ಕಲ್ಪ ಮೀಡಿಯಾ ಹೌಸ್ | ಸೊರಬ |
ರಥಗಳು ದೇವಾಸ್ಥಾನಗಳ ಅವಿಭಾಜ್ಯ ಅಂಗ. ಇಲ್ಲಿನ ರಂಗನಾಥಸ್ವಾಮಿ ದೇವರ ರಥ ಸುಮಾರು 150ವರ್ಷಕ್ಕೂ ಹಿಂದಿನ ರಥವಾಗಿತ್ತು. ರಥ ಶಿಥಿಲಗೊಂಡ ಹಿನ್ನೆಲೆಯಲ್ಲಿ ನೂತನ ರಥ ನಿರ್ಮಾಣಕ್ಕೆ ಮುಂದಾಗಿ ಇದೇ ತಿಂಗಳ 30ರಂದು ಅಧಿಕೃತವಾಗಿ ಲೋಕಾರ್ಪಣೆಯಾಗಲಿದೆ ಎಂದು ಪ್ರಧಾನ ಅರ್ಚಕ ವೇ.ವಿ.ನಾರಾಯಣಭಟ್ ತಿಳಿಸಿದರು.
ಲೋಕಾರ್ಪಣೆ ಆಗಲಿರುವ ರಥದ ದಾರ್ಮಿಕ ಸಮರ್ಪಣ ಕಾರ್ಯಕ್ರಮಗಳು ಆರಂಭವಾಗಿದ್ದು , ನೇತೃತ್ವ ವಹಿಸಿರುವ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಇದು ಕೇವಲ ಒಂದು ರಥವಲ್ಲ, ನಮ್ಮೂರಿನ ಅಸ್ಮಿತೆ ಹಾಗೂ ಸಾವಿರಾರು ಭಕ್ತರ ನಂಬಿಕೆಯ ಸಂಕೇತ. ಈ ಭವ್ಯ ರಥದ ಪ್ರತಿಯೊಂದು ಕೆತ್ತನೆಯಲ್ಲೂ ಶಿಲ್ಪಿಗಳ ಬೆವರು, ಭಕ್ತರ ಅಚಲವಾದ ನಂಬಿಕೆ ಅಡಗಿದೆ. ಮರದ ದಿಮ್ಮಿಗಳು ದೈವಿಕ ರೂಪ ಪಡೆದಿರುವ ಕಲಾಕೃತಿಗಳು ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ತೋರಿಸುತ್ತವೆ. ಹಗಲಿರುಳು ಶ್ರಮಿಸುತ್ತಿರುವ ಆ ಕಲಾಕಾರರಿಗೆ ನನ್ನ ನಮನಗಳು
-ಮಧು ಬಂಗಾರಪ್ಪ ಶಿಕ್ಷಣ ಸಚಿವರು.
ಸೊರಬದ ಇಹಾಸದಲ್ಲಿ ಇದೊಂದು ಸುವರ್ಣ ದಿನ. ಎಲ್ಲರ ಸಹಕಾರ ಮತ್ತು ಎಲ್ಲ ಸರ್ಕಾರಗಳ ನೆರವಿನಿಂದಾಗಿ ಶತಮಾನದಷ್ಟು ಪುರಾತನವಾದ ರಥೋತ್ಸವದ ಸಾಂಪ್ರದಾಯ ಮುಂದುವರಿಯುವಂತೆ ಆಗಿದೆ. ರಥದ ಲೋಕಾರ್ಪಣೆ ಒಂದು ಸುದಿನ. ಈ ಸಂದರ್ಭದಲ್ಲಿ ವಿದ್ವಾನ್ ನಾರಾಯಣ ಭಟ್ಟರ ಶ್ರಮವನ್ನು ಭಕ್ತರು ಮರೆಯುವಂತಿಲ್ಲ.
-ಎಚ್. ಗಣಪತಿ ರಥ ಸಮರ್ಪಣಾ ಸಮಿತಿ ಅಧ್ಯಕ್ಷ
ರಥದಲ್ಲಿ ಕುಳಿತು ಆನಂದ ಪಡೆಯುವುದರಿಂದ ರಥ ಎಂಬ ಹೆಸರು ಬಂದಿದೆ. ಶಬ್ದಕಲ್ಪದ್ರುಮ ಗ್ರಂಥದಲ್ಲಿ ರಮ್ಯತೇ ಅನೇಕ ಅತ್ರ ಇತಿ ರಥ ಎಂದು ಹೇಳಿದೆ. ಲೌಕಿಕವಾಗಿ ಬೇರೆ ಬೇರೆಯ ಉದ್ದೇಶಗಳಿಗೆ ಬಳಕೆಯಾಗುವ ರಥಗಳಿಗೆ ಬೇರೆ ಬೇರೆ ಹೆಸರುಗಳಿವೆ. ದೇವರ ಬಳಕೆಯ ರಥಗಳಿಗೆ ಮರುದ್ರಥ ಎನ್ನಲಾಗುತ್ತದೆ. ಇಂತಹ ದೇವರಥವನ್ನು ಶಿರಸಿಯ ಸಾಯಿ ಹ್ಯಾಂಡಿಕ್ರಾಫ್ಟ್ ಸಂಸ್ಥೆಯ ಶಿಲ್ಪಿ ಪುರುಷೋತ್ತಮ ಗುಡಿಗಾರ್ ನೇತೃತ್ವದಲ್ಲಿ ಆರಂಭಿಸಲಾಗಿತ್ತು. ಇದೀಗ ಶಾಸ್ತೋಕ್ತವಾಗಿ 36 ಅಡಿ ಎತ್ತರದ ಶ್ರೀ ಲಕ್ಷ್ಮೀರಂಗನಾಥ ಬ್ರಹ್ಮ ರಥವು ಈ ಹಿಂದೆ ಇದ್ದಂತಹ ಮಾದರಿಯಲ್ಲೇ ನಿರ್ಮಾಣವಾಗಿದೆ. 36 ಅಡಿ ಎತ್ತರ, 14X14 ಅಡಿ ವ್ಯಾಸವುಳ್ಳ ರಥಕ್ಕೆ ಐದು ಜಾತಿಯ ಮರಗಳನ್ನು ಬಳಸಲಾಗಿದೆ ಎಂದು ವಿವರಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















