ಕಲ್ಪ ಮೀಡಿಯಾ ಹೌಸ್ | ಸೊರಬ |
ಜೀವನದಲ್ಲಿ ಕೇವಲ ಸಂಪತ್ತನ್ನು ಕ್ರೂಢಿಕರಿಸುವುದಷ್ಟೆ ಅಲ್ಲ, ನಾವು ಗಳಿಸಿದ ಸಂಪತ್ತಿನ ಕೆಲ ಭಾಗವನ್ನು ಅಶಕ್ತರಿಗೆ, ಸಮಾಜದ ಸ್ವಾಸ್ತ್ಯಕ್ಕಾಗಿ ವಿನಿಯೋಗಿಸಬೇಕು. ಜನರಲ್ಲಿ ಮಾನವೀಯತೆಯ ಪರೀಕ್ಷಿಸಲು ಬುದ್ದಿಮಾಂದ್ಯ ಮಕ್ಕಳನ್ನು ಭಗವಂತ ಸೃಷ್ಟಿಸುತ್ತಾನೆ. ಅಂತಹ ಮಕ್ಕಳಲ್ಲಿ ದೇವರನ್ನು ಕಾಣುವ ಮೂಲಕ ಕೈಲಾದ ಸಹಾಯ ಮಾಡುವ ಮನೋಭಾವ ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎನ್. ಕುಮಾರ್ ಹೇಳಿದರು.
ಪಟ್ಟಣದ ಹೊಸಪೇಟೆ ಬಡಾವಣೆಯ ನವಚೇತನ ಬುದ್ದಿಮಾಂದ್ಯ ಮಕ್ಕಳ ವಸತಿಯುತ ಶಾಲೆಯಲ್ಲಿ ಆರ್‌ಎಲ್‌ಡಿಎವಿ ಸೇವಾ ಸಂಘದ ವತಿಯಿಂದ ಸೋಮವಾರ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚಣೆ ಹಾಗೂ ಪತ್ರಕರ್ತೆ ದಿ. ದೀಪ್ತಿ ಎನ್. ಕುಮಾರ್ ಅವರ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬದವರು ಇಲ್ಲ ಎಂಬ ನೋವನ್ನು ಈ ಮಕ್ಕಳನ್ನು ನೋಡಿ ಮರೆಯುತ್ತಿದ್ದೇನೆ ಎಂದು ಭಾವುಕರಾದ ಅವರು, ಇಂತವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕೆಲಸದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಗೌಡ, ವಿಕಲಚೇತನ ಮಕ್ಕಳನ್ನು ಸಹಜರನ್ನಾಗಿಸುವುದು ಮಹತ್ವದ ಕೆಲಸ. ರಾಜ್ಯ ಸರ್ಕಾರ ತಾಲೂಕಿಗೊಂದು ವಿಕಲಚೇತನ ಮಕ್ಕಳ ಶಾಲೆಯನ್ನು ತೆರೆಯಬೇಕು ಅಥವಾ ಇಂತಹ ಸಂಸ್ಥೆಗಳಿಗೆ ಆರ್ಥಿಕವಾಗಿ ನೆರವನ್ನು ನೀಡಬೇಕು ಎಂದರು.
ಸೊರಬ ವಿಧಾನಸಭಾ ಕ್ಷೇತ್ರದ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಬಾಸೂರು ಚಂದ್ರೇಗೌಡ ಮಾತನಾಡಿ, ಜೀವನ ಸುಗಮವಾಗಿ ಸಾಗಬೇಕಾದರೆ ಪ್ರಾಮಾಣಿಕವಾಗಿ ದುಡಿಯಬೇಕು. ದುಡಿದ ಹಣದಲ್ಲಿ ಇಂತಹ ಮಕ್ಕಳಿಗೆ ಸಹಾಯ ಮಾಡುವುದು ಮತ್ತು ಸಮಾಜದ ಸತ್ಕಾರ್ಯಗಳಿಗೆ ವಿನಿಯೋಗಿಸುವ ಮನೋಭಾವ ಬೆಳೆಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದ ಅವರು ಮತ್ತು ಹಾವೇರಿ ಬಸಣ್ಣ ಶಾಲೆಗೆ ಹನ್ನೊಂದು ಸಾವಿರದ ಐದು ನೂರು ರೂ., ದೇಣಿಗೆ ನೀಡಿದರು.
ಕಾರ್ಯಕ್ರಮದಲ್ಲಿ ಚಿತ್ರ ನಟ ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಆರ್‌ಎಲ್‌ಡಿಎವಿ ಸೇವಾ ಸಂಘದ ಕಾರ್ಯದರ್ಶಿ ಗೋಪಾಲ್, ಜೆಡಿಎಸ್ ಆನವಟ್ಟಿ ಬ್ಲಾಕ್ ಅಧ್ಯಕ್ಷ ಶಿವಪ್ಪ ವಕೀಲ, ನಿವೃತ್ತ ಸೈನಿಕ ದಾನಪ್ಪ ನಾಯ್ಕ್, ಸಂಸ್ಥೆಯ ಶಿಕ್ಷಕರಾದ ಕೆ.ಬಿ. ಪುಟ್ಟರಾಜ, ಗಾಯತ್ರಿ ನಾಯ್ಕ್, ಎಸ್. ರವೀಂದ್ರ ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post