ಕಲ್ಪ ಮೀಡಿಯಾ ಹೌಸ್ | ಸೊರಬ |
ವರ್ಷದ ಆಶ್ವೀಜ ಮಾಸದ ಹುಣ್ಣಿಮೆಯಂದು ನಡೆಯುವ ಭೂಮಿ ಹುಣ್ಣಿಮೆ ಅಥವಾ ಸೀಗೆ ಹುಣ್ಣಿಮೆ ಚೊಚ್ಚಲ ಗರ್ಭಿಣಿಗೆ ಬಯಕೆ ತೀರಿಸುವ ಸಾಂಕೇತಿಕ ಆಚರಣೆಯಾಗಿದ್ದು, ಕೃಷಿ ಕುಟುಂಬಗಳು ಇಂದಿಗೂ ಇಂತಹ ಬಯಕೆ ತೀರಿಸುವ ಆಚರಣೆಗಳಿಂದ ಹಿಂದೆ ಸರಿದಿಲ್ಲ ಎಂಬುದಕ್ಕೆ ಭಾನುವಾರ ಭೂಮಣ್ಣಿ ಹಬ್ಬ ತಾಲ್ಲೂಕಿನ ಎಲ್ಲೆಡೆ ಸಂಭ್ರಮ ಸಡಗರದಿಂದ ಜರುಗಿದ್ದು ಸಾಕ್ಷಿಯಾಗಿದೆ.
ಮಲೆನಾಡ ಭಾಗದಲ್ಲಿ ದೀವರು ಅಥವಾ ಒಕ್ಕಲಿಗ ಸಮುದಾಯದವರು ಇರುವೆಡೆ ಭೂಮಿ ಹುಣ್ಣಿಮೆ ವಿಶೇಷವಾಗಿರುತ್ತದೆ. ಗರ್ಭಿಣಿಯ ಬಯಕೆ ತೀರಿಸುವ ತಿನಿಸು ತುಂಬಲು ಅಗತ್ಯವಿರುವ ಭೂಮಣ್ಣಿ ಬುಟ್ಟಿಗಳ ತಯಾರಿ ಬಳಿಕ ಹಬ್ಬದ ಹಿಂದಿನ ದಿನ ನಡುರಾತ್ರಿ ಅಥವಾ ಬೆಳಗಿನ ಮೊದಲ ಜಾವದಲ್ಲೆ ಎದ್ದು ಬಯಕೆ ತೀರಿಸುವ ಆಹಾರ ಅಥವಾ ಚರಗು ಸಿದ್ಧಗೊಳಿಸಿ, ಸೂರ್ಯೋದಯಕ್ಕೂ ಮೊದಲು, ಕೆಲವರು ಸೂರ್ಯೋದಯದ ಬಳಿಕ ತಮ್ಮ ಕೃಷಿ ಭೂಮಿಗೆ ಚರಗು ಅಥವಾ ಎಡೆ ಅರ್ಪಿಸುವ ಕಾಯಕ ಇಂದಿಗೂ ಹಸಿರಾಗಿಯೆ ಇದೆ.
ಗ್ರಾಮಾಂತರ ಪ್ರದೇಶದಲ್ಲಿ ಸಿಗುವ, ತಿನ್ನಲು ಯೋಗ್ಯವಾದ ಬಾಳೆಕಾಯಿ, ಬಸಳೆ ಸೊಪ್ಪು ಹೊರತುಪಡಿಸಿ ಇನ್ನುಳಿದ ಎಲ್ಲ ರೀತಿ ಸೊಪ್ಪು, ತರಕಾರಿ ಬೇಯಿಸಿ ಭೂಮಿ ತಾಯಿಗೆ ಅರ್ಪಿಸುವ ಪದ್ಧತಿ ಬೆಳೆಸಿಕೊಂಡು ಬಂದಿದ್ದು, ಅಮಟೆಕಾಯಿ, ಸಿಹಿ ಕುಂಬಳ, ಹಾಲು ಕುಂಬಳ, ಸೌತೆ ಕಾಯಿ, ಕುಂಬಳಕಾಯಿಗಳನ್ನು ತೀರಾ ಅಗತ್ಯವಾಗಿ ಬಳಸುತ್ತಾರೆ. ಚರಗನ್ನು ಇಡಕಲು ಮುಂದಿಟ್ಟು ಪೂಜಿಸಿ ಬಳಿಕ ಜಮೀನಿಗೆ ಭೂಮಣ್ಣಿ ಬುಟ್ಟಿಯಲ್ಲಿ ತುಂಬಿ ಹೊಲ, ಗದ್ದೆ, ತೋಟಗಳಿಗೆ ತೆರಳುತ್ತಾರೆ. ಅಲ್ಲಿ ಬತ್ತದ ಎರಡು ಸಸಿಗಳನ್ನು ಒಂದಾಗಿ ಸೇರಿಸಿ ಕಡ್ಲಾಡಿ, ಮಡ್ಲಾಡಿ ಇಟ್ಟು ಹಸಿರು ಕಣ ಅಥವಾ ಸೀರೆ ಇರಿಸಿ ಪೂಜೆಸುತ್ತಾರೆ. ಒಬ್ಬ ಹೆಣ್ಣು ಮಗಳ ಸೀಮಂತದ ಆಚರಣೆ ಹೇಗೆ ನಡೆಯುತ್ತದೆಯೊ ಅದೇ ರೀತಿ ಇಲ್ಲಿಯೂ ನಡೆಸಲಾಗುತ್ತದೆ. ಬಳಿಕ ತಂದ ಚರಗಲ್ಲಿ ಎರಡು, ಮೂರು ಕಡೆ ಎಡೆ ಇಟ್ಟು ಕಾಗೆ ಅಥವಾ ಯಾವುದೇ ಪಕ್ಷಿ ಕರೆದು ಅವು ತಿಂದ ಬಳಿಕ ಭೂಮಿಗೆ ಹಚ್ಚಂಬ್ಲಿ, ಧಾರ ಹೀರೆ ಮುಚ್ಕಂಡ್ ಉಣ್ಣೆ ಭೂಮ್ಕ್ಯವ್ವ..ಹೋ..ಹೊ..ಹೊ..ಹೋ.. ಎನ್ನುತ್ತ ಚರಗು ಬೀರುತ್ತಾರೆ. ನಂತರ ಬೋಜನದ ಸಿದ್ಧತೆ ನಡೆಯುತ್ತದೆ. ಕಾಗೆ ಬಯಸಿ ತಿಂದಿದ್ದನ್ನು ತಮ್ಮ ಪಿತೃಗಳ ಬಯಕೆಯ ಆಹಾರ ಎಂದು ಬಗೆವ ಕೃಷಿಕರು ಕಡುಬನ್ನು ಜಮೀನಿನಲ್ಲಿ ಹುಗಿದಿಡುತ್ತಾರೆ. ಇದೇ ಕಡುಬನ್ನು ಬೆಳೆಯ ಕೊಯ್ಲಿನ ವೇಳೆ ಕುಡುಗೋಲು ಪೂಜೆಯ ಸಮಯದಲ್ಲಿ ತೆಗೆದು ಪ್ರಸಾಧವನ್ನಾಗಿ ಸ್ವೀಕರಿಸುವ ಪದ್ಧತಿಯೂ ಇದೆ. ಈ ಹೊತ್ತಿಗೆ ಕಡುಬು ಎಷ್ಟು ಹಾಳಾಗಿದೆಯೋ ಅಷ್ಟು ಬೆಳೆಯಲ್ಲಿ ಹುಲುಸು ಎಂದೆ ನಂಬುವ ಪದ್ಧತಿಯೂ ಇದೆ. ಭೋಜನಾ ನಂತರ ಹಂಗನೂಲು ಕೈಗೆ ಕಟ್ಟಿ ಗದ್ದೆ ಕೊಯ್ಲಿನ ವೇಳೆ ಹಂಗನೂಲು ಬಿಚ್ಚಿ ಪೂಜಿಸುವ ವಾಡಿಕೆಯೂ ಇದೆ. ಬಳಿಕ ತಮ್ಮ ಕೃಷಿ ಭೂಮಿಯಲ್ಲಿಯೇ ಅಂದಿನ ಬೋಜನ ಸವಿಯುವ ಕೃಷಿ ಕುಟುಂಬಗಳ ಅಂದಿನ ವಿಶೇಷ ಖಾದ್ಯ ಬಾಳೆ ಎಲೆ ಬಳಸಿ ಮಾಡುವ ಕೊಟ್ಟೆ ಕಡುಬು! ಉದ್ದು, ತೆಂಗಿನ ಕಾಯಿ, ಹಸಿಮೆಣಸು, ಅಕ್ಕಿ ಬಳಸಿದ ಕಾರದ ಮತ್ತು ಸಿಹಿ ಕುಂಬಳ, ಅಕ್ಕಿ ಬಳಸಿ ತಯಾರಿಸಿದ ಸಿಹಿ ಕಡುಬು ಅಂದು ತೀರಾ ಅಚ್ಚುಮೆಚ್ಚು. ಇದರೊಂದಿಗೆ ಹೋಳಿಗೆ, ಪಾಯಸ, ಕಜ್ಜಾಯ, ಬುತ್ತಿ, ವಿವಿಧ ತರಕಾರಿ ಬಳಸಿ ಮಾಡಿರುವ ಪಲ್ಯ, ಹಣ್ಣು ಮೆಣಸಿನ ಕಾಯಿ ಚಟ್ನಿ, ಮುಂತಾದವುಗಳ ಸ್ವಾಧಿಷ್ಟ, ಸತ್ವಭರಿತ ಅಡುಗೆ ಬಳಕೆಯಾಗುತ್ತದೆ.
Also read: ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಹಿನ್ನೆಲೆ ದಕ ಜಿಲ್ಲಾ ಬಿಜೆಪಿ ಸಂಭ್ರಮಾಚರಣೆ
ಅರೆ ಮಲೆನಾಡು ಪ್ರದೇಶಗಳಲ್ಲಿ ತುಸು ಭಿನ್ನ ಆಚರಣೆ ಕಂಡುಬರುತ್ತಿದ್ದು, ಭೂಮಿ ಹುಣ್ಣಿಮೆ ಬದಲಿಗೆ ಸೀಗೆ ಹುಣ್ಣಿಮೆ ಎನ್ನುತ್ತಾರೆ. ಐದು ಧಾನ್ಯದ ಸಸಿಗಳನ್ನು ಬೇರು ಸಹಿತ ಇರಿಸಿಕೊಂಡು ಅದರೊಂದಿಗೆ ಐದು ಕಲ್ಲುಗಳಿಗೆ ಸುಣ್ಣ ಹಚ್ಚಿ ಪಾಂಡವರೆಂದು ಪೂಜಿಸುತ್ತಾರೆ, ಇಲ್ಲೂ ಕೂಡ ಕಡಬು ಹುಗಿಯಲಾಗುತ್ತದೆ, ವಿವಿಧ ಧಾನ್ಯಗಳ ರೊಟ್ಟಿ ಬಳಸಲಾಗುತ್ತದೆ. ಹುರಸಲು ಬೀರುವಾಗ ಹುಲಿಗ್ಯಾ…ಹುಲಿಗ್ಯಾ ಎಂದು ಕೂಗುತ್ತ ಭೂಮಿಗೆ ಅರ್ಪಿಸಲಾಗುತ್ತದೆ. ಇನ್ನುಳಿದಂತೆ ಮಲೆನಾಡಿನ ಕೆಲ ಪದ್ಧತಿಗಳು ಕೂಡ ಬಳಕೆಯಾಗುತ್ತವೆ.
ಗಮನಿಸುವ ಸಂಗತಿ:
ಕೋರಿಯಾ ದೇಶದಲ್ಲಿ ಭೂಮಿಯ ಜೀವಾಣುಗಳನ್ನು ವೃದ್ಧಿ ಗೊಳಿಸಲು ಐಎಂಒ ಹೆಸರಿನ ಜೀವದ್ರಾವಣವನ್ನು ಬಳಸುತ್ತಾರೆ. ಈ ಜೀವದ್ರಾವಣ ಅಕ್ಕಿ ಮತ್ತು ಬೆಲ್ಲದಿಂದ ತಯಾರಾಗುತ್ತದೆ. ಈ ಭೂಮಿ ಹುಣ್ಣಿಮೆಯ ಚರಗು, ಭೂಮಿಯಲ್ಲಿ ಹುಗಿಯುವ ಕಡುಬು ಕೂಡ ಇಂತಹ ಜೀವಾಣುವನ್ನು ವೃದ್ಧಿಸಬಲ್ಲದೆ ಎಂಬುದು ಸಂಶೋಧನಾರ್ಹ ಸಂಗತಿ. ಹಾಗೂ ಮಳೆಗಾಲದ ಬಳಿಕ ಭೂಮಿಯಲ್ಲಿ ಕೃಷಿಗೆ ಪೂರಕವಾದ ಜೀವಾಣುಗಳು ಕೊರತೆಯಿರುತ್ತದೆ ಎಂಬುದನ್ನು ನೆನಪಿಸಿಕೊಳ್ಳಬೇಕಿದೆ.
ಶ್ರೀಪಾದ ಬಿಚ್ಚುಗತ್ತಿ, ಪರಿಸರ ಕಾಯಕರ್ತ
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post