ಕಲ್ಪ ಮೀಡಿಯಾ ಹೌಸ್ | ಸೊರಬ |
ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಪ್ರದೇಶ ಅತ್ಯಮೂಲ್ಯ ಜೀವವೈವಿದ್ಯತೆಗಳ ತಾಣವಾಗಿದೆ. ಪ್ರಪಂಚದಲ್ಲಿಯೇ ಅಪರೂಪವಾದ ಸಸ್ಯಪ್ರಬೇಧಗಳನ್ನು ಹೊಂದಿರುವುದು ಪಶ್ಚಿಮಘಟ್ಟ ಎಂದು ಆಂದ್ರಪ್ರದೇಶದ ರಾಜ್ಯ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಡಾ. ಬಿಎಂಕೆ ರೆಡ್ಡಿ ಹೇಳಿದರು.
ಅವರು ಸಾಗರ ಸುತ್ತಮುತ್ತ ಜೀವವೈವಿಧ್ಯ ಅಧ್ಯಯನ ಕೈಗೊಂಡು ಮಾದರಿ ತಾಪಂ ಜೀವವೈವಿಧ್ಯ ನಿರ್ವಹಣಾ ಸಮಿತಿಗಳಾಗಿರುವ ಸಾಗರ ಮತ್ತು ಸೊರಬ ಸಮಿತಿಯವರೊಂದಿಗೆ ಸೋಮವಾರ ಸಂಜೆ ಸಾಗರ ತಾಪಂ ಕಛೇರಿ ಸಭಾಂಗಣದಲ್ಲಿ ಮಾತನಾಡಿದರು.
ಇಲ್ಲಿ ಕೀಟ, ಪಕ್ಷಿ, ಸರಿಸೃಪಗಳೂ ಸೇರಿದಂತೆ ಪ್ರಾಣಿಪ್ರಪಂಚದ ವೈವಿದ್ಯವನ್ನೂ ಒಳಗೊಂಡಿದೆ. ಇವುಗಳಲ್ಲೆ ಎಷ್ಟೋ ಇಂದಿನ ಜೀವನ ಶೈಲಿಯಿಂದಾಗಿ ಅಳಿವಿನಂಚಿನಲ್ಲಿವೆ. ಇಲ್ಲಿನ ಅರಣ್ಯಗಳು, ಕಾಡು, ಗುಡ್ಡ ಬೆಟ್ಟಗಳು ಅನೇಕ ನದಿನದಗಳ ಉಗಮಸ್ಥಾನವೂ ಆಗಿದೆ. ಮಲೆನಾಡಿನಿಂದ ಹಿಡಿದು ಬೈಲು ಸೀಮಯ ವರೆಗಿನ ಜನರ ಕುಡಿಯುವ ನೀರಿನ ದಾಹ ನೀಗಿಸುವ, ಬೆಳೆಗಳಿಗೆ ನೀರುಣಿಸುವ ತಾಣವಾದ ಪಶ್ಚಿಮ ಘಟ್ಟವು ಇಂದು ತನ್ನ ಅನೇಕ ವೈವಿದ್ಯತೆಗಳನ್ನು ಕಳೆದುಕೊಳ್ಳುತ್ತಿರುವುದು ದುರಂತದ ಸಂಕೇತವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಮ್ಮ ಪರಂಪರಾಗತ ಔಷಧಿಗಳ ಮೂಲವಾದ ಸಸ್ಯಸಂಕುಲಗಳು ನಶಿಸಿಹೋಗುತ್ತಿವೆ. ಉಳಿದಿರುವ ಸಂಪತ್ತನ್ನಾದರೂ ಜತನದಿಂದ ಉಳಿಸಿಕೊಳ್ಳದಿದ್ದರೆ ಮನುಕುಲ ಸಂಕಷ್ಟಕ್ಕೀಡಾಗುವುದು ಶತಸಿದ್ಧ. ಕೇಂದ್ರ ಸರ್ಕಾರ ಜನರಲ್ಲಿ ಜೀವವೈವಿದ್ಯತೆಯ ಬಗ್ಗೆ ಜಾಗೃತಿ ಮೂಡಿಸಿ ರಕ್ಷಿಸಿಕೊಂಡುಬರುವ ಸಲುವಾಗಿ ಜೀವವೈವಿದ್ಯ ಕಾನೂನನ್ನು ಜಾರಿಗೆ ತಂದಿದೆ. ಇದನ್ನು ಸಂಬಂಧಿಸಿದ ಇಲಾಖೆಗಳು ಆಡಳಿತದ ಕೊನೆಯ ಹಂತವಾದ ಗ್ರಾಮಪಂಚಾಯ್ತಿ ಮಟ್ಟಗಳಲ್ಲೂ ಜೀವವೈವಿಧ್ಯ ಸಮಿತಿಗಳನ್ನು ರಚಿಸುವ ಮೂಲಕ ಜನರ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಮೂರು ದಿನಗಳ ಕಾಲ ತಾವು ತಿರುಗಾಡಿ ಬಂದ ಅರಣ್ಯ ಪ್ರದೇಶ, ಸಾಧಕ ಕೃಷಿಕ ಪ್ರಕಾಶಮಂಚಾಲೆ, ಆನೆಗುಳಿ ಸುಬ್ರಾವ್, ನಾಗೇಂದ್ರಸಾಗರ್ ಅವರ ಸಾಧನೆಗಳನ್ನು ಶ್ಲಾಘಿಸಿದರು.
ಇಒ ಪುಷ್ಪಾ ಆರ್. ಕಮ್ಮಾರ್ ಸ್ವಾಗತಿಸಿದರು. ರಾಜ್ಯ ಜೀವವೈವಿಧ್ಯ ಮಂಡಳಿಯ ಸದಸ್ಯ ಕೆ.ವೆಂಕಟೇಶ್, ಎಕ್ಸ್ಪರ್ಟ್ ಕಮಿಟಿಯ ಶ್ರೀಪಾದ ಬಿಚ್ಚುಗತ್ತಿ, ತಾಪಂ, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post