ಕಲ್ಪ ಮೀಡಿಯಾ ಹೌಸ್ | ಸೊರಬ |
ಸನಾತನ ಧರ್ಮದ ಹೂರಣವನ್ನು ಜಗತ್ತಿನ ಮುಂದೆ ತೆರೆದಿಟ್ಟು ಜಾಗತಿಕ ಮಟ್ಟದಲ್ಲಿ ಹಿಂದು ಧರ್ಮಕ್ಕೆ ಬೆಲೆ ತಂದು ಕೊಟ್ಟವರು ಸ್ವಾಮಿ ವಿವೇಕಾನಂದರಾಗಿದ್ದಾರೆ ಎಂದು ದಂತ ವೈದ್ಯ ಡಾ. ಜ್ಞಾನೇಶ್ ತಿಳಿಸಿದರು.
ಪಟ್ಟಣದ ಎಚ್.ಪಿ.ಆರ್. ನರ್ಸಿಂಗ್ ಕಾಲೇಜಿನಲ್ಲಿ ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್, ವಿಕಾಸ ಟ್ರಸ್ಟ್ ಶಿವಮೊಗ್ಗ ಇವರಿಂದ ವಾಲ್ಮೀಕಿ ಗ್ರಾಮಾಭಿವೃದ್ಧಿ ಟ್ರಸ್ಟ್ನ ಸಹಯೋಗದಲ್ಲಿ ನಡೆದ ವಿವೇಕ ಜಾಗೃತಿ ಯಾತ್ರೆಯ ಅಂಗವಾಗಿ ನಡೆದ ತಾಲೂಕು ಮಟ್ಟದ ರಾಷ್ಟ್ರಕವಿ ಕುವೆಂಪು ಕಂಡ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ವಿಷಯದ ತಾಲೂಕು ಮಟ್ಟದ ಭಾಷಣ, ಪ್ರಬಂಧ ಮತ್ತು ರಸ ಪ್ರಶ್ನೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಪಹಾಸ್ಯಕ್ಕೀಡಾಗುತ್ತಿದ್ದ ಹಿಂದೂ ಧರ್ಮಕ್ಕೆ ಮೆರಗನ್ನು ಕೊಟ್ಟವರು ಸ್ವಾಮಿ ವಿವೇಕಾನಂದರಾಗಿದ್ದಾರೆ ಇದರಲ್ಲಿಯ ಹೂರಣವನ್ನು ಜಗತ್ತಿಗೆ ಪೋಸರಿಸಿದವರು ಅವರು. ಕೆಳವರ್ಗಕ್ಕೆ ಸ್ಪೂರ್ತಿ ನೀಡಿ, ಮೇಲ್ವರ್ಗಕ್ಕೆ ಚಾಟಿ ಬೀಸಿ ಸನಾತನ ಸಂಸ್ಕೃತಿಯ ಉನ್ನತಿಕರಣಕ್ಕೆ ಅವರು ಪ್ರಯತ್ನಿಸಿದ್ದು ಅವರ ವಿಚಾರಧಾರೆ ಜಗತ್ತಿನ ಏಳಿಗೆಗೆ ಪೂರಕವಾಗಿದೆ ಎಂದರು.
ಅಸಮಾನತೆ ತುಂಬಿದ್ದ ಆ ಕಾಲದಲ್ಲಿಯೇ ಸಾಮಾನ್ಯ ವ್ಯಕ್ತಿಯ ಭಾಷಣಕ್ಕೆ ಜಗತ್ತೇ ತಲೆ ದೂಗಿರುವುದರ ಹಿಂದೆ ಅವರ ವಿಚಾರಧಾರೆ ಎಂತಹ ಪ್ರೇರಣಾಧಾರಿಯಾಗಿತ್ತು ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ವಿವೇಕಾನಂದರ ಭಾಷಣಗಳ ದಾಖಲೆಯ ರೂಪದಲ್ಲಿ ಸಂಗ್ರಹವಾಗಿದ್ದು ಅದನ್ನು ನಾವು ಒಮ್ಮೆ ಓದಬೇಕು. ನಾವು ಮಾಡುವ ಕೆಲಸದಲ್ಲಿಯೇ ನಿಷ್ಟೆ ತೋರುವುದೆ ಆಧ್ಯಾತ್ಮಿಕತೆ ಎಂದವರು ವಿವೇಕಾನಂದರಾಗಿದ್ದಾರೆ. ನಮ್ಮ ಘನ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸ ಯುವ ಜನತೆಯಾದ ನಮ್ಮೆಲ್ಲರಿಂದ ಆಗಬೇಕಾಗಿದ್ದು, ಎಲ್ಲಾ ಕೆಲಸಗಳಲ್ಲಿಯೂ ನಾವು ಮೊದಲಿಗರಾಗ ಬೇಕಾಗಿದೆ. ಅದಕ್ಕೆ ಸ್ಪೂರ್ತಿ ವಿವೇಕಾನಂದರು ಅವರು ಹೇಳಿದಂತೆ ಬಲಿಷ್ಠ ವ್ಯಕ್ತಿಗಳು ನಾವಾಗಬೇಕು ಎಂದರು.
ಸಮಾರಂಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಕೃಷ್ಣಾನಂದ ಮಾತನಾಡಿ, ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ಮೇಘಶ್ರೀ. ಕೆ. ಅನುಷಾ, ಶಿಕ್ಷಕ ದೀಪಕ್ ದೊಂಗಡೇಕರ್, ನಿವೃತ್ತ ಶಿಕ್ಷಕ ಚಂದ್ರಗುತ್ತಿಯ ಅಶೋಕ ಪಿ ನಾಯ್ಕ್ ಉಪಸ್ಥಿತರಿದ್ದರು.
ಎಚ್.ಪಿ.ಆರ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ದೀಪಾ ಸ್ವಾಗತಿಸಿದರು. ಮಹೇಶ ಗೋಖಲೆ ವಂದಿಸಿದರು. ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರಾದ ರಂಜಿತಾ ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post