ಕಲ್ಪ ಮೀಡಿಯಾ ಹೌಸ್ | ಸೊರಬ |
ಶಿವಮೊಗ್ಗ ಜಿಲ್ಲೆಯ ಸೊರಬ #Soraba ತಾಲೂಕಿನ ಉದ್ರಿ ಗ್ರಾಮದಲ್ಲಿ ಮಾದರಿ ವೈದ್ಯರೊಬ್ಬರ ಆಸಕ್ತಿಯ ಪರಿಣಾಮ ರಾಜ್ಯಕ್ಕೇ ಮಾದರಿಯಾಗುವ ಕಾರ್ಯವೊಂದು ತಲೆಎತ್ತಿ ನಿಂತಿದ್ದು, ಇಡಿಯ ಮಲೆನಾಡೇ ಹೆಮ್ಮೆ ಪಡುವಂತಹದ್ದಾಗಿದೆ.
ಹೌದು… ಅಶ್ವಗಂಧ, ಶತಾವರಿ, ಶಿಗ್ರು, ಕಾಮಕಸ್ತೂರಿ, ಪಾರಿಜಾತ, ಶಮಿ, ಸೋಮವಾರ ಬೇರು ಹೀಗೆ ಸುಮಾರು 75ಕ್ಕೂ ಅಧಿಕ ಔಷಧ ಸಸ್ಯಗಳನ್ನು ತಾಲೂಕಿನ ಉದ್ರಿ ಗ್ರಾಮದ ಸರ್ಕಾರಿ ಆಯುರ್ವೇದ #Ayurveda ಚಿಕಿತ್ಸಾಲಯದ ಆವರಣದಲ್ಲಿ ಸಸಿಗಳ ನೆಟ್ಟಿರುವುದು ಮಾತ್ರವಲ್ಲದೇ ಬೆಳೆಸುವ ಪ್ರಕ್ರಿಯೆಯೂ ನಡೆಯುತ್ತಿದೆ. ಉದ್ಯಾನವು ಆಸ್ಪತ್ರೆಗೆ ಬರುವ ರೋಗಿಗಳಿಗೆ ಮನೋಲ್ಲಾಸ ನೀಡುತ್ತಿದೆ.
ದೊರೆತಿರುವ ದಾಖಲೆಗಳ ಪ್ರಕಾರ 1930ರಲ್ಲಿ ಆರಂಭವಾಗಿರುವ ಆಸ್ಪತ್ರೆಯು ತಾಲೂಕಿನಲ್ಲಿ ಉದ್ರಿ #Udri ಆಸ್ಪತ್ರೆ ಎಂದೇ ಖ್ಯಾತಿಯೂ ಇದೆ. ಇಲ್ಲಿ ಸೇವೆ ಸಲ್ಲಿಸಿ ಹೋದ ವೈದ್ಯರುಗಳು ಸಹ ಉತ್ತಮ ಸೇವೆ ನೀಡುವ ಮೂಲಕ ಉದ್ರಿ ಡಾಕ್ಟರ್ ಎಂದೇ ಗುರುತಿಸಿಕೊಂಡಿದ್ದಾರೆ.
ಪ್ರಸ್ತುತ ಇಲ್ಲಿನ ಆಸ್ಪತ್ರೆಯಲ್ಲಿ ಆಯುಷ್ #Ayush ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಎಂ.ಕೆ. ಮಹೇಶ್ ಅವರು ಸುತ್ತಲಿನ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಜೊತೆಗೆ ಮುತುವರ್ಜಿ ವಹಿಸಿದ್ದರಿಂದ ಆಸ್ಪತ್ರೆಯ ಆವರಣದಲ್ಲೊಂದು ಔಷಧ ಸಸ್ಯಗಳ ಲೋಕ ಎದ್ದು ನಿಂತಿದೆ.
ಕ್ಯಾನ್ಸರ್ #Cancer ಕಾಯಿಲೆಗೆ ಲಕ್ಷಣಫಲ, ಕೊಬ್ಬು ಮತ್ತು ಸಕ್ಕರೆ ಕಾಯಿಲೆಗೆ ಬೆಟ್ಟದ ನೆಲ್ಲಿ, ರೋಗ ನಿರೋಧಕ ಶಕ್ತಿಗೆ ಅಶ್ವಗಂಧ, ಪಚನ ಕ್ರಿಯೆಗೆ ವಿಷ್ಣುಕಾಂತಿ, ಜೀರ್ಣಕ್ರಿಯೆಗೆ ಧಾಲ್ಚಿನ್ನಿ, ಮೂಳೆ ಮುರಿತಕ್ಕೆ ನೀಡುವ ಅಸ್ತಿಶೃಂಖಲ, ಗರ್ಭಕೋಶ ಕಾಯಿಲೆಗೆ ಬಳಕೆಯಾಗುವ ಅಶೋಕ, ಕರಳು ಸಂಬಂಧಿ ಕಾಯಿಲೆಗೆ ಬಿಲ್ವ, ಹೊಟ್ಟೆ ನೋವಿಗೆ ಕಛೂರ, ಕಿಡ್ನಿ ಸ್ಟೋನ್‍ಗೆ ರಾಣಫಲ ಸೇರಿದಂತೆ ವಿವಿಧ ಔಷಧೀಯ ಗುಣಗಳುಳ್ಳ ಮರೀಚ, ಜಲಬ್ರಾಹ್ಮಿ, ಅಪಮಾರ್ಗ, ಅಮಲಕಿ, ಚಿತ್ರಕ, ಗುಡೂಚಿ, ದೂಪದ ಮರ, ಅಸ್ಥಿಶೃಂಖಲ, ದೊಡ್ಡಪತ್ರೆ, ದೂರ್ವ, ಪಿಪ್ಪಲಿ ಅಶೋಕ, ಮಧುನಾಶಿನಿ, ಪಾನ್ ಪತ್ರೆ, ವಚ ಹೀಗೆ ಸುಮಾರು 75ಕ್ಕೂ ಅಧಿಕ ಸಸಿಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿದೆ.
ಪ್ರತಿಯೊಂದು ಸಸಿಗೂ ವೈಜ್ಞಾನಿಕವಾಗಿ, ಆಯುರ್ವೇದದಲ್ಲಿ #Ayurveda ಬಳಕೆಯಲ್ಲಿರುವ ಮತ್ತು ಆಡು ಭಾಷೆಯಲ್ಲಿ ಬಳಕೆಯಲ್ಲಿ ಹೆಸರಿನ ನಾಮಫಲಕದ ಜೊತೆಗೆ ಉಪಯೋಗದ ಕುರಿತು ಕಿರು ಮಾಹಿತಿ ನಾಮಫಲಕ ಅಳವಡಿಸಿರುವುದು ವಿಶೇಷ. ಪ್ರತಿ ಸಸಿಗೂ ಸ್ಥಳೀಯರ ಸಹಕಾರದೊಂದಿಗೆ ಹನಿ ನೀರಾವರಿ ವ್ಯವಸ್ಥೆ ಸಹ ಕಲ್ಪಿಸಲಾಗಿದೆ.
ಉದ್ರಿ ಗ್ರಾಮದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಆವರಣದಲ್ಲಿ ಸ್ಥಳದ ಕೊರತೆಯ ನಡುವೆಯೂ ಗ್ರಾಮಸ್ಥರ ಮತ್ತು ಸ್ಥಳೀಯ ಗ್ರಾಪಂ ಸಹಕಾರದೊಂದಿಗೆ ಕಳೆದ ಮೂರು ವರ್ಷದಿಂದ ಔಷಧ ಸಸ್ಯಗಳ ಉದ್ಯಾನ ಮಾಡಲಾಗಿದೆ. ತಾವು ಸೇವೆ ಸಲ್ಲಿಸುವ ವೇಳೆಯಲ್ಲಿ ಗ್ರಾಮಸ್ಥರು ಸಹ ಉತ್ತಮ ಸಹಕಾರ ನೀಡುತ್ತಿದ್ದಾರೆ. ಗ್ರಾಮಸ್ಥರ ನೆರವಿನಿಂದ ಪರಿಸರ ದಿನ, ರಕ್ತದಾನ ಶಿಬಿರದಂತಹ ಅನೇಕ ಸಮಾಜಮುಖಿ ಕಾರ್ಯಗಳು ಸಹ ನಡೆದಿದೆ. ತಾಲೂಕು ಕೇಂದ್ರದಲ್ಲಿ 10 ಹಾಸಿಗೆಗಳ ಆಯುರ್ವೇದ ಆಸ್ಪತ್ರೆ ನಿರ್ಮಿಸಲು ಅನುಮೋದನೆಯ ಹಂತದಲ್ಲಿದ್ದು, ತಾಲೂಕು ಕೇಂದ್ರದ ಆಸ್ಪತ್ರೆಯ ಆವರಣದಲ್ಲಿಯೇ ಔಷಧ ವನ ಅಥವಾ ಉದ್ಯಾನ ಮಾಡುವ ಅಭಿಲಾಷೆ ಇದೆ.
– ಡಾ. ಎಂ.ಕೆ. ಮಹೇಶ್, ವೈದ್ಯಾಧಿಕಾರಿಗಳು, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಉದ್ರಿ
ಆಸ್ಪತ್ರೆಯ ಆವರಣದಲ್ಲಿ ಬೆಳೆದಿರುವ ಔಷಧೀಯ ಸಸ್ಯಗಳಿಂದ ಔಷಧವನ್ನು ತಯಾರಿಸುತ್ತಿಲ್ಲ. ಬದಲಿಗೆ ಮುಂದಿನ ಪೀಳಿಗೆಗೆ ಅಪರೂಪದ ಸಸ್ಯ ಪ್ರಭೇದಗಳನ್ನು ಪರಿಚಯಿಸಿ ಸಂರಕ್ಷಿಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಸ್ಥಳೀಯ ಗ್ರಾಮಸ್ಥರು ಹಾಗೂ ಯುವಕರು ಸಹ ಕೈಜೋಡಿಸಿದ್ದಾರೆ. ಸಸಿಗಳನ್ನು ಖುದ್ದು ವೈದ್ಯರೇ ಹಾಸನ, ಚಿಕ್ಕಮಗಳೂರು, ಶಿರಸಿ ಸೇರಿದಂತೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಭಾಗದಿಂದ ಆಯ್ದು ತಂದಿದ್ದಾರೆ.
ಸ್ಥಳಾವಕಾಶವಿದಿದ್ದರೆ ಔಷಧ ವನವನ್ನೇ ಮಾಡುವ ಹಂಬಲ ಇಲ್ಲಿನ ವೈದ್ಯರದ್ದು. ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವ ಮಂದಿಯೇ ಹೆಚ್ಚು, ಆದರೆ, ಇಲ್ಲಿನ ಸರ್ಕಾರಿ ಆಯುವೇದ ಚಿಕಿತ್ಸಾಲಯ ಸುತ್ತಲಿನ ಹತ್ತಾರು ಗ್ರಾಮಗಳ ಜನತೆಗೆ ವರದಾನವಾಗಿದೆ. ಆಸ್ಪತ್ರೆಯ ಆವರಣದಲ್ಲಿನ ಔಷಧ ಉದ್ಯಾನ ಆಸ್ಪತ್ರೆಯ ಪರಿಸರವನ್ನೇ ಬದಲಿಸಿದ್ದು, ರೋಗಿಗಳಲ್ಲಿ ಮನೋಸ್ತೈರ್ಯವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ.
ನರೇಗಾ ಸದ್ಭಳಕೆ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಕ್ರಿಯಾಯೋಜನೆ ತಯಾರಿಸಿ ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲಾಗಿದೆ. 109 ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ. ಅನುದಾನದ ಕೊರತೆಯ ನಡುವೆ ನರೇಗಾ ವರದಾನವಾಗಿದೆ. ನರೇಗಾ ಸೇರಿದಂತೆ ಸುಮಾರು 2ಲಕ್ಷ ರೂ., ವೆಚ್ಚದಲ್ಲಿ ಸುಂದರ ಉದ್ಯಾನ ನಿರ್ಮಾಣವಾಗಿದೆ.
ಉದ್ರಿ ಗ್ರಾಮದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯವು ತಾಲೂಕಿನಲ್ಲಿಯೇ ಮಾದರಿಯಾಗಿದ್ದು, ಕೇವಲ ಆಸ್ಪತ್ರೆಯಾಗಿರದೆ, ಔಷಧ ಸಸ್ಯಗಳ ಭಂಡಾರವನ್ನೇ ಹೊತ್ತು ನಿಂತಿರುವುದು ಗ್ರಾಮಸ್ಥರಿಗೂ ಸಹ ಹೆಮ್ಮೆಯ ವಿಷಯವಾಗಿದೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post