184-267799 ಗೆ ಕರೆ ಮಾಡಬಹುದಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಶಿವಾನಂದ ಪಿ. ರಾಣೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಆನವಟ್ಟಿ ಪಿಎಸ್ಐ ಪ್ರವೀಣ್ ಕುಮಾರ್ ವಾಲೀಕರ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಜಿ. ರವಿಕುಮಾರ್ ಸೇರಿದಂತೆ ಇತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post