ಕಲ್ಪ ಮೀಡಿಯಾ ಹೌಸ್ | ಸೊರಬ |
ನಮ್ಮಲ್ಲಿರುವ ವಿದ್ಯೆ, ಜ್ಞಾನ ಹಾಗೂ ಸಂಪತ್ತನ್ನು ಅಗತ್ಯವಿರುವವರೊಂದಿಗೆ ಹಂಚಿಕೊಳ್ಳುವ ಮೂಲಕ ಪರರ ಬದುಕಿನಲ್ಲಿ ಸಂತೋಷ ಕಾಣುವುದೇ ಮನುಷ್ಯನ ಶ್ರೇಷ್ಠ ಗುಣ” ಎಂದು ವಂದನೀಯ ಸ್ವಾಮಿ ರಾಬರ್ಟ್ ಡಿ ಮೆಲ್ಲೊ ಹೇಳಿದರು.
ಹಳೆಸೊರಬದ ಸ್ನೇಹ ಜ್ಯೋತಿ ಸಮಾಜ ಸೇವಾ ಕೇಂದ್ರದ ವತಿಯಿಂದ ವಿದ್ಯಾರ್ಥಿಗಳು ಹಾಗೂ ಪಾಲಕರಿಗಾಗಿ ಆಯೋಜಿಸಲಾಗಿದ್ದ ಸೌಹಾರ್ದ ಕ್ರಿಸ್‌ಮಸ್ ಸಮ್ಮಿಲನ–2025 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳಲ್ಲಿ ಪರಸ್ಪರ ಹಂಚಿಕೊಳ್ಳುವ ಮನೋಭಾವ, ಮಾನವೀಯ ಮೌಲ್ಯಗಳು ಹಾಗೂ ಸೌಹಾರ್ದತೆಯನ್ನು ಬೆಳೆಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜುಮ್ಮಾ ಮಸೀದಿಯ ಮೌಲ್ವಿ ಮೊಹಮ್ಮದ್ ರಫೀಕ್ ಮದನಿ ಮಾತನಾಡಿ, ಸಮಾಜ ಸೇವಾ ಹಾಗೂ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಸೌಹಾರ್ದತೆ, ಸಹಬಾಳ್ವೆ, ಸಹಿಷ್ಣುತೆ ಮತ್ತು ಭಾವೈಕ್ಯತೆಯನ್ನು ನಿರಂತರವಾಗಿ ಬೆಳೆಸಬೇಕು. ಸಮೃದ್ಧ ಭಾರತ ನಿರ್ಮಾಣಕ್ಕೆ ಈ ಮೌಲ್ಯಗಳು ಅವಶ್ಯಕವೆಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ನಿವೃತ್ತ ಬಿಎಸ್‌ಎನ್‌ಎಲ್ ಮ್ಯಾನೇಜರ್ ಶ್ರೀ ವೇಣುಗೋಪಾಲರು ಭಗವದ್ಗೀತೆಯ ಸಾರಾಂಶವನ್ನು ವಿವರಿಸಿದರು. ವಿದ್ಯಾರ್ಥಿಗಳಾದ ಕುಮಾರಿ ಸ್ವಾತಿ ಶೆಟ್ಟಿ, ಕುಮಾರಿ ಜೆನೆಲಿಯಾ ಹಾಗೂ ಕುಮಾರ ತಮೀಮ್ ಅವರು ಭಗವದ್ಗೀತೆ, ಬೈಬಲ್ ಹಾಗೂ ಕುರಾನ್ ಪವಿತ್ರ ಗ್ರಂಥಗಳನ್ನು ಮೆರವಣಿಗೆಯಲ್ಲಿ ತರಲಾಗಿ, ಗಣ್ಯರು ಮೂರು ಗ್ರಂಥಗಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ವಿದ್ಯಾರ್ಥಿಗಳು ಪ್ರಮುಖ ಶ್ಲೋಕಗಳನ್ನು ಪಠಿಸಿದರು.
ಕಾರ್ಯಕ್ರಮದಲ್ಲಿ ವಂದನೀಯ ಭಗಿನಿ ಹರ್ಷಿತಾ ಮೇಲ್ವಿಚಾರಕರು ಮರಿಯ ಬೊಡ್ವಿಗ್ ಕಾನ್ವೆಂಟ್, ವಂದನೀಯ ಭಗಿನಿ ಜೊಯೆಲ್ ನಿರ್ದೇಶಕಿ ಸ್ನೇಹ ಜ್ಯೋತಿ ಸಮಾಜ ಸೇವಾ ಸಂಸ್ಥೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಕುಪ್ಪಗಡ್ಡೆ, ಮುಟುಗುಪ್ಪೆ, ಉರಗನಹಳ್ಳಿ ಹಾಗೂ ಹುಲತಿಕೊಪ್ಪ ಗ್ರಾಮದ ವಿದ್ಯಾರ್ಥಿಗಳು ನೃತ್ಯಗಳ ಮೂಲಕ ಮನೋರಂಜನೆ ನೀಡಿದರು.
ಕ್ರಿಸ್‌ಮಸ್ ರೂಪಕದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಂಜಪ್ಪ ಎಂ.ಕೆ ಸ್ವಾಗತಿಸಿದರು. ವಂದನೀಯ ಭಗಿನಿ ಜೊಯೆಲ್ ವಂದಿಸಿದರು. ಸುಬ್ರಯ ಹಳ್ಳಾರ್ ನಿರೂಪಿಸಿದರು. ಸುಮಾರು 600ಕ್ಕೂ ಹೆಚ್ಚು ಪಾಲಕರು ಭಾಗವಹಿಸಿ ಸೌಹಾರ್ದ ಕ್ರಿಸ್‌ಮಸ್ ಸಂದೇಶ ಪಡೆದುಕೊಂಡರು. ಊಟದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















